ಇನ್ಮುಂದೆ ಸಿಎನ್‌ಜಿ ಗಾಡಿಗಳೂ ವೇಸ್ಟ್? ಪೆಟ್ರೋಲ್ ದರವನ್ನು ಮೀರಿಸುತ್ತಾ ಹೊಸ CNG ರೇಟ್?

ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಯ್ತು ಅಂತ ಸಿಎನ್‌ಜಿ (CNG) ಗಾಡಿ ತಗೊಂಡವರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ! ಹೌದು, ಕಳೆದ ಕೆಲವು ದಿನಗಳಿಂದ ಸಿಎನ್‌ಜಿ ದರ ಸತತವಾಗಿ ಏರುತ್ತಲೇ ಸಾಗಿದೆ. ಇದೀಗ ಮೇ 26ರ ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಸಿಎನ್‌ಜಿ ಬೆಲೆಯನ್ನು ಕೆಜಿಗೆ ಬರೋಬ್ಬರಿ 2 ರೂಪಾಯಿ ಹೆಚ್ಚಿಸಲಾಗಿದೆ.

ಕೇವಲ 11 ದಿನದಲ್ಲಿ 4 ಬಾರಿ ರೇಟ್ ಜಿಗಿತ! | Photo Credit: CANVA
ಕೇವಲ 11 ದಿನದಲ್ಲಿ 4 ಬಾರಿ ರೇಟ್ ಜಿಗಿತ! | Photo Credit: CANVA

ಗಾಡಿ ಓಡಿಸೋರಿಗೆ ಇದು ನಿಜಕ್ಕೂ ನುಂಗಲಾರದ ತುತ್ತಾಗಿದೆ. ಯಾಕಂದ್ರೆ, ಕೇವಲ 11 ದಿನಗಳ ಗ್ಯಾಪ್‌ನಲ್ಲಿ ಬರೋಬ್ಬರಿ ನಾಲ್ಕು ಬಾರಿ ರೇಟ್ ಜಿಗಿದಿದೆ! ಮೇ 15ರಂದು 2 ರೂ., ಮೇ 17ರಂದು 1 ರೂ., ಮೇ 23ರಂದು 1 ರೂ. ಮತ್ತು ಇವತ್ತು ಅಂದರೆ ಮೇ 26ರಂದು ಮತ್ತೊಮ್ಮೆ 2 ರೂ. ಏರಿಕೆ ಮಾಡಲಾಗಿದೆ. ಅಂದರೆ, ಕೇವಲ ಎರಡು ವಾರ ಕಳೆಯುವುದರೊಳಗೆ ಸಿಎನ್‌ಜಿ ದರ ಒಟ್ಟು 5 ರೂಪಾಯಿಯಷ್ಟು ದುಬಾರಿಯಾಗಿದೆ. ಸಿಎನ್‌ಜಿ ಸಪ್ಲೈ ಮಾಡುವ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಸಂಸ್ಥೆ ಈ ಬೆಲೆ ಏರಿಕೆಯ ಬಿಸಿಯನ್ನು ಗ್ರಾಹಕರ ತಲೆಗೆ ಕಟ್ಟಿದೆ.

ಹೊಸ ರೇಟ್ ಕಾರ್ಡ್ ಎಲ್ಲೆಲ್ಲಿ ಎಷ್ಟಿದೆ?

ಈ ಇತ್ತೀಚಿನ ಬೆಲೆ ಏರಿಕೆಯ ನಂತರ ಬೇರೆ ಬೇರೆ ನಗರಗಳಲ್ಲಿ ಸಿಎನ್‌ಜಿ ದರ ಹೀಗಿದೆ:

ದೆಹಲಿ: ಕೆಜಿಗೆ 83.09 ರೂ.

ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್: ಕೆಜಿಗೆ 88.70 ರೂ.

ಗುರುಗ್ರಾಮ: ಕೆಜಿಗೆ 86.12 ರೂ.

ಮುಂಬೈ: ಕೆಜಿಗೆ 84.00 ರೂ.

ಇದರ ಜೊತೆಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 100 ರೂಪಾಯಿಯ ಗಡಿ ದಾಟಿ ಮುನ್ನುಗ್ಗುತ್ತಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ.

ಖಾಸಗಿ ಕಂಪನಿಗಳ ಎಂಟ್ರಿಯಿಂದ ಕರೆಂಟ್ ಬಿಲ್ ಏರುತ್ತಾ?

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆಗ್ತಿರೋ ಏರುಪೇರುಗಳೇ ಈ ಬೆಲೆ ಏರಿಕೆಗೆ ಅಸಲಿ ಕಾರಣ. ಅಮೆರಿಕ-ಇರಾನ್ ನಡುವಿನ ಜಗಳ ಜೋರಾಗ್ತಿರೋದ್ರಿಂದ, ಪ್ರಪಂಚದ ಶೇ. 20ರಷ್ಟು ತೈಲ ಸಾಗುವ ‘ಹೋರ್ಮುಜ್ ಜಲಸಂಧಿ’ ಮಾರ್ಗದಲ್ಲಿ ಸಪ್ಲೈ ನಿಂತುಹೋಗುವ ಭೀತಿ ಶುರುವಾಗಿದೆ. ಇದೇ ಕಾರಣಕ್ಕೆ ಹಿಂದೆ 70-72 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ, ಒಂದು ಹಂತದಲ್ಲಿ 120 ಡಾಲರ್ ದಾಟಿ, ಈಗ 104-110 ಡಾಲರ್ ಆಸುಪಾಸಿನಲ್ಲಿ ಓಡಾಡುತ್ತಿದೆ.

ಭಾರತಕ್ಕೆ ಯಾಕೆ ಇಷ್ಟೊಂದು ಎಫೆಕ್ಟ್?

ನಮ್ಮ ದೇಶಕ್ಕೆ ಬೇಕಾಗುವ ಕಚ್ಚಾ ತೈಲದಲ್ಲಿ ಶೇಕಡಾ 90 ರಷ್ಟನ್ನು ನಾವು ಬೇರೆ ದೇಶಗಳಿಂದಲೇ ಇಂಪೋರ್ಟ್ (ಆಮದು) ಮಾಡಿಕೊಳ್ಳುತ್ತೇವೆ. ವರ್ಷದ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 69 ಡಾಲರ್ ಇದ್ದ ಸರಾಸರಿ ಬೆಲೆ, ಇತ್ತೀಚಿನ ತಿಂಗಳುಗಳಲ್ಲಿ 113 ರಿಂದ 114 ಡಾಲರ್‌ಗೆ ಜಿಗಿದಿದೆ. ಹೀಗಾಗಿ ತೈಲ ಕಂಪನಿಗಳಿಗೆ ಭಾರಿ ನಷ್ಟವಾಗುತ್ತಿದ್ದು, ಅನಿವಾರ್ಯವಾಗಿ ದರ ಹೆಚ್ಚಿಸಬೇಕಾಗಿ ಬಂದಿದೆ.

ಕಂಗಾಲಾದ ಆಟೋ, ಟ್ಯಾಕ್ಸಿ ಡ್ರೈವರ್ಸ್!

ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಗಗನಕ್ಕೇರಿದಾಗ ಜನ ಸಾಮಾನ್ಯರು ಮತ್ತು ಕಮರ್ಷಿಯಲ್ ವಾಹನ ಸವಾರರು ಸಿಎನ್‌ಜಿ ಕಡೆ ಮುಖ ಮಾಡಿದ್ದರು. ಸಿಎನ್‌ಜಿ ಆದ್ರೆ ಮೈಲೇಜ್ ಚೆನ್ನಾಗಿ ಕೊಡುತ್ತೆ, ಖರ್ಚು ಕಮ್ಮಿ ಆಗುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಈಗ ಸಿಎನ್‌ಜಿ ರೇಟ್ ಕೂಡ ಪೆಟ್ರೋಲ್ ಬೆನ್ನತ್ತಿ ಹೊರಟಿರುವುದರಿಂದ ಟ್ಯಾಕ್ಸಿ ಹಾಗೂ ಆಟೋ ಚಾಲಕರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ದಿನವಿಡೀ ಕಷ್ಟಪಟ್ಟು ದುಡಿದ ಹಣವೆಲ್ಲಾ ಗ್ಯಾಸ್ ಫಿಲ್ ಮಾಡಿಸಲೇ ಖಾಲಿಯಾಗುತ್ತಿದ್ದರೆ, ಮನೆ ನಡೆಸೋದು ಹೇಗೆ ಅನ್ನೋದು ಇವರ ಚಿಂತೆ. ಸಿಎನ್‌ಜಿ ಬಳಸುವುದರಿಂದ ಸಿಗುತ್ತಿದ್ದ ಆ ಆರ್ಥಿಕ ಲಾಭ ಈಗ ನಿಧಾನವಾಗಿ ಕರಗಿ ಹೋಗುತ್ತಿದೆ. ಇದೇ ರೀತಿ ಬೆಲೆ ಏರಿಕೆ ಮುಂದುವರಿದರೆ ಸಾರ್ವಜನಿಕ ಸಾರಿಗೆ ಮತ್ತು ಆಟೋ, ಟ್ಯಾಕ್ಸಿ ಪ್ರಯಾಣದ ದರಗಳೂ ಕೂಡ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

Latest News