Mar 27, 2026 Languages : ಕನ್ನಡ | English

ನಾನು ದೊಡ್ಡ ಆಧ್ಯಾತ್ಮಿಕ ಗುರು ಎಂದು ಹೇಳಿ ಲಾಡ್ಜಿನಲ್ಲಿ ಮಹಿಳೆ ಮೇಲೆ ಅ*ತ್ಯಾಚಾರ - ಕಪಟ ಸ್ವಾಮಿಯ ಕಳ್ಳಾಟ ಬಯಲು!!

ನಮ್ಮ ಸಮಾಜದಲ್ಲಿ ದೇವರನ್ನು ಮತ್ತು ಧರ್ಮವನ್ನು ನಂಬುವವರ ಸಂಖ್ಯೆ ದೊಡ್ಡದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವೇಷಧಾರಿಗಳು ಜನರ ನಂಬಿಕೆಯ ಜೊತೆ ಹೇಗೆ ಆಟವಾಡುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪಲ್ಘಾರ್ ಮೂಲದ ಋಷಿಕೇಶ್ ವೈದ್ಯ (40) ಎಂಬ ಸ್ವಯಂ ಘೋಷಿತ ದೇವಮಾನವ, ಪುಣೆಯ ಮಹಿಳೆಯೊಬ್ಬರ ಜೀವನದ ಜೊತೆ ಚೆಲ್ಲಾಟವಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ನೀನು ಪಾರ್ವತಿ, ನಾನು ಮಹಾದೇವ – ನಕಲಿ ಗುರುನ ನಾಟಕ ಬಯಲು!! | Photo Credit: https://x.com/ndtv
ನೀನು ಪಾರ್ವತಿ, ನಾನು ಮಹಾದೇವ – ನಕಲಿ ಗುರುನ ನಾಟಕ ಬಯಲು!! | Photo Credit: https://x.com/ndtv

ಫೇಸ್‌ಬುಕ್ ಸ್ನೇಹದಿಂದ ಶುರುವಾದ ಜಾಲ

ಈ ಕರಾಳ ಕಥೆ ಶುರುವಾಗಿದ್ದು 2023ರಲ್ಲಿ. ಫೇಸ್‌ಬುಕ್ ಮೂಲಕ ಮಹಿಳೆಗೆ ಪರಿಚಯವಾದ ಈತ, ತಾನೊಬ್ಬ ದೊಡ್ಡ ಆಧ್ಯಾತ್ಮಿಕ ಗುರು ಎಂದು ನಂಬಿಸಿದ್ದಾನೆ. ಮಹಿಳೆಗೆ ಇದ್ದ ಸಂಕಷ್ಟಗಳನ್ನು ಪರಿಹರಿಸುವುದಾಗಿ ಹೇಳಿ, ಡಿಸೆಂಬರ್‌ನಲ್ಲಿ ಪುಣೆಯ ಲಾಡ್ಜ್‌ವೊಂದಕ್ಕೆ ಬರಲು ಹೇಳಿದ್ದಾನೆ. ಅಲ್ಲಿ ಮಹಿಳೆಯ ಕುಡಿಯುವ ಪಾನೀಯಕ್ಕೆ ಅಮಲು ಪದಾರ್ಥ ಬೆರೆಸಿ, ಆಕೆ ಪ್ರಜ್ಞೆ ತಪ್ಪಿದಾಗ ಅ*ತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಖಾಸಗಿ ಫೋಟೋಗಳನ್ನು ರಹಸ್ಯವಾಗಿ ತೆಗೆದುಕೊಂಡಿದ್ದಾನೆ.

ನೀನು ಪಾರ್ವತಿ, ನಾನು ಮಹಾದೇವ

ಈ ಕಾಮುಕ ತನ್ನ ಕೃತ್ಯವನ್ನು ಮುಚ್ಚಿಡಲು ಆಧ್ಯಾತ್ಮದ ನಾಟಕವಾಡಿದ್ದಾನೆ. "ನೀನು ನನ್ನ ಪಾರ್ವತಿ, ನಾನು ನಿನ್ನ ಪಾಲಿನ ಮಹಾದೇವ" ಎಂದು ಹೇಳುತ್ತಾ ಮಹಿಳೆಯನ್ನು ಬ್ರೈನ್ ವಾಶ್ ಮಾಡಿದ್ದಾನೆ ಎನ್ನಲಾಗಿ ಕೇಳಿಬಂದಿದೆ. ಫೋಟೋಗಳನ್ನು ತೋರಿಸಿ ಬೆದರಿಸಿ, ಮೇ 2024ರಲ್ಲಿ ವಸಾಯ್ ಎಂಬಲ್ಲಿ ಮತ್ತೊಮ್ಮೆ ಅ*ತ್ಯಾಚಾರ ಎಸಗಿದ್ದಾನೆ. ಈತನ ಬ್ಲ್ಯಾಕ್‌ಮೇಲ್ ಮತ್ತು ಕಿರುಕುಳ ತಾಳಲಾರದೆ ಮಹಿಳೆ ಕೊನೆಗೂ ಧೈರ್ಯ ಮಾಡಿ ಈ ವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರ ತನಿಖೆ ಮತ್ತು ಬಂಧನ

ಮತ್ತೊಬ್ಬ ದೇವಮಾನವನ ಬಂಧನದ ಸುದ್ದಿಯಿಂದ ಸ್ಫೂರ್ತಿ ಪಡೆದ ಈ ಮಹಿಳೆ, ಸಮಾಜಕ್ಕೆ ಹೆದರದೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈತನ ಮೇಲೆ ಅ*ತ್ಯಾಚಾರ, ಬ್ಲ್ಯಾಕ್‌ಮೇಲ್ ಮತ್ತು ವಂಚನೆಯ ಕೇಸ್ ಹಾಕಿದ್ದಾರೆ. ಈತನ ಜಾಲದಲ್ಲಿ ಇನ್ನೂ ಅನೇಕ ಮಹಿಳೆಯರು ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ನಮ್ಮದೊಂದು ಸಣ್ಣ ಸಲಹೆ

ದೇವಮಾನವರನ್ನು ಅಥವಾ ಆಧ್ಯಾತ್ಮಿಕ ಗುರುಗಳನ್ನು ನಂಬುವ ಮುನ್ನ ಸಾವಿರ ಬಾರಿ ಯೋಚಿಸಿ. ಅಂಧಶ್ರದ್ಧೆ ಬೇಡ, ಸಂಕಷ್ಟ ಬಂದಾಗ ಯಾರೋ ಪವಾಡ ಮಾಡುತ್ತಾರೆ ಎಂದು ನಂಬಿ ಅಪರಿಚಿತರ ಜೊತೆ ಒಂಟಿಯಾಗಿ ಹೋಗಬೇಡಿ. ಸಾಮಾಜಿಕ ಜಾಲತಾಣದ ಬಗ್ಗೆ ಎಚ್ಚರವಿರಲಿ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಸಿಗುವ ಇಂತಹ "ಗುರು"ಗಳ ಮಾತುಗಳಿಗೆ ಮರುಳಾಗಬೇಡಿ. ಅಕಸ್ಮಾತ್ ಇಂತಹ ಘಟನೆ ನಡೆದರೆ ಮುಚ್ಚಿಡಬೇಡಿ, ಕೂಡಲೇ ಪೊಲೀಸರ ಸಹಾಯ ಪಡೆಯಿರಿ. ದೈವಭಕ್ತಿಯ ಹೆಸರಿನಲ್ಲಿ ನಡೆಯುವ ಇಂತಹ ಕಾಮದಾಟಗಳಿಗೆ ಕಡಿವಾಣ ಬೀಳಬೇಕಾದರೆ ನಾವೆಲ್ಲರೂ ಜಾಗೃತರಾಗಬೇಕು. 

Latest News