ಛೋರ್ಲಾ ಘಾಟ್‌ನಲ್ಲಿ ನಡೆದಿರುವ 400 ಕೋಟಿ ರೂಪಾಯಿ ದರೋಡೆ ಪ್ರಕರಣವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕಾಗಿ ಮಹಾರಾಷ್ಟ್ರದ ಎಸ್ಐಟಿ ತಂಡವು ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಬಿಲ್ಡರ್ ಕಿಶೋರ್ ಸೇಠ್ ಹಾಗೂ ಕಂಟೇನರ್ ವಾಹನದ ಉಸ್ತುವಾರಿ ವಹಿಸಿದ್ದ ಅಜರ್ ಪತ್ತೆಗೆ ಮಹಾ ಶೋಧ ಮುಂದುವರಿದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ಆಡಿಯೋ ಸಂಭಾಷಣೆ ಎಸ್ಐಟಿ ಗಮನ ಸೆಳೆದಿದ್ದು, ಅದರ ಸತ್ಯಾಸತ್ಯತೆ ಪರಿಶೀಲನೆ ನಡೆಯುತ್ತಿದೆ. ಮಹಾರಾಷ್ಟ್ರದ ಎಸ್ಐಟಿ ಮುಖ್ಯಸ್ಥ ಆದಿತ್ಯ ಮೀರಖೇಲಕರ್ ಅವರ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಗುಜರಾತ್ ಮೂಲದ ರಾಜಕಾರಣಿ, ಆಶ್ರಮ, ಹಣದ ಸಾಗಾಟ ಮತ್ತು ಪ್ಯಾಕಿಂಗ್, ಆಶ್ರಮದಲ್ಲಿ ನಡೆಯುತ್ತಿರುವ ಬ್ಲಾಕ್ ಟು ವೈಟ್ ದಂಧೆ ಎಂಬ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಬೆಳಗಾವಿ ಪೊಲೀಸರು ತನಿಖೆಗೆ ಸಹಕಾರ ಕೋರಿ ಮಹಾರಾಷ್ಟ್ರ ಪೊಲೀಸರಿಗೆ ಪತ್ರ ಬರೆದಿದ್ದರೂ, ಅದು ಕೇವಲ ಪತ್ರದ ಮಟ್ಟಿಗೆ ಸೀಮಿತವಾಗಿದೆ. ಮಹಾರಾಷ್ಟ್ರದ ನಾಸಿಕ ಪೊಲೀಸರು ಯಾವುದೇ ಮಾಹಿತಿ ಹಂಚಿಕೊಳ್ಳದೆ, ಆರೋಪಿಗಳ ವಿಚಾರಣೆಗೆ ಅವಕಾಶ ನೀಡದೆ ಬೆಳಗಾವಿ ಪೊಲೀಸರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ಲಿಖಿತ ಪತ್ರ ನೀಡಿದರೂ ಸಹಕಾರ ದೊರೆಯದಿರುವುದು ಬೆಳಗಾವಿ ಪೊಲೀಸರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ನಾಲ್ಕು ದಿನ ಕಳೆದರೂ ದರೋಡೆ ನಿಜವಾಗಿಯೇ ನಡೆದಿದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಹಾರಾಷ್ಟ್ರ ಎಸ್ಐಟಿ ತನಿಖೆ ನಡೆಸುತ್ತಿದ್ದರೂ, ಕರ್ನಾಟಕ ಪೊಲೀಸರಿಗೆ ಸಹಕಾರ ನೀಡದಿರುವುದು ಪ್ರಕರಣವನ್ನು ಇನ್ನಷ್ಟು ಗೊಂದಲಗೊಳಿಸಿದೆ. ಬೆಳಗಾವಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ನಾಸಿಕದಲ್ಲೇ ತಂಗಿ ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ, ಕಿಡ್ನಾಪ್ ಆಗಿದ್ದ ಸಂದೀಪ್ ಪಾಟೀಲ್ ವಿಚಾರಣೆ ನಡೆಸಲು ಬೆಳಗಾವಿ ಪೊಲೀಸರು ಪ್ರಯತ್ನಿಸಿದರೂ, ಮಹಾರಾಷ್ಟ್ರ ಎಸ್ಐಟಿ ವಶದಲ್ಲಿರುವ ಆರೋಪಿಗಳ ವಿಚಾರಣೆಗೆ ಅವಕಾಶ ನೀಡಲಾಗಿಲ್ಲ. ಇದರಿಂದ ಬೆಳಗಾವಿ ಪೊಲೀಸರ ತನಿಖೆ ಅಸಾಧ್ಯವಾಗುತ್ತಿದೆ.
ಒಟ್ಟಾರೆ, ಛೋರ್ಲಾ ಘಾಟ್‌ನ 400 ಕೋಟಿ ದರೋಡೆ ಪ್ರಕರಣವು ರಾಜ್ಯಗಳ ನಡುವಿನ ತನಿಖಾ ಸಹಕಾರದ ಕೊರತೆಯಿಂದ ಗೊಂದಲಕ್ಕೆ ತುತ್ತಾಗಿದೆ. ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸುತ್ತಿರುವ ಮಹಾರಾಷ್ಟ್ರ ಪೊಲೀಸರು, ಆಡಿಯೋ ಸಂಭಾಷಣೆಯ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದ ನಿಜಾಸತ್ಯ ಹೊರಬರುವವರೆಗೂ ಜನರಲ್ಲಿ ಕುತೂಹಲ ಮತ್ತು ಆತಂಕ ಮುಂದುವರಿಯಲಿದೆ.