ಶೃಂಗೇರಿ-ಹೊರನಾಡು ಭಕ್ತರೇ ಎಚ್ಚರ - 24 ಗಂಟೆ ಬ್ಯುಸಿ ಇರೋ ಹೈವೇಯಲ್ಲೇ ಒಂಟಿ ಸಲಗ!!

ಚಿಕ್ಕಮಗಳೂರು ಅಂದ ತಕ್ಷಣ ಕಣ್ಣ ಮುಂದೆ ಬರೋದು ತಂಪು ಹವಾಮಾನ ಮತ್ತು ಅಂಕುಡೊಂಕಿನ ಸುಂದರ ರಸ್ತೆಗಳು. ಆದರೆ ಅದೇ ರಸ್ತೆಗಳಲ್ಲಿ ಈಗ ಸಂಚರಿಸೋಕೆ ಜನ ಭಯಪಡುವಂತಾಗಿದೆ. ಹೌದು, ಚಿಕ್ಕಮಗಳೂರು-ಬಾಳೆಹೊನ್ನೂರು ರಾಜ್ಯ ಹೆದ್ದಾರಿಯಲ್ಲಿ ಕಳೆದ ಕೆಲವು ದಿನಗಳಿಂದ "ಗಜರಾಜ"ನ ಹಾವಳಿ ಹೆಚ್ಚಾಗಿದ್ದು, ಪ್ರಯಾಣಿಕರ ಎದೆಯಲ್ಲಿ ನಡುಕ ಶುರುವಾಗಿದೆ.

ಬಾಳೆಹೊನ್ನೂರು ರಸ್ತೆಯ ಎಲೆ ಕಲ್ಲು ಘಾಟಿಯಲ್ಲಿ ಬೀಡುಬಿಟ್ಟಿದೆ ಬೃಹತ್ ಆನೆ
ಬಾಳೆಹೊನ್ನೂರು ರಸ್ತೆಯ ಎಲೆ ಕಲ್ಲು ಘಾಟಿಯಲ್ಲಿ ಬೀಡುಬಿಟ್ಟಿದೆ ಬೃಹತ್ ಆನೆ

ಎಲೆ ಕಲ್ಲು ಘಾಟಿಯಲ್ಲಿ ಆನೆ ದರ್ಶನ!
ಬಾಳೆಹೊನ್ನೂರು ಸಮೀಪದ ಎಲೆ ಕಲ್ಲು ಘಾಟಿ ಬಳಿ ಈ ಘಟನೆ ನಡೆದಿದೆ. ಸುಮಾರು ಎರಡೂವರೆ-ಮೂರು ಅಡಿ ಉದ್ದದ ದಂತವಿರೋ ಬೃಹತ್‌ ಗಾತ್ರದ ಒಂಟಿ ಸಲಗವೊಂದು ರಸ್ತೆಯಲ್ಲೇ ಬೀಡುಬಿಡುತ್ತಿದೆ. ಈ ಘಾಟಿಯ ತಿರುವಿನಲ್ಲಿ ಹಠಾತ್ತನೆ ಆನೆ ಪ್ರತ್ಯಕ್ಷವಾಗುತ್ತಿರುವುದು ವಾಹನ ಸವಾರರನ್ನು ಕಂಗೆಡಿಸಿದೆ. ರಸ್ತೆಯ ಅಂಚಿನಲ್ಲಿ ಅಥವಾ ರಸ್ತೆ ಮಧ್ಯೆಯೇ ನಿಂತುಬಿಡುವ ಈ ಸಲಗನ ಕಂಡು ಭಕ್ತರು ಹಾಗೂ ಪ್ರವಾಸಿಗರು ದಾರಿ ಬದಲಿಸುವಂತಾಗಿದೆ.

24 ಗಂಟೆಯೂ ಬ್ಯುಸಿ ಇರೋ ರಸ್ತೆ ಇದು!
ನಿಮಗೆ ಗೊತ್ತಿರಲಿ, ಈ ಚಿಕ್ಕಮಗಳೂರು-ಬಾಳೆಹೊನ್ನೂರು ರಾಜ್ಯ ಹೆದ್ದಾರಿ ಬರೀ ಸ್ಥಳೀಯರಿಗಷ್ಟೇ ಸೀಮಿತವಲ್ಲ. ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಹೋಗುವವರು, ಕಳಸ ಅಥವಾ ಹೊರನಾಡಿಗೆ ತೆರಳುವ ಭಕ್ತರು ಹಗಲಿರುಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. 24 ಗಂಟೆಯೂ ವಾಹನಗಳ ಸದ್ದು ಕೇಳಿಸುವ ಈ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.

ಅಪಘಾತದ ಭೀತಿ: ತಿರುವಿನಲ್ಲಿ ಜಾಗರೂಕರಾಗಿರಿ
ಈ ಎಲೆ ಕಲ್ಲು ಘಾಟಿ ಪ್ರದೇಶದಲ್ಲಿ ರಸ್ತೆ ತುಂಬಾ ಕಿರಿದಾಗಿದ್ದು, ಭಯಾನಕ ತಿರುವುಗಳಿವೆ. ಚಾಲಕರು ವೇಗವಾಗಿ ವಾಹನ ಚಲಾಯಿಸುವಾಗ ದಿಢೀರನೆ ಆನೆ ಎದುರಾದರೆ ಬ್ರೇಕ್ ಹಾಕೋಕು ಸಮಯ ಸಿಗಲ್ಲ. "ತಿರುವಿನಲ್ಲಿ ಆನೆಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಿದೆ ಅಥವಾ ಆನೆಯೇ ವಾಹನಗಳ ಮೇಲೆ ದಾಳಿ ಮಾಡಬಹುದು" ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಂಜು ಮುಸುಕಿದ ವಾತಾವರಣ ಇರುವಾಗಲಂತೂ ಆನೆ ಇರುವುದು ಕಣ್ಣಿಗೇ ಕಾಣಿಸಲ್ಲ, ಇದು ಇನ್ನು ಅಪಾಯಕಾರಿ.

"ನೋಡೋಕೆ ಆನೆ ಚೆನ್ನಾಗಿಯೇ ಕಾಣಬಹುದು, ಆದರೆ ಪ್ರಾಣಕ್ಕೇ ಕುತ್ತು ಬರುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು" ಅನ್ನೋದು ಸ್ಥಳೀಯರ ಅಳಲು. ಬರೀ ಪ್ರವಾಸಿಗರಷ್ಟೇ ಅಲ್ಲದೆ ನಿತ್ಯ ಕೆಲಸಕ್ಕೆ ಹೋಗುವವರು ಕೂಡ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಈ ಉದ್ದ ದಂತದ ಒಂಟಿ ಸಲಗವನ್ನು ಇಲ್ಲಿಂದ ಸ್ಥಳಾಂತರಿಸಿ, ಕಾಡಿನ ಒಳಗಡೆ ಬಿಡಬೇಕು ಎಂದು ಜನರು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.

ಪ್ರಯಾಣಿಕರಿಗೆ ವಿಶೇಷ ಸೂಚನೆ: ನೀವು ಏನಾದರೂ ಶೃಂಗೇರಿ ಅಥವಾ ಹೊರನಾಡು ಪ್ರವಾಸ ಪ್ಲಾನ್ ಮಾಡುತ್ತಿದ್ದರೆ, ಬಾಳೆಹೊನ್ನೂರು ಮಾರ್ಗದಲ್ಲಿ ಸಂಚರಿಸುವಾಗ ಸ್ವಲ್ಪ ಅಲರ್ಟ್ ಆಗಿರಿ. ಘಾಟಿ ತಿರುವುಗಳಲ್ಲಿ ವಾಹನ ಚಲಾಯಿಸುವಾಗ ಅತೀ ವೇಗ ಬೇಡ. ಒಂದು ವೇಳೆ ಆನೆ ಕಂಡುಬಂದರೆ ಹಾರ್ನ್ ಮಾಡಬೇಡಿ ಅಥವಾ ಹತ್ತಿರ ಹೋಗಿ ಸೆಲ್ಫಿ ತಗೊಳ್ಳೋ ಸಾಹಸಕ್ಕೆ ಕೈ ಹಾಕಬೇಡಿ.