ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ನೂತನ ಸಚಿವ ಸಂಪುಟ ರಚನೆ ಹಾಗೂ ಡಿಸಿಎಂ ಹುದ್ದೆಯ ಸಸ್ಪೆನ್ಸ್ ಕೊನೆಗೂ ಮುಕ್ತಾಯವಾಗಿದೆ. ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ (Dr. G. Parameshwar) ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ತಮ್ಮ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಭಾವುಕರಾಗಿ ಪೋಸ್ಟ್ ಹಂಚಿಕೊಂಡಿರುವ ಅವರು, ಹೈಕಮಾಂಡ್ ನಾಯಕರು, ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
'2ನೇ ಬಾರಿ ಡಿಸಿಎಂ ಆಗಿದ್ದು ನನ್ನ ಪುಣ್ಯ!'
ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಜಿ. ಪರಮೇಶ್ವರ್, "ಎರಡನೇ ಬಾರಿಗೆ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡುವ ಇಂತಹದೊಂದು ದೊಡ್ಡ ಸದಾವಕಾಶ ಮತ್ತೊಮ್ಮೆ ಒದಗಿ ಬಂದಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ನಾಡಿನ ಸಮಸ್ತ ಜನತೆಗೆ ನಾನು ಎಂದಿಗೂ ಅತ್ಯಂತ ಚಿರಋಣಿಯಾಗಿರುತ್ತೇನೆ. ಇನ್ಮುಂದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರೊಂದಿಗೆ ಹೆಗಲಿಗೆ ಹೆಗಲು ನೀಡಿ ಜೊತೆಯಾಗಿ ಕೆಲಸ ಮಾಡುತ್ತೇನೆ," ಎಂದು ಬರೆದುಕೊಂಡಿದ್ದಾರೆ.
ಖರ್ಗೆ, ಸೋನಿಯಾ, ರಾಹುಲ್ ಗಾಂಧಿಗೆ ಧನ್ಯವಾದಗಳ ಮಹಾಪೂರ
ತಮ್ಮ ಇಷ್ಟು ವರ್ಷಗಳ ರಾಜಕೀಯ ಜರ್ನಿಯಲ್ಲಿ ಹೈಕಮಾಂಡ್ ನೀಡಿದ ಸಪೋರ್ಟ್ ಅನ್ನು ನೆನೆದಿರುವ ಅವರು, ಕಾಂಗ್ರೆಸ್ ವರಿಷ್ಠರಿಗೆ ವಿಶೇಷ ಥ್ಯಾಂಕ್ಸ್ ಹೇಳಿದ್ದಾರೆ. "ದೀರ್ಘಾವಧಿಯವರೆಗೆ ಅಂದರೆ ಬರೋಬ್ಬರಿ 8 ವರ್ಷಗಳ ಕಾಲ ಕೆಪಿಸಿಸಿ (KPCC) ಅಧ್ಯಕ್ಷನಾಗಿ, ಆ ಬಳಿಕ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿ ಕಾಂಗ್ರೆಸ್ ಪಕ್ಷದ ಸೇವೆ ಸಲ್ಲಿಸಲು ನನಗೆ ವರಿಷ್ಠರು ದೊಡ್ಡ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈಗ ರಾಜ್ಯದ ಉಪಮುಖ್ಯಮಂತ್ರಿಯಂತಹ ಮಹತ್ವದ ಮತ್ತು ಜವಾಬ್ದಾರಿಯುತ ಹುದ್ದೆಯನ್ನು ನೀಡಿದ್ದಾರೆ. ನನಗೆ ಸದಾ ಬೆಂಬಲವಾಗಿ ನಿಂತಿರುವ ನನ್ನ ಮಾರ್ಗದರ್ಶಕರು ಹಾಗೂ ಎಐಸಿಸಿ (AICC) ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳು," ಎಂದಿದ್ದಾರೆ.
ಮುಂದುವರಿದು, "ಎಐಸಿಸಿ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ, ಲೋಕಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರಿಗೆ, ಪ್ರಿಯಾಂಕಾ ಗಾಂಧಿ ಅವರಿಗೆ, ನಾಡಿನ ಜನಪ್ರಿಯ ಹಿಂದುಳಿದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ನನ್ನ ಅನಂತ ಧನ್ಯವಾದಗಳು," ಎಂದು ಸಾಲು ಸಾಲು ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
2ನೇ ಬಾರಿ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುವ ಸದಾವಕಾಶ ಮತ್ತೊಮ್ಮೆ ಒದಗಿ ಬಂದಿರುವುದು ನನ್ನ ಪುಣ್ಯ. ನಾಡಿನ ಸಮಸ್ತ ಜನತೆಗೆ ನಾನು ಎಂದಿಗೂ ಅತ್ಯಂತ ಚಿರ ಋಣಿಯಾಗಿದ್ದೇನೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರೊಂದಿಗೆ ಹೆಗಲು ನೀಡುತ್ತೇನೆ.
— Dr. G Parameshwara (@DrParameshwara) June 4, 2026
8 ವರ್ಷ ಕೆಪಿಸಿಸಿ… pic.twitter.com/vsx8TyM7ga
ಕೊರಟಗೆರೆ ಕ್ಷೇತ್ರದ ವೋಟರ್ಸ್ ಮತ್ತು ಅಭಿಮಾನಿಗಳಿಗೆ ಸಲಾಂ!
ರಾಜಕೀಯವಾಗಿ ಏರಿಳಿತದ ಎಲ್ಲಾ ಸಂದರ್ಭದಲ್ಲೂ ತಮ್ಮ ಕೈ ಬಿಡದ ಕಾರ್ಯಕರ್ತರು ಮತ್ತು ಮತದಾರರನ್ನು ಜಿ. ಪರಮೇಶ್ವರ್ ಅವರು ಮರೆತಿಲ್ಲ. "ನನ್ನ ಇಡೀ ರಾಜಕೀಯ ಜೀವನದ ಎಲ್ಲಾ ಏಳುಬೀಳುಗಳ ಸಂದರ್ಭದಲ್ಲೂ, ಸದಾಕಾಲ ನನ್ನ ಜೊತೆಯಾಗಿ ಗಟ್ಟಿಯಾಗಿ ನಿಲ್ಲುವ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ-ಕಿರಿಯ ಮುಖಂಡರು ಮತ್ತು ಪ್ರೀತಿಯ ಕಾರ್ಯಕರ್ತರಿಗೆ ಧನ್ಯವಾದಗಳು. ಅದರಲ್ಲೂ ವಿಶೇಷವಾಗಿ ನನಗೆ ರಾಜಕೀಯ ಮರುಜನ್ಮ ನೀಡಿದ ನನ್ನ ಹೆಮ್ಮೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಲ್ಲಾ ಮತದಾರ ಪ್ರಭುಗಳಿಗೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ರಾಜ್ಯಾದ್ಯಂತ ಇರುವ ನನ್ನ ಇಡೀ ಅಭಿಮಾನಿ ಬಳಗಕ್ಕೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು," ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಜಿ. ಪರಮೇಶ್ವರ್ ಅವರ ನೇತೃತ್ವದ ನೂತನ ಆಡಳಿತ ಶುರುವಾಗಿದ್ದು, ಹಿರಿಯ ನಾಯಕನಾಗಿ ಪರಮೇಶ್ವರ್ ಅವರು ಸಂಪುಟ ಸೇರಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಸಿಕ್ರತ್ ಚೈತನ್ಯ ಮೂಡಿಸಿದೆ. ಇಬ್ಬರು ನಾಯಕರು ಜೊತೆಯಾಗಿ ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಹೇಗೆ ಮುನ್ನಡೆಸಲಿದ್ದಾರೆ ಎಂದು ಇಡೀ ಕರ್ನಾಟಕ ಕುತೂಹಲದಿಂದ ನೋಡ್ತಿದೆ.