Apr 2, 2026 Languages : ಕನ್ನಡ | English

ಪಂಚಾಯಿತಿಯಲ್ಲಿ ಕೆಲಸ ಆಗ್ತಿಲ್ವಾ? ಅಧಿಕಾರಿಗಳಿಗೆ 'ಬಿಸಿ' ಮುಟ್ಟಿಸೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್!

ನಿಮ್ಮ ಊರಲ್ಲಿ ರಸ್ತೆ ಗುಂಡಿ ಬಿದ್ದಿದೆಯಾ? ಚರಂಡಿ ನೀರೆಲ್ಲಾ ರಸ್ತೆಯಲ್ಲೇ ಹರಿಯುತ್ತಿದೆಯಾ? ಕುಡಿಯುವ ನೀರು ಕೇಳಿದ್ರೆ ಪಂಚಾಯಿತಿಯವರು ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತ ಸಬೂಬು ಹೇಳ್ತಿದ್ದಾರಾ? ಪಂಚಾಯಿತಿ ಸದಸ್ಯರಿಗೆ ಅಥವಾ ಪ್ರಸಿಡೆಂಟ್ಗೆ ಎಷ್ಟು ಸಲ ಹೇಳಿದ್ರೂ ಕ್ಯಾರೇ ಅಂದಿಲ್ವಾ?

ಗ್ರಾಮ ಪಂಚಾಯಿತಿಗೆ ದೂರು ಪತ್ರ ಬರೆಯುವ ಸರಿಯಾದ ವಿಧಾನ;
ಗ್ರಾಮ ಪಂಚಾಯಿತಿಗೆ ದೂರು ಪತ್ರ ಬರೆಯುವ ಸರಿಯಾದ ವಿಧಾನ;

ನೋಡಿ ಫ್ರೆಂಡ್ಸ್, ನಾವು ಬಾಯಿ ಮಾತಲ್ಲಿ ನೂರು ಸಲ ಹೇಳಿದ್ರೂ ಈ ಅಧಿಕಾರಿಗಳು ಕೇಳಿಸಿಕೊಳ್ಳಲ್ಲ. ಸರ್ಕಾರಿ ಕೆಲಸಗಳಲ್ಲಿ "ಬಾಯಿ ಮಾತಿಗಿಂತ ಬರವಣಿಗೆಗೆ ಬೆಲೆ ಜಾಸ್ತಿ". ನಿಮ್ಮ ಊರು ಉದ್ದಾರ ಆಗಬೇಕು ಅಂದ್ರೆ ನೀವು ಸುಮ್ಮನೆ ಕೂರಬಾರದು. ಅದಕ್ಕೆ ಸರಿಯಾದ ದಾರಿಯಲ್ಲಿ ದೂರು ಕೊಡಬೇಕು. ಅದು ಹೇಗೆ? ಯಾರಿಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.

ಹಂತ 1: ಮೊದಲು ಪತ್ರ ಬರೆಯಿರಿ (ಖಡಕ್ ಆಗಿರಲಿ!)

ಯಾರೋ ಬರ್ತಾರೆ, ಕೆಲಸ ಮಾಡಿಕೊಡ್ತಾರೆ ಅಂತ ಕಾಯಬೇಡಿ. ನಿಮ್ಮ ವಾರ್ಡ್‌ನ ಸಮಸ್ಯೆ ಏನಿದೆ ಅಂತ ಒಂದು ಪೇಪರ್‌ನಲ್ಲಿ ನೀಟಾಗಿ ಬರೆಯಿರಿ. ಸಾಧ್ಯವಾದ್ರೆ ಆ ಹಾಳಾದ ರಸ್ತೆ ಅಥವಾ ಚರಂಡಿಯ ಒಂದು ಫೋಟೋ ತಗೆದು ಪತ್ರಕ್ಕೆ ಲಗತ್ತಿಸಿ. ಈ ಪತ್ರವನ್ನು ನಿಮ್ಮ ಗ್ರಾಮ ಪಂಚಾಯಿತಿಯ ಪಿಡಿಒ (PDO - ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಅವರಿಗೆ ಕೊಡಿ.

ನೆನಪಿಡಿ: ಪತ್ರ ಕೊಡುವಾಗ ಅದರ ಒಂದು ಜೆರಾಕ್ಸ್ ಮಾಡಿಸಿಕೊಳ್ಳಿ. ಒರಿಜಿನಲ್ ಪತ್ರ ಅವರಿಗೆ ಕೊಟ್ಟು, ಜೆರಾಕ್ಸ್ ಮೇಲೆ ಪಂಚಾಯಿತಿಯವರ ಹತ್ತಿರ "ಸೀಲು ಮತ್ತು ಸಹಿ" ಹಾಕಿಸಿಕೊಳ್ಳಿ. ಇದು ಮುಂದೆ ಅವರು ಕೆಲಸ ಮಾಡದಿದ್ರೆ ಸಾಕ್ಷಿಯಾಗಿ ಬೇಕಾಗುತ್ತೆ.

ಹಂತ 2: ಪಿಡಿಒ ಕೇಳದಿದ್ರೆ 'ತಾಲೂಕು' ಕಚೇರಿಗೆ ಹೋಗಿ

ನೀವು ಲೆಟರ್ ಕೊಟ್ಟು 15 ದಿನ ಆದ್ರೂ ಪಿಡಿಒ ಸಾಹೇಬ್ರು ಕಣ್ಣೆತ್ತಿ ನೋಡಿಲ್ವಾ? ಹಾಗಾದ್ರೆ ತಕ್ಷಣ ಆ ಪತ್ರದ ಕಾಪಿ ತಗೊಂಡು ತಾಲೂಕು ಪಂಚಾಯಿತಿಗೆ ಹೋಗಿ. ಅಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿ (EO - Executive Officer) ಅವರಿಗೆ ದೂರು ನೀಡಿ. "ನೋಡಿ ಸಾರ್, ನಮ್ಮ ಊರಲ್ಲಿ ಇಷ್ಟು ಸಮಸ್ಯೆಯಿದೆ, ಪಂಚಾಯಿತಿಗೆ ಲೆಟರ್ ಕೊಟ್ಟಿದ್ರೂ ಯಾರೂ ಕೇಳ್ತಿಲ್ಲ" ಅಂತ ಹೇಳಿ. ಅಲ್ಲಿಂದ ಕೆಳಗಿನ ಅಧಿಕಾರಿಗಳಿಗೆ ಖಂಡಿತಾ ಚಾಟಿ ಬೀಸುತ್ತಾರೆ.

ಹಂತ 3: ಅಲ್ಲಿಯೂ ನ್ಯಾಯ ಸಿಗದಿದ್ರೆ 'ಜಿಲ್ಲಾ' ಮಟ್ಟಕ್ಕೆ!

ತಾಲೂಕಿನಲ್ಲೂ ಕೆಲಸ ಆಗಲಿಲ್ಲ ಅಂದ್ರೆ, ಧೃತಿಗೆಡಬೇಡಿ. ನೇರವಾಗಿ ಜಿಲ್ಲಾ ಪಂಚಾಯಿತಿಯ ಸಿಇಒ (CEO) ಅವರ ಬಳಿ ಹೋಗಿ ದೂರು ನೀಡಿ. ಜಿಲ್ಲಾ ಮಟ್ಟದ ಅಧಿಕಾರಿಗಳು ಇಂತಹ ದೂರುಗಳನ್ನು ಗಂಭೀರವಾಗಿ ತಗೊಳ್ತಾರೆ. ಇಲ್ಲಿಗೆ ಬರೋಷ್ಟರಲ್ಲಿ ನಿಮ್ಮ ಊರಿನ ರಸ್ತೆ, ಚರಂಡಿ ಕೆಲಸ ಶುರುವಾಗೋದು ಪಕ್ಕಾ. 

ಹಂತ 4: ಲಂಚ ಕೇಳಿದ್ರೆ ನೇರ 'ಲೋಕಾಯುಕ್ತ'!

ನೋಡಿ, ಪಂಚಾಯಿತಿಯಲ್ಲಿ ಯಾರಾದರೂ ನಿಮ್ಮ ಕೆಲಸ ಮಾಡಿಕೊಡಲು ದುಡ್ಡು ಕೇಳಿದ್ರೆ ಅಥವಾ ಲಂಚ ಕೇಳಿದ್ರೆ ಒಂದು ರೂಪಾಯಿನೂ ಕೊಡಬೇಡಿ. ನೇರವಾಗಿ ಲೋಕಾಯುಕ್ತರಿಗೆ ದೂರು ಕೊಡಿ. ನಿಮ್ಮ ಹಕ್ಕಿನ ಕೆಲಸಕ್ಕೆ ಲಂಚ ಕೊಡೋ ಅಗತ್ಯವೇ ಇಲ್ಲ.

ಪಂಚಾಯಿತಿಗೆ ದೂರು ಪತ್ರ ಬರೆಯೋದು ಹೇಗೆ? (ಮಾದರಿ ಇಲ್ಲಿದೆ)

ಇಂದ,

ನಿಮ್ಮ ಹೆಸರು ವಾರ್ಡ್ ನಂಬರ್, ನಿಮ್ಮ ಊರಿನ ಹೆಸರು, ತಾಲೂಕು, ಜಿಲ್ಲೆ. ದಿನಾಂಕ: 02-04-2026

ಗೆ,

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO), ನಿಮ್ಮ ಗ್ರಾಮ ಪಂಚಾಯಿತಿ ಹೆಸರು, ತಾಲೂಕು, ಜಿಲ್ಲೆ.

ವಿಷಯ: ನಮ್ಮ ವಾರ್ಡ್‌ನ ರಸ್ತೆ ಮತ್ತು ಚರಂಡಿ ಸಮಸ್ಯೆ ಬಗೆಹರಿಸುವಂತೆ ಕೋರಿ ದೂರು.

ಮಾನ್ಯರೇ, ನಾವು ನಿಮ್ಮ ಪಂಚಾಯಿತಿಯ ವಾರ್ಡ್ ನಂಬರ್ (ಇಲ್ಲಿ ನಿಮ್ಮ ವಾರ್ಡ್ ನಂಬರ್ ಹಾಕಿ) ನಿವಾಸಿಗಳು. ಕಳೆದ ಹಲವು ತಿಂಗಳಿಂದ ನಮ್ಮ ರಸ್ತೆಗಳು ಪೂರ್ತಿ ಗುಂಡಿ ಬಿದ್ದಿವೆ. ಮಳೆ ಬಂದ್ರೆ ಓಡಾಡೋಕೆ ಆಗಲ್ಲ. ಚರಂಡಿ ಕ್ಲೀನ್ ಇಲ್ಲದೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕುಡಿಯುವ ನೀರು ಕೂಡ ಸರಿಯಾಗಿ ಬರ್ತಿಲ್ಲ.

ಈ ಬಗ್ಗೆ ಈಗಾಗಲೇ ಸದಸ್ಯರಿಗೆ ಹೇಳಿದ್ರೂ ಪ್ರಯೋಜನವಾಗಿಲ್ಲ. ಹಾಗಾಗಿ ತಾವು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಬೇಕು ಮತ್ತು ಆದಷ್ಟು ಬೇಗ ಈ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು. ಒಂದು ವೇಳೆ ಈ ಪತ್ರ ಕೊಟ್ಟ 15 ದಿನದಲ್ಲಿ ಕೆಲಸ ಆಗದಿದ್ರೆ, ನಾವು ತಾಲೂಕು ಪಂಚಾಯಿತಿಗೆ ದೂರು ಕೊಡಬೇಕಾಗುತ್ತದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.

ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ, (ಇಲ್ಲಿ ನಿಮ್ಮ ಮತ್ತು ಊರಿನ ಜನರ ಸಹಿ ಇರಲಿ)

ನಮ್ಮ ಲಾಸ್ಟ್ ಟಿಪ್ಸ್:

  • ಒಬ್ಬರೇ ಹೋಗಬೇಡಿ: ದೂರು ಕೊಡಲು ಹೋಗುವಾಗ ಊರಿನ 10-15 ಜನರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ. ಗುಂಪಾಗಿ ಹೋದರೆ ಅಧಿಕಾರಿಗಳ ಮೇಲೆ ಭಯ ಮತ್ತು ಒತ್ತಡ ಎರಡೂ ಇರುತ್ತೆ.
  • ಸಾಕ್ಷಿ ಇಟ್ಟುಕೊಳ್ಳಿ: ನೀವು ಕೊಟ್ಟ ಪತ್ರದ ಮೇಲೆ ಸೀಲು ಹಾಕಿಸಿಕೊಂಡ ಜೆರಾಕ್ಸ್ ಕಾಪಿಯನ್ನು ಕಳೆದುಕೊಳ್ಳಬೇಡಿ. ಅದೇ ನಿಮ್ಮ ಮುಂದಿನ ಹೋರಾಟಕ್ಕೆ ಆಯುಧ.

Latest News