ಜಾಗತಿಕ ಮಟ್ಟದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದರೂ, ಭಾರತದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳದಂತೆ ಕೇಂದ್ರ ಸರ್ಕಾರ ಒಂದು ಭರ್ಜರಿ ಪ್ಲಾನ್ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಕಡಿತಗೊಳಿಸುವ ಮೂಲಕ ಬೆಲೆ ಏರಿಕೆಯ ಬಿಸಿಯಿಂದ ಗ್ರಾಹಕರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ.
ರಾಮನವಮಿ ದಿನದಂದು ನಡೆದ ಹೈವೋಲ್ಟೇಜ್ ಮೀಟಿಂಗ್!
ಈ ಮಹತ್ವದ ನಿರ್ಧಾರದ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಮೊನ್ನೆ ರಾಮನವಮಿ ಹಬ್ಬದ ದಿನ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಭೆ ಕರೆದಿದ್ದರು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಗಗನಕ್ಕೇರುತ್ತಿದೆ. ಇದರ ಪರಿಣಾಮ ಭಾರತದ ಮೇಲೆ ಆಗಬಾರದು ಎಂದು ಅಂದೇ ರಾತ್ರಿ ಹಣಕಾಸು ಮತ್ತು ಪೆಟ್ರೋಲಿಯಂ ಸಚಿವಾಲಯಗಳು ಒಟ್ಟಾಗಿ ಕುಳಿತು ಈ ನಿರ್ಧಾರ ಪ್ರಕಟಿಸಿವೆ.
ಸರ್ಕಾರ ಪ್ರಕಟಿಸಿರುವ ಹೊಸ ಬದಲಾವಣೆಗಳು ಹೀಗಿವೆ:
ಪೆಟ್ರೋಲ್: ಲೀಟರ್‌ಗೆ 3 ರೂಪಾಯಿ ಅಬಕಾರಿ ಸುಂಕ ಇಳಿಕೆ ಮಾಡಲಾಗಿದೆ.
ಡೀಸೆಲ್: ಡೀಸೆಲ್ ಮೇಲಿನ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ!
ವಿಮಾನ ಇಂಧನ (ATF): ಇದರ ರಫ್ತಿನ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗಿದೆ, ಇದರಿಂದ ದೇಶದ ಒಳಗಡೆ ಇಂಧನ ಕೊರತೆ ಉಂಟಾಗುವುದಿಲ್ಲ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ, ವಿದೇಶಗಳಲ್ಲಿ ಬೆಲೆ ಜಾಸ್ತಿಯಾದಾಗ ನಮ್ಮ ದೇಶದ ತೈಲ ಕಂಪನಿಗಳು ತೈಲ ಖರೀದಿಸಲು ಹಿಂದೇಟು ಹಾಕಬಾರದು. ಅದಕ್ಕಾಗಿಯೇ ಸರ್ಕಾರ ಅವರಿಗೆ ಬೆಂಬಲ ನೀಡುತ್ತಿದೆ. ಇದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಗ್ಯಾಸ್‌ಗೆ ಯಾವುದೇ ಕೊರತೆ ಉಂಟಾಗುವುದಿಲ್ಲ.
"ಲಾಕ್‌ಡೌನ್" ವದಂತಿಗಳಿಗೆ ಕಿವಿಗೊಡಬೇಡಿ!
ಇದೇ ವೇಳೆ ದೇಶದಲ್ಲಿ ಇಂಧನ ಕೊರತೆಯಿಂದಾಗಿ ಮತ್ತೆ 'ಲಾಕ್‌ಡೌನ್' ಮಾಡುತ್ತಾರೆ ಎಂಬ ವದಂತಿಗಳು ಹರಡಿದ್ದವು. ಈ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್, "ಯಾವುದೇ ಕಾರಣಕ್ಕೂ ಲಾಕ್‌ಡೌನ್ ಹೇರುವ ಉದ್ದೇಶ ಸರ್ಕಾರಕ್ಕಿಲ್ಲ. ಇವೆಲ್ಲ ಬರೀ ಆಧಾರರಹಿತ ವದಂತಿಗಳು. ರಾಜಕೀಯ ನಾಯಕರು ಇಂತಹ ಮಾತುಗಳನ್ನು ಆಡುವುದು ಬೇಸರದ ಸಂಗತಿ," ಎಂದು ಸ್ಪಷ್ಟಪಡಿಸಿದ್ದಾರೆ. ಕೋವಿಡ್ ಕಾಲದ ಲಾಕ್‌ಡೌನ್ ನೆನಪಿಸಿಕೊಂಡು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಪ್ರಮುಖ ಮಾರ್ಗವಾದ 'ಹಾರ್ಮೊಜ್ ಸಾಗರ ದ್ವಾರ'ದಲ್ಲಿ ಈಗ ಇರಾನ್ ನಿರ್ಬಂಧ ವಿಧಿಸಿದೆ. ಇದರಿಂದ ಪ್ರತಿದಿನ ಲಕ್ಷಾಂತರ ಬ್ಯಾರೆಲ್ ತೈಲ ಸಾಗಾಟಕ್ಕೆ ಅಡ್ಡಿಯಾಗಿದೆ. ಭಾರತವು ತನ್ನ ಒಟ್ಟು ಬಳಕೆಯ ಸುಮಾರು 12% ರಿಂದ 15% ತೈಲವನ್ನು ಇದೇ ಮಾರ್ಗದ ಮೂಲಕ ಪಡೆಯುತ್ತಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಜನ ಸಾಮಾನ್ಯರ ಮೇಲೆ ಹೊರೆ ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಏನೇ ಆದರೂ, ನಿಮ್ಮ ಗಾಡಿಯ ಪೆಟ್ರೋಲ್ ಹಾಕಿಸಲು ಅಥವಾ ಮನೆಯ ಗ್ಯಾಸ್ ಸಿಲಿಂಡರ್‌ಗೆ ಯಾವುದೇ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಗಟ್ಟಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.