ಏಪ್ರಿಲ್ ತಿಂಗಳಲ್ಲಿ ಲಾಂಚ್ ಆಗಿರೋ ಈ ಹೊಸ ಸರ್ವಿಸ್, ದೆಹಲಿಯ ಸಖತ್ ಬ್ಯುಸಿ ಮಾರ್ಕೆಟ್ ಆದ 'ಲಾಜಪತ್ ನಗರ'ದಲ್ಲಿ ಸದ್ಯಕ್ಕೆ ಸಿಗುತ್ತಿದೆ. ಇಲ್ಲಿ ನೀವು ಶಾಪಿಂಗ್ ಮಾಡುವಾಗ ನಿಮ್ಮ ಬ್ಯಾಗ್ ಹೊರಲು ಗಂಡು ಅಥವಾ ಹೆಣ್ಣು ಅಸಿಸ್ಟೆಂಟ್‌ಗಳನ್ನು ಬಾಡಿಗೆಗೆ ಪಡೆಯಬಹುದು!
ರೇಟ್ ಎಷ್ಟಪ್ಪಾ ಅಂದ್ರೆ?
ಇವರ ಚಾರ್ಜಸ್ ಕೂಡ ಅಷ್ಟೇನೂ ಜಾಸ್ತಿ ಇಲ್ಲ.
30 ನಿಮಿಷಕ್ಕೆ (ಅರ್ಧ ಗಂಟೆ): ಬರೀ 79 ರೂಪಾಯಿ.
1 ಗಂಟೆಗೆ: 149 ರೂಪಾಯಿ.
ಗರಿಷ್ಠ 4 ಗಂಟೆಗಳವರೆಗೆ ನೀವು ಇವರ ಹೆಲ್ಪ್ ತಗೋಬಹುದು. ಕಸ್ಟಮರ್ಸ್ ಅಂತೂ "ದೇವ್ರು ಗುರು ಇವ್ರು, ನಮ್ಮ ಲೈಫ್ ಸಖತ್ ಈಸಿ ಮಾಡ್ಬಿಟ್ರು" ಅಂತ ಖುಷಿ ಪಡ್ತಿದ್ದಾರೆ.
ಈ ಐಡಿಯಾ ಹುಟ್ಟಿದ್ದು ಹೇಗೆ?
ಇದನ್ನ ಶುರು ಮಾಡಿದ್ದು ರೀತು ಕಂದಾರಿ ಶ್ರೀವಾಸ್ತವ ಮತ್ತು ಕನಿಷ್ಕಾ ಮಲ್ಹೋತ್ರಾ ಅನ್ನೋ ಇಬ್ಬರು ಯಂಗ್ ಅಮ್ಮಂದಿರು. ಒಂದು ದಿನ ಇಬ್ಬರೂ ತಮ್ಮ ಪುಟ್ಟ ಮಕ್ಕಳನ್ನ ಕರ್ಕೊಂಡು ಲಾಜಪತ್ ನಗರ ಮಾರ್ಕೆಟ್‌ಗೆ ಶಾಪಿಂಗ್‌ಗೆ ಹೋಗಿದ್ರು. ಅಲ್ಲಿ ರಸ್ತೆಗಳು ಸರಿ ಇರಲಿಲ್ಲ, ಜನವೋ ಜನ. ಒಂದು ಕೈಯಲ್ಲಿ ಬ್ಯಾಗ್, ಇನ್ನೊಂದು ಕೈಯಲ್ಲಿ ಮಗುವಿನ ಗಾಡಿ ತಳ್ಳೋಕೆ ಸಾಕು ಸಾಕಾಗಿ ಹೋಗಿತ್ತು. ಅಲ್ಲೇ ಒಬ್ಬರು ವಯಸ್ಸಾದ ಅಜ್ಜಿ ಬ್ಯಾಗ್ ಹೊರಲಾರದೆ ಒದ್ದಾಡೋದನ್ನ ನೋಡಿ ಇವರಿಗೆ ಬೇಸರವಾಯ್ತು. ತಮಗೇ ಹೆಲ್ಪ್ ಇರಲಿಲ್ಲ, ಇನ್ನು ಬೇರೆಯವರಿಗೆ ಹೇಗೆ ಮಾಡೋದು? ಅಂದೇ ಇಬ್ಬರೂ ಚರ್ಚೆ ಮಾಡಿ, ಈ 'ಕ್ಯಾರಿ ಮೆನ್' ಐಡಿಯಾ ರೆಡಿ ಮಾಡಿದ್ರು. ಪೊಲೀಸ್ ಮತ್ತು ಮುನ್ಸಿಪಲ್ ಪರ್ಮಿಷನ್ ತಗೊಂಡು ಮಾರ್ಕೆಟ್‌ನಲ್ಲಿ ಒಂದು ಕಿಯೋಸ್ಕ್ (ಬೂತ್) ಓಪನ್ ಮಾಡಿದ್ರು.
ಬರೀ ಬ್ಯಾಗ್ ಅಷ್ಟೇ ಅಲ್ಲ, ಮಲ್ಟಿ-ಟಾಸ್ಕಿಂಗ್ ಗಿರಾಕಿಗಳು!
ಸದ್ಯಕ್ಕೆ ಇಲ್ಲಿ ಕೆಲಸ ಮಾಡೋ ಯುವಕ-ಯುವತಿಯರಿಗೆ ಸ್ಪೆಷಲ್ ಟ್ರೈನಿಂಗ್ ಕೊಡಲಾಗಿದೆ. ಇವರು ಬರೀ ಬ್ಯಾಗ್ ಹೊರಲ್ಲ; ಬದಲಿಗೆ ನಿಮ್ಮ ಜೊತೆ ಅಂಬ್ರೆಲ್ಲಾ ಹಿಡೀತಾರೆ, ಕುಳಿತುಕೊಳ್ಳಲು ಫೋಲ್ಡಿಂಗ್ ಚೇರ್ ತರ್ತಾರೆ, ವಾಟರ್ ಬಾಟಲ್, ಪೋರ್ಟಬಲ್ ಚಾರ್ಜರ್ ಕೂಡ ಕ್ಯಾರಿ ಮಾಡ್ತಾರೆ. ಅಷ್ಟೇ ಯಾಕೆ, ನೀವು ಚೇರ್ ಮೇಲೆ ಕೂತು ರೆಸ್ಟ್ ಮಾಡ್ತಾ ಇದ್ರೆ, ನಿಮಗಾಗಿ ಫುಡ್ ಕೌಂಟರ್‌ನಲ್ಲಿ ಕ್ಯೂ ನಿಂತು ತಿಂಡಿ ತಂದುಕೊಡ್ತಾರೆ! ಮಾರ್ಕೆಟ್‌ನ ಶಾರ್ಟ್‌ಕಟ್ ರೂಟ್‌ಗಳು ಇವರಿಗೆ ಚೆನ್ನಾಗಿ ಗೊತ್ತಿರೋದ್ರಿಂದ ನಿಮ್ಮನ್ನು ಬೇಗ ಶಾಪಿಗೆ ಕರ್ಕೊಂಡು ಹೋಗ್ತಾರೆ.
ಇಲ್ಲಿ ಕೆಲಸ ಮಾಡೋ 18 ವರ್ಷದ ಆನಂದ್ ಕುಮಾರ್ ಅನ್ನೋ ಹುಡುಗ "ಹಿಂದೆ ನಾನು ಸೀರೆ ಅಂಗಡಿಯಲ್ಲಿ, ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದೆ. ಅಲ್ಲಿಗಿಂತ ಇಲ್ಲಿ ಸಂಬಳ ಸೂಪರ್ ಆಗಿದೆ, ಜನ ಗೌರವದಿಂದ ನಡೆಸ್ಕೊಳ್ತಾರೆ" ಅಂತ ಖುಷಿ ಹಂಚಿಕೊಳ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಭಾರಿ ಡಿಬೇಟ್!
ಈ ಸರ್ವಿಸ್ ವೈರಲ್ ಆಗ್ತಿದ್ದಂತೆ ಇಂಟರ್ನೆಟ್‌ನಲ್ಲಿ ದೊಡ್ಡ ಯುದ್ಧವೇ ಶುರುವಾಗಿದೆ. ಕೆಲವರು "ಇದು ಸೋಮಾರಿ ಶ್ರೀಮಂತರ ಅಹಂಕಾರದ ಪರಮಾವಧಿ, ಬಡವರನ್ನು ಮಾಡರ್ನ್ ಸ್ಲೇವ್ಸ್ (ಆಧುನಿಕ ಗುಲಾಮರು) ತರ ಬಳಸ್ತಿದ್ದಾರೆ" ಅಂತ ಬೈಯ್ಯುತ್ತಿದ್ದಾರೆ. ಆದರೆ ಸ್ಟಾರ್ಟ್‌ಅಪ್ ಮಾಲೀಕರು, "ನಾವಿಲ್ಲಿ ಯಾರನ್ನೂ ಬಲವಂತ ಮಾಡ್ತಿಲ್ಲ. ನಮ್ಮಲ್ಲಿರೋರು ಗಿಗ್ ವರ್ಕರ್ಸ್ ಅಲ್ಲ, ತಿಂಗಳ ಸಂಬಳ ಇರೊ ಫುಲ್ ಟೈಮ್ ಎಂಪ್ಲಾಯ್ಸ್. ನಮ್ಮ ಹತ್ತಿರ ಬರೋರು ಸೋಮಾರಿಗಳಲ್ಲ; ಗರ್ಭಿಣಿಯರು, ಸಣ್ಣ ಮಕ್ಕಳಿರೋ ತಾಯಂದಿರು ಮತ್ತು ವಯಸ್ಸಾದವರು" ಅಂತ ಕ್ಲಾರಿಟಿ ಕೊಟ್ಟಿದ್ದಾರೆ.
ಮಾರ್ಕೆಟ್‌ಗೆ ಬಂದಿದ್ದ 60 ವರ್ಷದ ಜತಿಂದರ್ ಮತ್ತು ಅವರ ವೈಫ್ ಅನಿತಾ ಇಬ್ಬರೂ ಆನಂದ್ ಅವರ ಹೆಲ್ಪ್ ತಗೊಂಡು ಸಖತ್ ಖುಷಿಯಾಗಿದ್ರು. "ನಮಗೆ ವಯಸ್ಸಾಗಿದೆ, ಬ್ಯಾಗ್ ಹೊರಲು ಆಗಲ್ಲ. ಇಂತಹ ಸರ್ವಿಸ್ ಪ್ರತಿ ಮಾರ್ಕೆಟ್‌ನಲ್ಲೂ ಇರಬೇಕು" ಅಂತಾರೆ ಈ ದಂಪತಿ.
ಮುಂದೆ ಏನಾಗುತ್ತೆ?
ಸದ್ಯಕ್ಕೆ ದಿನಕ್ಕೆ 8 ರಿಂದ 9 ಬುಕ್ಕಿಂಗ್ ಆಗ್ತಿರೋ ಈ ಸ್ಟಾರ್ಟ್‌ಅಪ್ ಜುಲೈ ತಿಂಗಳಲ್ಲಿ ದೆಹಲಿಯ ಫೇಮಸ್ 'ಚಾಂದ್ನಿ ಚೌಕ್' ಮಾರುಕಟ್ಟೆಗೂ ಕಾಲಿಡ್ತಾ ಇದೆ. ಅಲ್ಲಿಂದ ಇಡೀ ದೇಶಕ್ಕೆ ವಿಸ್ತರಿಸುವ ಪ್ಲಾನ್ ಇದೆ. ಆದರೆ, ಕಾರ್ಮಿಕ ಹಕ್ಕುಗಳ ಹೋರಾಟಗಾರರು "ಈಗೇನೋ ಸಂಬಳ ಚೆನ್ನಾಗಿ ಕೊಡ್ತಾರೆ, ಆದ್ರೆ ಬಿಸಿನೆಸ್ ದೊಡ್ಡದಾದಾಗ ಬೇರೆ ಡೆಲಿವರಿ ಆ್ಯಪ್‌ಗಳ ತರ ಇವರನ್ನೂ ಹಿಂಡಿ ಹಿಪ್ಪೆ ಮಾಡ್ತಾರೆ" ಅನ್ನೋ ಆತಂಕ ವ್ಯಕ್ತಪಡಿಸಿದ್ದಾರೆ.