ದೆಹಲಿಯಲ್ಲಿ ಅಮಿತ್ ಶಾ ಜೊತೆ ಡಿ.ಕೆ. ಶಿವಕುಮಾರ್ ಮಹತ್ವದ ಭೇಟಿ - ಕರ್ನಾಟಕ ಪೊಲೀಸ್ ಹೈಟೆಕ್ ಮಾಡಲು ಸಲ್ಲಿಕೆಯಾಯ್ತು 9 ಪ್ರಮುಖ ಬೇಡಿಕೆಗಳು!!

ನವದೆಹಲಿ: ಕರ್ನಾಟಕ ರಾಜ್ಯದ ಭದ್ರತಾ ಮೂಲಸೌಕರ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಪೊಲೀಸ್ ಇಲಾಖೆಯ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಲು ನೆರವಾಗುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಬೃಹತ್ ಮನವಿಯೊಂದನ್ನು ಸಲ್ಲಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಸಿಎಂ, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಆಧುನೀಕರಿಸಲು ಕೇಂದ್ರದಿಂದ ಆರ್ಥಿಕ ಮತ್ತು ಆಡಳಿತಾತ್ಮಕ ನೆರವನ್ನು ಒದಗಿಸುವಂತೆ ಹಲವು ಪ್ರಮುಖ ಪ್ರಸ್ತಾವನೆಗಳನ್ನು ಮಂಡಿಸಿದರು.

ಸೈಬರ್ ಕ್ರೈಮ್‌ಗೆ ಬೀಳಲಿದೆ ಬ್ರೇಕ್
ಸೈಬರ್ ಕ್ರೈಮ್‌ಗೆ ಬೀಳಲಿದೆ ಬ್ರೇಕ್

ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRBs) ಸ್ಥಾಪನೆ, ಪೊಲೀಸ್ ಇಲಾಖೆಯ ಚಟುವಟಿಕೆಗಳಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ಬಳಕೆ ಹಾಗೂ ಅತ್ಯಾಧುನಿಕ ಸೈಬರ್ ಕ್ರೈಮ್ ಕಂಟ್ರೋಲ್ ಯುನಿಟ್ ರಚನೆ ಸೇರಿದಂತೆ ಒಟ್ಟು 9 ಪ್ರಮುಖ ಅಂಶಗಳ ಬೇಡಿಕೆಯನ್ನು ಗೃಹ ಸಚಿವರಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ ಮನವಿಯ ಪ್ರಮುಖ ೯ ಅಂಶಗಳು

ಕರ್ನಾಟಕ ರಾಜ್ಯ ಪೊಲೀಸ್‌ಗೆ 'ಪ್ರೆಸಿಡೆಂಟ್ಸ್  ಕಲರ್' ಗೌರವ

ರಾಜ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಗೆ ದೇಶದ ಅತ್ಯುನ್ನತ ಸೇನಾ ಹಾಗೂ ಪೊಲೀಸ್ ಗೌರವವಾದ 'ಪ್ರೆಸಿಡೆಂಟ್ಸ್ ಕಲರ್' (ರಾಷ್ಟ್ರಪತಿಗಳ ಅತ್ಯುನ್ನತ ಗೌರವ) ಪ್ರಶಸ್ತಿಯನ್ನು ನೀಡುವಂತೆ ಸಿಎಂ ಕೋರಿದ್ದಾರೆ. ಈ ಕುರಿತ ಪ್ರಸ್ತಾವನೆಯನ್ನು ಈಗಾಗಲೇ 2024ರ ಮೇ ತಿಂಗಳಲ್ಲೇ ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಅದು ಸದ್ಯ ಪರಿಶೀಲನೆಯಲ್ಲಿದೆ. ಕರ್ನಾಟಕದ ಹೆಮ್ಮೆಯ ಪೊಲೀಸ್ ಇಲಾಖೆಗೆ ಈ ಪ್ರತಿಷ್ಠಿತ ಗೌರವವನ್ನು ಶೀಘ್ರವಾಗಿ ಅನುಮೋದಿಸಬೇಕು ಎಂದು ವಿನಂತಿಸಲಾಗಿದೆ.

ಎರಡು ಹೊಸ ಐಆರ್‌ಬಿ (IRB) ಬೆಟಾಲಿಯನ್‌ಗಳ ಸ್ಥಾಪನೆ

ರಾಜ್ಯದ ಭದ್ರತೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRBs) ಸೃಷ್ಟಿಗೆ ಬೇಡಿಕೆ ಇಡಲಾಗಿದೆ. ಇದರ ಅಂದಾಜು ವೆಚ್ಚ 243.87 ಕೋಟಿ ರೂ.ಗಳಾಗಿದ್ದು, 2025ರ ಫೆಬ್ರವರಿಯಲ್ಲಿ ಸಲ್ಲಿಸಲಾದ ಈ ಹೊಸ ಪ್ರಸ್ತಾವನೆಗೆ ಶೀಘ್ರವಾಗಿ ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.

ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕಾಗಿ ೨೮೦ ಕೋಟಿ ರೂ. ನೆರವು (ASUMP)

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಆಧುನೀಕರಣ (ASUMP) ಯೋಜನೆ 2025-26 ರ ಅಡಿಯಲ್ಲಿ, ಕರ್ನಾಟಕದ ನಾಲ್ಕು ಪ್ರಮುಖ ನಗರಗಳಲ್ಲಿ ಅತ್ಯಾಧುನಿಕ 'ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು' ಹಾಗೂ ಅತ್ಯಾಧುನಿಕ ಸಂವಹನ ಉಪಕರಣಗಳನ್ನು ಅಳವಡಿಸಲು 280.00 ಕೋಟಿ ರೂ.ಗಳ ಆರ್ಥಿಕ ನೆರವನ್ನು ಕೋರಲಾಗಿದೆ.

ಪೊಲೀಸ್ ಚಟುವಟಿಕೆಗಳಿಗೆ ಸಿಎಸ್ಆರ್ (CSR) ನಿಧಿ ಬಳಸಲು ಅವಕಾಶ

ಖಾಸಗಿ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಪೊಲೀಸ್ ಕಲ್ಯಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಕಂಪನಿಗಳ ಕಾಯ್ದೆ 2013ರ ಶೆಡ್ಯೂಲ್ VIIರ ಅಡಿಯಲ್ಲಿ ಪೊಲೀಸ್ ಸಂಬಂಧಿತ ಚಟುವಟಿಕೆಗಳನ್ನು ಸೇರಿಸಲು ಕೇಂದ್ರದ ಅನುಮೋದನೆಯನ್ನು ಸಿಎಂ ಯಾಚಿಸಿದ್ದಾರೆ.

ತರಬೇತಿ, ಜೈಲುಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೇಲ್ದರ್ಜೀಕರಣ

ಪೊಲೀಸ್ ತರಬೇತಿ ಸಂಸ್ಥೆಗಳ ಅಭಿವೃದ್ಧಿ

ಬಿಪಿಆರ್‌ಆಂಡ್‌ಡಿ (BPR&D) ಮಾರ್ಗಸೂಚಿಗಳ ಪ್ರಕಾರ ನಡೆಸಲಾದ ಗ್ಯಾಪ್ ಅನಾಲಿಸಿಸ್ ವರದಿಯ ಆಧಾರದ ಮೇಲೆ, ರಾಜ್ಯದ ಪೊಲೀಸ್ ತರಬೇತಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲು 258.53 ಕೋಟಿ ರೂ.ಗಳ ವಿವರವಾದ ಪ್ರಸ್ತಾವನೆಗೆ ಕೇಂದ್ರದ ಸಮ್ಮತಿ ಕೋರಲಾಗಿದೆ.

ಕಾರಾಗೃಹಗಳ (ಜೈಲುಗಳ) ಆಧುನೀಕರಣ

ರಾಜ್ಯದ ಕಾರಾಗೃಹಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಸಿಸಿಟಿವಿಗಳು, ಆಧುನಿಕ ವಾಕಿ-ಟಾಕಿಗಳು ಮತ್ತು ಜ್ಯಾಮರ್ ಸೇರಿದಂತೆ ಇತರೆ ಭದ್ರತಾ ಉಪಕರಣಗಳ ಖರೀದಿಗೆ 2025-26 ರ ಸಾಲಿಗೆ 20 ಕೋಟಿ ರೂ.ಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆ

ಮಾನ್ಯ ಭಾರತದ ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನುಸಾರ, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಹೆಚ್ಚಿನ ತಾಂತ್ರಿಕ ಸಾಮರ್ಥ್ಯದ ಕ್ಯಾಮೆರಾಗಳನ್ನು ಅಳವಡಿಸಲು ASUMP ಅಡಿಯಲ್ಲಿ 278.26 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸಲು ಕೋರಲಾಗಿದೆ.

ಸೈಬರ್ ಅಪರಾಧಗಳ ನಿಗ್ರಹಕ್ಕೆ ೩೬೦ ಕೋಟಿ ರೂ. ವೆಚ್ಚದ 'K4C' ಘಟಕ

ಇತ್ತೀಚಿನ ದಿನಗಳಲ್ಲಿ ಸಮಾಜ, ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿರುವ ಸೈಬರ್ ಅಪರಾಧಗಳನ್ನು ತಡೆಯಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಲ್ಲೇ ಮಾದರಿಯಾಗುವಂತೆ ಅಂದಾಜು 360 ಕೋಟಿ ರೂ.ಗಳ ಬೃಹತ್ ವೆಚ್ಚದಲ್ಲಿ 'ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್' (K4C) ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಈ ಅತ್ಯಾಧುನಿಕ ಡಿಜಿಟಲ್ ಸುರಕ್ಷತಾ ಯೋಜನೆಗೆ ಕೇಂದ್ರ ಗೃಹ ಸಚಿವಾಲಯದ ಸಂಪೂರ್ಣ ಬೆಂಬಲ ಮತ್ತು ಅನುಮೋದನೆಯನ್ನು ಕೋರಲಾಗಿದೆ.

ಅಲ್ಲದೆ, ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 52-A ಅನ್ನು ರಾಜ್ಯದಲ್ಲಿ ಜಾರಿಗೆ ತರಲು ಸದ್ಯದ ಗಡುವನ್ನು ವಿಸ್ತರಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ಚರ್ಚಿಸಿ ಅನುಮೋದನೆ ಕೊಡಿಸಬೇಕೆಂದು ಕೇಂದ್ರ ಗೃಹ ಸಚಿವರಲ್ಲಿ ಡಿ.ಕೆ. ಶಿವಕುಮಾರ್ ಅವರು ವಿಶೇಷವಾಗಿ ವಿನಂತಿಸಿಕೊಂಡಿದ್ದಾರೆ.

ಮುಖ್ಯಮಂತ್ರಿಯವರ ಆಶಯ: ಕರ್ನಾಟಕವು ಕೈಗಾರಿಕೆ ಹಾಗೂ ಐಟಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ. ಇಲ್ಲಿನ ಆಂತರಿಕ ಭದ್ರತೆ ಮತ್ತು ಸೈಬರ್ ಸುರಕ್ಷತೆ ಇಡೀ ದೇಶಕ್ಕೆ ಮುಖ್ಯವಾಗಿದೆ. ಕೇಂದ್ರ ಸರ್ಕಾರವು ನಮ್ಮ ಈ ಎಲ್ಲಾ ಪ್ರಸ್ತಾವನೆಗಳನ್ನು ಶೀಘ್ರವಾಗಿ ಪುರಸ್ಕರಿಸುವ ಮೂಲಕ ರಾಜ್ಯ ಪೊಲೀಸರ ಹಸ್ತವನ್ನು ಬಲಪಡಿಸಲಿದೆ ಎಂಬ ಆಶಾವಾದ ನಮಗಿದೆ.

ರಾಜ್ಯದ ಭದ್ರತೆಗೆ ಸಂಬಂಧಿಸಿದ ಈ ಎಲ್ಲಾ ಬೇಡಿಕೆಗಳನ್ನು ಅತ್ಯಂತ ಗಮನವಿಟ್ಟು ಆಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪ್ರಸ್ತಾವನೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Latest News

Related News