AI ಅಶ್ಲೀಲ ಚಿತ್ರಗಳಿಗೆ ಬ್ರೇಕ್ – ಹೊಸ ಕಾನೂನು ಜಾರಿ!!

AI ತಂತ್ರಜ್ಞಾನ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ AI ಮೂಲಕ ರಚಿಸಲಾದ ಲೈಂಗಿಕ ದೌರ್ಜನ್ಯ ಚಿತ್ರಗಳು, ಒಪ್ಪಿಗೆಯಿಲ್ಲದ ಅಶ್ಲೀಲ ಕಂಟೆಂಟ್ ಮತ್ತು ನಕಲಿ ದಾಖಲೆಗಳು ಗಂಭೀರ ಅಪರಾಧಗಳಾಗಿ ಪರಿಗಣಿಸಲ್ಪಡುತ್ತವೆ. ಈ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ನಿಯಮಗಳನ್ನು ಅಧಿಕೃತವಾಗಿ ಜಾರಿಗೊಳಿಸಿದೆ.

ಸೋಷಿಯಲ್ ಮೀಡಿಯಾ ವೇದಿಕೆಗಳಿಗೆ ಎಚ್ಚರಿಕೆ – AI ಅಶ್ಲೀಲ ಚಿತ್ರಗಳನ್ನು ತೆಗೆದುಹಾಕದಿದ್ದರೆ ಶಿಕ್ಷೆ
ಸೋಷಿಯಲ್ ಮೀಡಿಯಾ ವೇದಿಕೆಗಳಿಗೆ ಎಚ್ಚರಿಕೆ – AI ಅಶ್ಲೀಲ ಚಿತ್ರಗಳನ್ನು ತೆಗೆದುಹಾಕದಿದ್ದರೆ ಶಿಕ್ಷೆ

ಹೊಸ ನಿಯಮಗಳ ಪ್ರಕಾರ, ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲಿನ ಶೋಷಣೆ, ಅಶ್ಲೀಲ ಚಿತ್ರಗಳು, ನಕಲಿ ದಾಖಲೆಗಳು ಅಥವಾ ವ್ಯಕ್ತಿಯನ್ನು ತಪ್ಪಾಗಿ ಚಿತ್ರಿಸುವ ಯಾವುದೇ AI-ರಚಿತ ಅಥವಾ ಸಂಶ್ಲೇಷಿತವಾಗಿ ರಚಿಸಲಾದ ಮಾಹಿತಿ (SGI) ಕಾನೂನುಬಾಹಿರವಾಗಿರುತ್ತದೆ. ಇಂತಹ ಕಂಟೆಂಟ್ ಅನ್ನು ರಚಿಸುವುದು, ಹಂಚಿಕೊಳ್ಳುವುದು ಅಥವಾ ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ.

ಇನ್ನು ಮುಂದೆ AI ಮೂಲಕ ತಯಾರಾದ ಯಾವುದೇ ವಿಷಯಕ್ಕೆ ಸ್ಪಷ್ಟವಾಗಿ “ಸಂಶ್ಲೇಷಿತವಾಗಿ ರಚಿಸಲಾಗಿದೆ” ಎಂಬ ಲೇಬಲ್ ಇರಬೇಕು. ಈ ಲೇಬಲ್ ವೀಕ್ಷಕರಿಗೆ ಸುಲಭವಾಗಿ ಕಾಣುವಂತಿರಬೇಕು. ಜೊತೆಗೆ ಶಾಶ್ವತ ಮೆಟಾಡೇಟಾ ಅಥವಾ ತಾಂತ್ರಿಕ ಗುರುತುಗಳನ್ನು ಹೊಂದಿರಬೇಕು. ಬಳಕೆದಾರರು ಈ ಗುರುತುಗಳನ್ನು ತೆಗೆದುಹಾಕಲು ಅಥವಾ ಮರೆಮಾಡಲು ಅವಕಾಶ ಇರುವುದಿಲ್ಲ. ಪ್ರತಿ AI-ರಚಿತ ವಿಷಯವೂ ಯಾವ ವೇದಿಕೆ ಅಥವಾ ಪರಿಕರದಿಂದ ತಯಾರಿಸಲಾಗಿದೆ ಎಂಬುದನ್ನು ಗುರುತಿಸುವ ಅನನ್ಯ ಗುರುತು ಹೊಂದಿರಬೇಕು. ಇದರಿಂದ ಜನರು AI ಕಂಟೆಂಟ್ ಅನ್ನು ಸುಲಭವಾಗಿ ಗುರುತಿಸಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

X, ಮೆಟಾ, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಕಾನೂನುಬಾಹಿರ AI ಕಂಟೆಂಟ್ ಕಂಡುಬಂದರೆ, ನಿಗದಿತ ಸಮಯದೊಳಗೆ ಅದನ್ನು ತೆಗೆದುಹಾಕಬೇಕು. ಇಲ್ಲವಾದರೆ ಐಟಿ ಕಾಯ್ದೆಯ ರಕ್ಷಣೆ (Section 79) ಕಳೆದುಕೊಳ್ಳುವ ಸಾಧ್ಯತೆ ಇದೆ. ಸಾಮಾಜಿಕ ಮಾಧ್ಯಮ ಕಂಪನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಬಳಕೆದಾರರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆ ಎಚ್ಚರಿಕೆ ನೀಡಬೇಕು. ನಿಯಮ ಉಲ್ಲಂಘಿಸಿದರೆ ಖಾತೆ ಅಮಾನತು, ರದ್ದು ಅಥವಾ ದಂಡ ಹಾಗೂ ಜೈಲು ಶಿಕ್ಷೆಯೂ ಸಾಧ್ಯ.

ChatGPT, Gemini, Grok ಸೇರಿದಂತೆ AI ಪರಿಕರಗಳನ್ನು ನೀಡುವ ಕಂಪನಿಗಳು, AI ದುರುಪಯೋಗವು ಕ್ರಿಮಿನಲ್ ಕಾನೂನು, ಮಕ್ಕಳ ರಕ್ಷಣಾ ಕಾಯ್ದೆ, ಚುನಾವಣಾ ಕಾನೂನುಗಳ ಅಡಿಯಲ್ಲಿ ಶಿಕ್ಷೆಗೆ ಕಾರಣವಾಗಬಹುದು ಎಂದು ಬಳಕೆದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ಇತ್ತೀಚೆಗೆ ಗ್ರೋಕ್ ವಿವಾದದ ನಂತರ ಸರ್ಕಾರ ಕೈಗೊಂಡ ಈ ಕ್ರಮ, AI ದುರುಪಯೋಗಕ್ಕೆ ದೊಡ್ಡ ಬ್ರೇಕ್ ಎಂದು ಪರಿಗಣಿಸಲಾಗಿದೆ.

Latest News