'ಕೋಪ ನೆತ್ತಿಗೇರಿದರೆ ಮನುಷ್ಯ ಪ್ರಾಣಿಯಾಗ್ತಾನೆ' ಅನ್ನೋದಕ್ಕೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರದ್ದೇರ ನಾಗನೂರು ಗ್ರಾಮದಲ್ಲಿ ನಡೆದಿರೋ ಈ ಘೋರ ಘಟನೆಯೇ ಸಾಕ್ಷಿ. ಪ್ರೀತಿಸಿ, ದೊಡ್ಡವರ ಸಮ್ಮತಿ ಪಡೆದು ಹಸೆಮಣೆ ಏರಿದ್ದ ಜೋಡಿಯ ಸಂಸಾರ ಕೇವಲ ನಾಲ್ಕೇ ವರ್ಷಕ್ಕೆ ರಕ್ತದ ಮಡುವಿನಲ್ಲಿ ಕೊನೆಯಾಗಿದೆ. ಗಂಡ-ಹೆಂಡತಿಯ ಇಗೋ ಜಗಳ ವಿಕೋಪಕ್ಕೆ ಹೋಗಿ, ಹೆಂಡತಿಯೇ ಗಂಡನ ಪ್ರಾಣ ತೆಗೆದ ಉದ್ರಿಕ್ತ ಕಥೆ ಇಲ್ಲಿದೆ.
ಪ್ರೀತಿಯ ಮಹಲ್‌ನಲ್ಲಿ ದಿನಾ ಕಿರಿಕಿರಿ!
ಕೊ*ಲೆಯಾದ ದುರ್ದೈವಿಯನ್ನು ವಿಶ್ವನಾಥ ಹಡಿಮನಿ (29) ಎಂದು ಗುರುತಿಸಲಾಗಿದೆ. ಈತನನ್ನು ಹ*ತ್ಯೆ ಮಾಡಿದ ಆರೋಪದ ಮೇಲೆ ಪತ್ನಿ ಕವಿತಾಳನ್ನು ನರಗುಂದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಸಲಿಗೆ ಇವರಿಬ್ಬರದ್ದು ಲವ್ ಮ್ಯಾರೇಜ್. 2022 ರಲ್ಲಿ ಇಬ್ಬರ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿ, ಮನೆಯವರೆಲ್ಲಾ ಸೇರಿ ಅದ್ಧೂರಿಯಾಗಿ ಮದುವೆ ಮಾಡಿಸಿದ್ದರು. ಆದರೆ ಸಿನಿಮಾ ಸ್ಟೈಲ್‌ನಲ್ಲಿ ಶುರುವಾದ ಇವರ ಲವ್ ಸ್ಟೋರಿ, ರಿಯಲ್ ಲೈಫ್‌ನಲ್ಲಿ ಮಾತ್ರ ಮೊದಲ ದಿನದಿಂದಲೇ ಹಳಿ ತಪ್ಪಿತ್ತು. ದಿನಾ ಸಣ್ಣಪುಟ್ಟ ವಿಷಯಕ್ಕೂ ಜಗಳ, ಕಿತ್ತಾಟ ನಡೆಯುತ್ತಲೇ ಇತ್ತು. ಇದರಿಂದ ಬೇಸತ್ತ ಕವಿತಾ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಳು.
ಪಂಚಾಯ್ತಿ ಮಾಡಿ ಕಳಿಸಿದ 15 ದಿನಕ್ಕೇ ಹೆ*ಣವಾದ ಗಂಡ;
ಗಂಡ-ಹೆಂಡತಿ ದೂರ ಇರೋದನ್ನು ನೋಡಿ ಇತ್ತೀಚೆಗಷ್ಟೇ ಕುಟುಂಬದ ದೊಡ್ಡವರೆಲ್ಲಾ ಸೇರಿ ರಾಜಿ ಪಂಚಾಯ್ತಿ ಮಾಡಿಸಿದ್ದರು. "ಇನ್ಮುಂದೆ ಜಗಳ ಆಡಬೇಡಿ, ಚೆನ್ನಾಗಿರಿ" ಎಂದು ಬುದ್ಧಿವಾದ ಹೇಳಿ ಕವಿತಾಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಕೇವಲ 15 ದಿನಗಳ ಹಿಂದೆಯಷ್ಟೇ ಗಂಡನ ಮನೆಗೆ ಬಂದು ಹೊಸ ಜೀವನ ಶುರು ಮಾಡಿದ್ದ ಕವಿತಾ ಹಾಗೂ ವಿಶ್ವನಾಥನ ನಡುವೆ ಬುಧವಾರ ರಾತ್ರಿ ಮತ್ತೆ ಮಹಾಭಾರತವೇ ಶುರುವಾಗಿದೆ!
ರಾತ್ರಿ ನಡೆದಿದ್ದೇನು? ಕಬ್ಬಿಣದ ರಾಡ್‌ನಿಂದ ಭೀಕರ ದಾಳಿ!
ಬುಧವಾರ ಮಧ್ಯರಾತ್ರಿ ಹಳೇ ವಿಷಯವೊಂದನ್ನು ಹಿಡಿದುಕೊಂಡು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ಜಗಳ ಸಡನ್ನಾಗಿ ಕಂಟ್ರೋಲ್ ತಪ್ಪಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಈ ವೇಳೆ ಕೋಪದ ಭರದಲ್ಲಿ ವಿವೇಕ ಕಳೆದುಕೊಂಡ ಕವಿತಾ, ಮನೆಯಲ್ಲಿದ್ದ ಭಾರವಾದ ಕಬ್ಬಿಣದ ರಾಡ್ (Iron Rod) ಎತ್ತಿಕೊಂಡು ಗಂಡ ವಿಶ್ವನಾಥನ ತಲೆ ಹಾಗೂ ದೇಹಕ್ಕೆ ಮನಬಂದಂತೆ ಜಜ್ಜಿದ್ದಾಳೆ.
ಪೆಟ್ಟು ಎಷ್ಟೊಂದು ಭೀಕರವಾಗಿತ್ತೆಂದರೆ, ತಲೆಗೆ ಗಂಭೀರ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದ ವಿಶ್ವನಾಥ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಇವತ್ತು ಅಂದರೆ ಗುರುವಾರ (ಮೇ 21) ಮಧ್ಯಾಹ್ನದ ವೇಳೆಗೆ ಈ ರಕ್ತಸಿಕ್ತ ಕಥೆ ಇಡೀ ಹಳ್ಳಿಗೆ ಗೊತ್ತಾಗಿದ್ದು, ಹಳ್ಳಿಯ ಜನರೆಲ್ಲಾ ಶಾಕ್ ಆಗಿದ್ದಾರೆ.
ಪೊಲೀಸರ ಎಂಟ್ರಿ, ಆರೋಪಿ ಪತ್ನಿ ಕಸ್ಟಡಿಗೆ;
ವಿಷಯ ತಿಳಿಯುತ್ತಿದ್ದಂತೆ ನರಗುಂದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಟೀಮ್ ಸ್ಪಾಟ್‌ಗೆ ಬಂದು ಪರಿಶೀಲನೆ ನಡೆಸಿದ್ದಾರೆ. ವಿಶ್ವನಾಥನ ಶ*ವವನ್ನು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಲಾಗಿದ್ದು, ಕೊ*ಲೆಗಡುಕ ಪತ್ನಿ ಕವಿತಾಳನ್ನು ಪೊಲೀಸರು ಕಸ್ಟಡಿಗೆ ತಗೊಂಡು ವಿಚಾರಣೆ ನಡೆಸುತ್ತಿದ್ದಾರೆ. ನರಗುಂದ ಪೊಲೀಸ್ ಸ್ಟೇಷನ್‌ನಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಅಸಲಿಗೆ ಆ ರಾತ್ರಿ ಇಷ್ಟೊಂದು ಭೀಕರವಾಗಿ ಕೊ*ಲೆ ಮಾಡುವ ಮಟ್ಟಿಗೆ ನಡೆದಿದ್ದ ಜಗಳದ ಅಸಲಿ ಕಾರಣವೇನು ಅನ್ನೋದರ ತನಿಖೆ ನಡೀತಾ ಇದೆ.
ಮದುವೆಯಾಗಿ ನೂರು ವರ್ಷ ಸುಖವಾಗಿರಬೇಕಾಗಿದ್ದ ಜೋಡಿ ಇವತ್ತು ಹೀಗೆ ನಡುಬೀದಿಗೆ ಬಂದಿದೆ. ಒಬ್ಬ ಚಿತೆಗೆ ಸೇರಿದರೆ, ಇನ್ನೊಬ್ಬರು ಜೈಲು ಪಾಲಾಗಿದ್ದಾರೆ. ಕೋಪ ಬಂದಾಗ ಒಂದು ನಿಮಿಷ ಮೌನವಾಗಿದ್ದರೆ ಎಂತಹ ಅನಾಹುತವನ್ನು ಬೇಕಾದರೂ ತಪ್ಪಿಸಬಹುದು ಅನ್ನೋದಕ್ಕೆ ಈ ಘಟನೆಯೇ ಒಂದು ದೊಡ್ಡ ಪಾಠ.