Apr 27, 2026 Languages : ಕನ್ನಡ | English

ವಿಚ್ಛೇದನಕ್ಕಾಗಿ ಪತ್ನಿಯ ಖತರ್ನಾಕ್ ಪ್ಲಾನ್ - ಗಂಡನ ತಂಗಿಯನ್ನೇ 'ಸವತಿ' ಎಂದು ಬಿಂಬಿಸಿ ಮೋಸ!!

ವಿಚ್ಛೇದನ ಪಡೆಯಲು ಮಹಿಳೆಯೊಬ್ಬಳು ಅದೆಂತಹುದೇ ಪ್ಲಾನ್ ಮಾಡಿದ್ದಾಳೆ ಅಂದ್ರೆ, ಸ್ವತಃ ಕೋರ್ಟ್ ಕೂಡ ಆಕೆಯ ಮಾತಿಗೆ ಮರುಳಾಗಿದೆ. ತನ್ನ ಗಂಡನ ಸ್ವಂತ ತಂಗಿಯನ್ನೇ ‘ಎರಡನೇ ಹೆಂಡತಿ’ ಎಂದು ಬಿಂಬಿಸಿ, ಸುಳ್ಳು ಸಾಕ್ಷ್ಯ ನೀಡಿ ಡಿವೋರ್ಸ್ ಪಡೆದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಈ ವಿಚಾರ ಈಗ ಹೈಕೋರ್ಟ್ ಮೆಟ್ಟಿಲೇರಿದ್ದು, ಇಡೀ ರಾಜ್ಯವೇ ಈಕೆಯ ‘ಐಡಿಯಾ’ ನೋಡಿ ದಂಗಾಗಿದೆ.

ಒಂದು ಫೋಟೋ, ಒಂದು ಸುಳ್ಳು, ಸಿಕ್ಕೇಬಿಡ್ತು ಡಿವೋರ್ಸ್ | Photo Credit: AI
ಒಂದು ಫೋಟೋ, ಒಂದು ಸುಳ್ಳು, ಸಿಕ್ಕೇಬಿಡ್ತು ಡಿವೋರ್ಸ್ | Photo Credit: AI

ಸಂಸಾರದಲ್ಲಿ ಬಿರುಕು ಮೂಡಿದ್ದು ಯಾಕೆ?
ಕಥೆ ಶುರುವಾಗಿದ್ದು 1998ರಲ್ಲಿ. ಈ ದಂಪತಿಗಳು ವಿವಾಹವಾದಾಗ ಎಲ್ಲವೂ ಚೆನ್ನಾಗಿತ್ತು. ಪತಿ ಒಂದು ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಅವರು ಹೆಚ್ಚಾಗಿ ಪ್ರವಾಸ ಮಾಡಬೇಕಿತ್ತು ಮತ್ತು ಮನೆಯಿಂದ ದೂರವಿರಬೇಕಿತ್ತು. ಇದೇ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಸಣ್ಣಪುಟ್ಟ ಜಗಳ ಶುರುವಾಗಿ, 2015ರ ವೇಳೆಗೆ ಪತ್ನಿ ಮನೆಯಿಂದ ದೂರ ಉಳಿಯಲು ಪ್ರಾರಂಭಿಸಿದಳು.

ಮಾಸ್ಟರ್ ಪ್ಲಾನ್ ಅಂದ್ರೆ ಇದು!

2021ರಲ್ಲಿ ಹೇಗಾದರೂ ಮಾಡಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲೇಬೇಕು ಎಂದು ನಿರ್ಧರಿಸಿದ ಪತ್ನಿ, ಒಂದು ವಿಚಿತ್ರ ತಂತ್ರ ಹೂಡಿದಳು. ಕೌಟುಂಬಿಕ ನ್ಯಾಯಾಲಯಕ್ಕೆ ಹೋದ ಆಕೆ, "ನನ್ನ ಗಂಡ ನನಗೆ ಮೋಸ ಮಾಡಿ ಎರಡನೇ ಮದುವೆಯಾಗಿದ್ದಾನೆ" ಎಂದು ಗಂಭೀರ ಆರೋಪ ಮಾಡಿದಳು. ಇದಕ್ಕೆ ಸಾಕ್ಷಿಯಾಗಿ ಒಂದು ಹಳೆಯ ಫೋಟೋವನ್ನೂ ಕೋರ್ಟ್‌ಗೆ ನೀಡಿದಳು.

ಆ ಫೋಟೋದಲ್ಲಿ ಪತಿಯ ಪಕ್ಕದಲ್ಲಿ ಒಬ್ಬಾಕೆ ನಿಂತಿದ್ದಳು. ನಿಜಕ್ಕೂ ಆಕೆ ಯಾರಪ್ಪ ಅಂದ್ರೆ, ಪತಿಯ ಸ್ವಂತ ತಂಗಿ! ಒಂದು ಫ್ಯಾಮಿಲಿ ಫಂಕ್ಷನ್‌ನಲ್ಲಿ ತೆಗೆದ ಫೋಟೋವನ್ನು ಬಳಸಿಕೊಂಡ ಪತ್ನಿ, ಆ ತಂಗಿಯನ್ನೇ ‘ಎರಡನೇ ಹೆಂಡತಿ’ ಎಂದು ಕೋರ್ಟ್ ಮುಂದೆ ಸುಳ್ಳು ಹೇಳಿದಳು.

ಕೋರ್ಟ್‌ನಿಂದ ಏಕಪಕ್ಷೀಯ ತೀರ್ಪು!

ಫ್ಯಾಮಿಲಿ ಕೋರ್ಟ್ ಕೂಡ ಆ ಫೋಟೋ ಮತ್ತು ಪತ್ನಿಯ ಮಾತನ್ನೇ ನಿಜವೆಂದು ನಂಬಿತು. ಪತಿಗೆ ಸರಿಯಾಗಿ ತನ್ನ ವಾದ ಮಂಡಿಸಲು ಅವಕಾಶ ನೀಡದ ಕೋರ್ಟ್, ಏಕಪಕ್ಷೀಯವಾಗಿ (Ex-parte) ವಿಚ್ಛೇದನ ಮಂಜೂರು ಮಾಡಿತು. ಏಪ್ರಿಲ್ ಮೊದಲ ವಾರದಲ್ಲಿ ಈ ಆರ್ಡರ್ ಕಾಪಿ ಪತಿಯ ಕೈ ಸೇರಿದಾಗ ಅವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು.

ತನ್ನ ತಂಗಿಯನ್ನೇ ಹೆಂಡತಿ ಎಂದು ಬಿಂಬಿಸಿ ಪತ್ನಿ ಮೋಸ ಮಾಡಿದ್ದಾಳೆ ಎಂದು ತಿಳಿದ ಪತಿ, ಈಗ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠಕ್ಕೆ ದೌಡಾಯಿಸಿದ್ದಾರೆ.

ಈಗ ಹೈಕೋರ್ಟ್ ಅಂಗಳದಲ್ಲಿ ಕೇಸ್
"ನನ್ನ ಪತ್ನಿ ಸುಳ್ಳು ಸಾಕ್ಷ್ಯ ನೀಡಿ ಕಾನೂನನ್ನು ದಾರಿ ತಪ್ಪಿಸಿದ್ದಾಳೆ. ನನ್ನ ಸ್ವಂತ ತಂಗಿಯನ್ನೇ ಸವತಿ ಎಂದು ಬಿಂಬಿಸಿ ಅವಮಾನ ಮಾಡಿದ್ದಾಳೆ. ಈ ಡಿವೋರ್ಸ್ ಆದೇಶವನ್ನು ರದ್ದುಗೊಳಿಸಿ" ಎಂದು ಪತಿ ಹೈಕೋರ್ಟ್‌ನಲ್ಲಿ ಮೊರೆ ಇಟ್ಟಿದ್ದಾರೆ. ಸದ್ಯ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಪತಿಯ ಪರವಾಗಿ ಸರ್ಕಾರಿ ವಕೀಲ ಧರ್ಮೇಂದ್ರ ಶರ್ಮಾ ವಾದ ಮಂಡಿಸುತ್ತಿದ್ದಾರೆ.

ನೆನಪಿರಲಿ ಸುಳ್ಳು ಸಾಕ್ಷ್ಯಕ್ಕೆ ದಂಡ ತಪ್ಪಿದ್ದಲ್ಲ!
ಪತ್ನಿ ಅಂದುಕೊಂಡಂತೆ ಡಿವೋರ್ಸ್ ಏನೋ ಸಿಕ್ಕಿರಬಹುದು, ಆದರೆ ಅದು ಸುಳ್ಳಿನ ಆಧಾರದ ಮೇಲೆ ಸಿಕ್ಕಿದ್ದಾದ್ದರಿಂದ ಈಗ ಆಕೆಗೆ ಸಂಕಷ್ಟ ಶುರುವಾಗಿದೆ. ಒಂದು ವೇಳೆ ಹೈಕೋರ್ಟ್‌ನಲ್ಲಿ ಪತ್ನಿ ಸುಳ್ಳು ಹೇಳಿರುವುದು ಸಾಬೀತಾದರೆ, ಆಕೆ ಜೈಲು ಪಾಲಾಗುವುದರಲ್ಲಿ ಸಂಶಯವಿಲ್ಲ.

Latest News