ಬಿಡದಿ ಸಮೀಪ ನಿರ್ಮಾಣ ಮಾಡಲು ಉದ್ದೇಶಿಸಿರುವ ‘ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್’ (GBIT) ಯೋಜನೆಗೆ ವಿರೋಧದ ಕಿಡಿ ಜೋರಾಗಿದೆ. ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ಈಗ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ರೈತರ ನಿಯೋಗವೊಂದು ಭಾನುವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈ ಯೋಜನೆಯನ್ನು ತಕ್ಷಣವೇ ಮರುಪರಿಶೀಲನೆ ಮಾಡಬೇಕು ಎಂದು ಖಡಕ್ ಆಗಿ ಆಗ್ರಹಿಸಿದೆ.
ಡಿಕೆಶಿ ಕೊಟ್ಟ ಭರವಸೆ ಏನು?
'ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯತ್‌ಗಳ ರೈತ ಭೂ ಹಿತರಕ್ಷಣಾ ಸಮಿತಿ' ಅಡಿಯಲ್ಲಿ ಒಟ್ಟಾದ ರೈತರು, ಬೆಂಗಳೂರಿನಲ್ಲಿ ಡಿಸಿಎಂ ಡಿಕೆ. ಶಿವಕುಮಾರ್ ಅವರನ್ನು ಖುದ್ದಾಗಿ ಭೇಟಿಯಾದರು. ಟೌನ್‌ಶಿಪ್ ಯೋಜನೆಯಿಂದ ತಮಗೆ ಆಗಲಿರುವ ಅನ್ಯಾಯ, ಕಷ್ಟ ನಷ್ಟಗಳನ್ನು ಬಿಡಿಸಿ ಹೇಳಿದರು. ತಮ್ಮ ಹಕ್ಕುಗಳನ್ನು ಮತ್ತು ತಲತಲಾಂತರದಿಂದ ನಂಬಿಕೊಂಡಿರುವ ಜಮೀನನ್ನು ರಕ್ಷಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಿದರು.
ರೈತರ ಅಳಲನ್ನು ನಿರಾಳವಾಗಿ ಆಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. "ಕಾನೂನು ಚೌಕಟ್ಟಿನೊಳಗೆ ಏನೇನೆಲ್ಲಾ ಮಾಡಲು ಸಾಧ್ಯವೋ, ಅದನ್ನೆಲ್ಲಾ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು" ಎಂದು ರೈತರಿಗೆ ಭರವಸೆ ನೀಡಿದ್ದಾರೆ.
ದೇವೇಗೌಡರ ವಾಗ್ದಾಳಿ: "ಇದು ಸರ್ಕಾರ ಪ್ರಾಯೋಜಿತ ಹಗರಣ"
ರೈತರ ಈ ಹೋರಾಟಕ್ಕೆ ರಾಜಕೀಯವಾಗಿಯೂ ದೊಡ್ಡ ಬೆಂಬಲ ಸಿಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಬಿಡದಿಯ ಜಿಬಿಐಟಿ ಯೋಜನೆ ವಿರುದ್ಧ ತಾವೂ ಕೂಡ ರೈತರ ಜೊತೆ ನಿಂತು ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ.
"ಅಭಿವೃದ್ಧಿ ಹೆಸರಲ್ಲಿ ಬಡ ರೈತರ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ಸರ್ಕಾರವೇ ಮುಂದೆ ನಿಂತು ಮಾಡುತ್ತಿರುವ ದೊಡ್ಡ ಹಗರಣ" ಎಂದು ದೇವೇಗೌಡರು ನೇರವಾಗಿಯೇ ಆರೋಪಿಸಿದ್ದರು. ಇದು ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ತಂದಿದೆ.
ಏನಿದು ಬಿಡದಿ ಟೌನ್‌ಶಿಪ್ ಯೋಜನೆ?
ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬೃಹತ್ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಬಿಡದಿ ಸುತ್ತಮುತ್ತಲಿನ ಸುಮಾರು 7,481 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಬರೋಬ್ಬರಿ 18,133 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಟೌನ್‌ಶಿಪ್ ನಿರ್ಮಿಸುವುದು ಸರ್ಕಾರದ ಪ್ಲಾನ್ ಆಗಿದೆ. ಬೆಂಗಳೂರಿನ ಮೇಲಿನ ಜನಸಂಖ್ಯೆ ಒತ್ತಡವನ್ನು ಕಡಿಮೆ ಮಾಡಲು ಈ ಉಪನಗರ ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ.
ಒಂದು ವರ್ಷದಿಂದ ಮುಂದುವರಿದ ರೈತರ ಹೋರಾಟ!
ಸರ್ಕಾರದ ಈ ಯೋಜನೆಗೆ ರೈತರು ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ತಮ್ಮ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಿಡದಿ ಭಾಗದ ರೈತರು, ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಬೈರಮಂಗಲ ಮುಖ್ಯರಸ್ತೆಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಪ್ರಮುಖ ವಾದ ಏನೆಂದರೆ, "ತಾವು ರಕ್ತ ಸುರಿಸಿ ಅನ್ನ ಬೆಳೆಯುವ ಫಲವತ್ತಾದ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಸರ್ಕಾರ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಅಥವಾ ಮರುಪರಿಶೀಲಿಸಬೇಕು" ಎಂದಾಗಿದೆ.
ಈಗ ಡಿಸಿಎಂ ಡಿಕೆಶಿ ಅವರನ್ನು ಭೇಟಿ ಮಾಡಿರುವ ರೈತರು ತಮ್ಮ ಹೋರಾಟಕ್ಕೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ರೈತರ ಮನವಿಗೆ ಮಣಿದು ಯೋಜನೆಯಲ್ಲಿ ಬದಲಾವಣೆ ತರುತ್ತಾ ಅಥವಾ ತನ್ನ ನಿರ್ಧಾರಕ್ಕೆ ಬದ್ಧವಾಗಿರುತ್ತಾ ಎಂಬುದನ್ನು ಕಾದುನೋಡಬೇಕಿದೆ.