ಚಿನ್ನದ ನಗರಿ ಕೋಲಾರದಲ್ಲಿ ಇಂದು ವಿಭಿನ್ನವಾದ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಕಡು ಕಪ್ಪು ಅಥವಾ ಕಂದು ಬಣ್ಣದಲ್ಲಿ ಕಾಣುವ ನಾಗರಹಾವುಗಳ ನಡುವೆ, ಅತ್ಯಂತ ವಿಶಿಷ್ಟವಾದ ಮೈಬಣ್ಣ ಹೊಂದಿರುವ ಬೃಹತ್ ನಾಗರಹಾವೊಂದು ನಗರದ ಮಿನಿ ಸ್ಟೇಡಿಯಂ ಬಳಿ ಕಾಣಿಸಿಕೊಂಡು ಸಾರ್ವಜನಿಕರ ಗಮನ ಸೆಳೆದಿದೆ.
ಕೋಲಾರ ನಗರದ ಮಿನಿ ಸ್ಟೇಡಿಯಂ ಆವರಣದಲ್ಲಿ ಸದ್ಯ ನೂತನವಾಗಿ ಈಜುಕೊಳದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಂದು ಬೆಳಿಗ್ಗೆ ಕೆಲಸಗಾರರು ಕೆಲಸದಲ್ಲಿ ನಿರತರಾಗಿದ್ದಾಗ, ಕಾಮಗಾರಿ ನಡೆಯುತ್ತಿದ್ದ ಜಾಗದ ಬಳಿಯೇ ಈ ಬೃಹತ್ ನಾಗರಹಾವು ಪ್ರತ್ಯಕ್ಷವಾಗಿದೆ. ಹಾವಿನ ಗಾತ್ರ ಮತ್ತು ಅದರ ವಿಭಿನ್ನವಾದ ಮೈಬಣ್ಣವನ್ನು ಕಂಡು ಕಾರ್ಮಿಕರು ಹಾಗೂ ಹತ್ತಿರದಲ್ಲಿದ್ದವರು ಕೆಲಕಾಲ ಆತಂಕಕ್ಕೊಳಗಾದರು. ಈ ಹಾವು ನೋಡಲು ಸಾಮಾನ್ಯ ನಾಗರಹಾವುಗಳಿಗಿಂತ ಭಿನ್ನವಾಗಿ, ಸ್ವಲ್ಪ ತಿಳಿ ಬಣ್ಣ ಹಾಗೂ ಆಕರ್ಷಕ ಮೈಬಣ್ಣವನ್ನು ಹೊಂದಿದೆ.
ಹಾವು ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಖ್ಯಾತ ಉರಗರಕ್ಷಕ ಆನಂದ್ ಅವರಿಗೆ ಮಾಹಿತಿ ನೀಡಿದ್ದು. ಕೂಡಲೇ ಸ್ಥಳಕ್ಕೆ ಬಂದ ಆನಂದ್ ಅವರು, ಹಾವಿಗೆ ಯಾವುದೇ ತೊಂದರೆಯಾಗದಂತೆ ಅತ್ಯಂತ ಚಾಕಚಕ್ಯತೆಯಿಂದ ಅದನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ ನಂತರವಷ್ಟೇ ಅಲ್ಲಿನ ಜನರು ನಿಟ್ಟುಸಿರು ಬಿಟ್ಟರು. ಹಾವನ್ನು ಹಿಡಿದ ಬಳಿಕ ಅದರ ಮೈಬಣ್ಣ ಮತ್ತು ಚಲನವಲನಗಳನ್ನು ಕಂಡು ನೆರೆದಿದ್ದವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಯಾವುದೇ ಪ್ರಾಣಿಯಾಗಲಿ, ಅದು ಜನವಸತಿ ಪ್ರದೇಶಕ್ಕೆ ಬಂದಾಗ ಭಯಪಡದೆ ಪರಿಣಿತರಿಗೆ ಮಾಹಿತಿ ನೀಡುವುದು ಮುಖ್ಯ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. ಉರಗರಕ್ಷಕ ಆನಂದ್ ಅವರು ಹಿಡಿದ ಈ ಅಪರೂಪದ ನಾಗರಹಾವನ್ನು ನಗರದಿಂದ ದೂರವಿರುವ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ. ಪರಿಸರ ಸಮತೋಲನದಲ್ಲಿ ಇಂತಹ ಜೀವಿಗಳ ಪಾತ್ರ ದೊಡ್ಡದು, ಹಾಗಾಗಿ ಅವುಗಳನ್ನು ಕೊಲ್ಲದೆ ರಕ್ಷಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.