Mar 23, 2026 Languages : ಕನ್ನಡ | English

ಗ್ಯಾಸ್ ಸಿಲಿಂಡರ್ ತೂಕದಲ್ಲಿ ಭಾರಿ ಇಳಿಕೆ: 14.2 ಕೆಜಿ ಬದಲಿಗೆ ಇನ್ಮುಂದೆ 10 ಕೆಜಿ ಮಾತ್ರ ಯಾಕೆ ಗೊತ್ತಾ?

ದೇಶದ ಅಡುಗೆ ಮನೆಗಳಿಗೆ ಸದ್ಯದಲ್ಲೇ ಹೊಸ ಮಾದರಿಯ ಗ್ಯಾಸ್ ಸಿಲಿಂಡರ್ ಪೂರೈಕೆಯಾಗುವ ಸಾಧ್ಯತೆ ಇದೆ. ಸದ್ಯ ನಾವು ಬಳಸುತ್ತಿರುವ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬದಲಿಗೆ, ಕೇವಲ 10 ಕೆಜಿ ಗ್ಯಾಸ್ ಇರುವ ಸಿಲಿಂಡರ್‌ಗಳನ್ನು ವಿತರಿಸಲು ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಆಲೋಚಿಸುತ್ತಿವೆ. ಈ ಬದಲಾವಣೆಗೆ ಮುಖ್ಯ ಕಾರಣ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಗ್ಯಾಸ್ ಪೂರೈಕೆಯ ವ್ಯತ್ಯಯ.

ಅಡುಗೆ ಮನೆಗೆ ಬೆಲೆ ಏರಿಕೆ ಬೆನ್ನಲ್ಲೇ 'ತೂಕ'ದ ಶಾಕ್
ಅಡುಗೆ ಮನೆಗೆ ಬೆಲೆ ಏರಿಕೆ ಬೆನ್ನಲ್ಲೇ 'ತೂಕ'ದ ಶಾಕ್

ಪಶ್ಚಿಮ ಏಷ್ಯಾ (Middle East) ಭಾಗದಲ್ಲಿ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸ್ ಪೂರೈಕೆಯಲ್ಲಿ ಭಾರಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಭಾರತಕ್ಕೆ ಬೇಕಾದ ಎಲ್‌ಪಿಜಿಯಲ್ಲಿ ಶೇಕಡಾ 60 ರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಶೇಕಡಾ 80 ರಷ್ಟು ಗ್ಯಾಸ್ 'ಹಾರ್ಮುಜ್ ಜಲಸಂಧಿ' ಮಾರ್ಗದ ಮೂಲಕವೇ ಬರಬೇಕು. ಯುದ್ಧದ ಕಾರಣದಿಂದ ಈ ಮಾರ್ಗದಲ್ಲಿ ಸರಬರಾಜು ಕಷ್ಟವಾಗುತ್ತಿದೆ. ಹೀಗಾಗಿ, ಲಭ್ಯವಿರುವ ಸೀಮಿತ ಗ್ಯಾಸ್ ಅನ್ನು ಎಲ್ಲರಿಗೂ ತಲುಪಿಸಲು ಸರ್ಕಾರ ಈ "ಕಡಿಮೆ ತೂಕ, ಹೆಚ್ಚು ಮನೆಗಳು" ಎಂಬ ತಂತ್ರವನ್ನು ರೂಪಿಸಿದೆ.

ಸಿಲಿಂಡರ್ ಬದಲಾಗಲ್ಲ, ಗ್ಯಾಸ್ ಮಾತ್ರ ಕಡಿಮೆ!

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು; ನಿಮ್ಮ ಮನೆಯಲ್ಲಿರುವ ಗ್ಯಾಸ್ ಸಿಲಿಂಡರ್‌ನ ಗಾತ್ರವೇನೂ ಬದಲಾಗುವುದಿಲ್ಲ. ಈಗ ಇರುವ 14.2 ಕೆಜಿ ತೂಕದ ದೊಡ್ಡ ಸಿಲಿಂಡರ್‌ನಲ್ಲೇ ಕೇವಲ 10 ಕೆಜಿ ಗ್ಯಾಸ್ ಅನ್ನು ತುಂಬಿ ವಿತರಿಸಲಾಗುತ್ತದೆ. ಈ ಸಿಲಿಂಡರ್‌ಗಳ ಮೇಲೆ ಹೊಸದಾದ ಲೇಬಲ್ ಇರಲಿದ್ದು, ಇದು 10 ಕೆಜಿಯ ಸಿಲಿಂಡರ್ ಎಂದು ಗುರುತಿಸಲು ಸುಲಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಯುದ್ಧದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈ ಬಿಕ್ಕಟ್ಟನ್ನು ಎದುರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಒಂದು ಸಣ್ಣ ಕುಟುಂಬಕ್ಕೆ 14.2 ಕೆಜಿಯ ಸಿಲಿಂಡರ್ ಸುಮಾರು ಎರಡರಿಂದ ಮೂರು ತಿಂಗಳವರೆಗೆ ಬರುತ್ತದೆ. ಆದರೆ, 10 ಕೆಜಿಯ ಸಿಲಿಂಡರ್ ಆದರೆ ಅದು ಒಂದರಿಂದ ಒಂದೂವರೆ ತಿಂಗಳಿಗೆ ಖಾಲಿಯಾಗಬಹುದು. ಇದರಿಂದ ಜನರು ಪದೇ ಪದೇ ಸಿಲಿಂಡರ್ ಬುಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಆದರೆ, ಗ್ಯಾಸ್ ಸಿಗುವುದೇ ನಿಂತುಹೋಗುವ ಬದಲು, ಸ್ವಲ್ಪ ಕಡಿಮೆ ಪ್ರಮಾಣದಲ್ಲಾದರೂ ಎಲ್ಲರಿಗೂ ಸಿಗಲಿ ಎಂಬುದು ಸರ್ಕಾರದ ಆಶಯವಾಗಿದೆ.

ಗ್ಯಾಸ್ ಪ್ರಮಾಣ ಕಡಿಮೆಯಾದಾಗ ಸಹಜವಾಗಿ ಸಿಲಿಂಡರ್ ಬೆಲೆಯೂ ಕೂಡ ಇಳಿಕೆಯಾಗುವ ನಿರೀಕ್ಷೆ ಇದೆ. 14.2 ಕೆಜಿಗೆ ಇರುವ ದರಕ್ಕಿಂತ 10 ಕೆಜಿಗೆ ಕಡಿಮೆ ದರ ನಿಗದಿಪಡಿಸುವ ಸಾಧ್ಯತೆ ಇರುವುದರಿಂದ, ತಕ್ಷಣದ ಹಣಕಾಸಿನ ಹೊರೆ ಸ್ವಲ್ಪ ಕಡಿಮೆಯಾಗಬಹುದು. ಆದರೆ ಇದರ ಅಧಿಕೃತ ದರ ಪಟ್ಟಿ ಇನ್ನೂ ಹೊರಬಿದ್ದಿಲ್ಲ.

ಅಂತರರಾಷ್ಟ್ರೀಯ ಬಿಕ್ಕಟ್ಟಿನಿಂದಾಗಿ ಭಾರತದ ಅಡುಗೆ ಮನೆಗಳ ಮೇಲೆ ಪ್ರಭಾವ ಬೀರುತ್ತಿದೆ. ಯುದ್ಧದ ಪರಿಸ್ಥಿತಿ ತಿಳಿಯಾಗುವವರೆಗೂ ಈ ತಾತ್ಕಾಲಿಕ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ.

Latest News