Feb 16, 2026 Languages : ಕನ್ನಡ | English

ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ 7 ದಿನ ಸಿಐಡಿ ಕಸ್ಟಡಿ - ಜಯದೇವ ಆಸ್ಪತ್ರೆ ರಿಪೋರ್ಟ್ ಬೆನ್ನಲ್ಲೇ ಬಿಗ್ ಶಾಕ್!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ 'ಬಿಕ್ಲು ಶಿವ' ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಬೈರತಿ ಬಸವರಾಜ್ ಅವರಿಗೆ ಸಂಕಷ್ಟ ಎದುರಾಗಿದೆ. ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆ ಸೇರಿದ್ದ ಶಾಸಕರಿಗೆ ಈಗ ವೈದ್ಯಕೀಯ ವರದಿಗಳ ಆಧಾರದ ಮೇಲೆ ನ್ಯಾಯಾಲಯವು 7 ದಿನಗಳ ಕಾಲ (ಫೆಬ್ರವರಿ 21ರವರೆಗೆ) ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

ಸಿಐಡಿ ತನಿಖೆ ತೀವ್ರಗೊಳಿಸಿದ ಬಿಕ್ಲು ಶಿವ ಪ್ರಕರಣ – ಬೈರತಿ ಬಸವರಾಜ್ ಕಸ್ಟಡಿಯಲ್ಲಿ
ಸಿಐಡಿ ತನಿಖೆ ತೀವ್ರಗೊಳಿಸಿದ ಬಿಕ್ಲು ಶಿವ ಪ್ರಕರಣ – ಬೈರತಿ ಬಸವರಾಜ್ ಕಸ್ಟಡಿಯಲ್ಲಿ

ವೈದ್ಯಕೀಯ ವರದಿ ನಾರ್ಮಲ್: ಕಸ್ಟಡಿಗೆ ನೀಡಿದ ಕೋರ್ಟ್!

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ-5 (A5) ಆರೋಪಿಯಾಗಿರುವ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಬಂಧನದ ಬೆನ್ನಲ್ಲೇ ಎದೆನೋವು ಹಾಗೂ ಅನಾರೋಗ್ಯದ ಕಾರಣ ನೀಡಿ ಅವರು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು 42ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಶಾಸಕರನ್ನು ಹಾಜರುಪಡಿಸಲಾಯಿತು.

ಜಯದೇವ ಆಸ್ಪತ್ರೆಯ ವೈದ್ಯರು ನೀಡಿದ ವರದಿಯನ್ನು ಪರಿಶೀಲಿಸಿದ ನ್ಯಾಯಾಧೀಶ ಕೆ.ಎನ್. ಶಿವಕುಮಾರ್, ಶಾಸಕರ ಹೃದಯ ಸಂಬಂಧಿ ಹಾಗೂ ಇತರೆ ಎಲ್ಲಾ ಆರೋಗ್ಯ ವರದಿಗಳು 'ನಾರ್ಮಲ್' ಆಗಿವೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಅವರನ್ನು ಫೆಬ್ರವರಿ 21ರ ಮಧ್ಯಾಹ್ನ 1 ಗಂಟೆಯವರೆಗೆ ಸಿಐಡಿ ವಶಕ್ಕೆ ನೀಡಿದ್ದಾರೆ. ತನಿಖೆಯ ಹಿತದೃಷ್ಟಿಯಿಂದ ಈ ಆದೇಶ ಮಹತ್ವದ್ದಾಗಿದೆ.

ರಾಜಕೀಯ ಷಡ್ಯಂತರ ಎಂದ ಬಿ.ವೈ. ವಿಜಯೇಂದ್ರ

ಬೈರತಿ ಬಸವರಾಜ್ ಅವರ ಬಂಧನ ಮತ್ತು ಸಿಐಡಿ ಕಸ್ಟಡಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಸವರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಇದು ಶುದ್ಧ ರಾಜಕೀಯ ಷಡ್ಯಂತರ" ಎಂದು ಕಿಡಿಕಾರಿದ್ದಾರೆ.

"ನನ್ನ ತಂದೆ ಯಡಿಯೂರಪ್ಪ ಹಾಗೂ ನನ್ನ ಮೇಲೆ 30-40 ಕೇಸ್‌ಗಳನ್ನು ಹಾಕಲಾಗಿತ್ತು, ಇವೆಲ್ಲವನ್ನೂ ನಾವು ಎದುರಿಸಿದ್ದೇವೆ. ಬೈರತಿ ಬಸವರಾಜ್ ಅವರು ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವರು. ಅವರ ಧೈರ್ಯವನ್ನು ರಾಜ್ಯದ ಜನತೆ ಮರೆಯುವುದಿಲ್ಲ. ಇಡೀ ಪಕ್ಷ ಅವರ ಬೆನ್ನಿಗಿದೆ, ಕಾನೂನು ಹೋರಾಟವನ್ನು ಸಮರ್ಥವಾಗಿ ನಡೆಸುತ್ತೇವೆ," ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಪ್ರಕರಣದ ಹಿನ್ನೆಲೆ ಏನು?

ಬಿಕ್ಲು ಶಿವ ಎಂಬುವವರ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು. ಸಿಐಡಿ ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದು, ಈಗ ಕಸ್ಟಡಿಗೆ ಪಡೆದಿರುವ ಕಾರಣ ಶಾಸಕರಿಂದ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ. ನ್ಯಾಯಾಲಯವು ಶಾಸಕರ ಕೋರಿಕೆಯಂತೆ ಅವರಿಗೆ ಸೂಕ್ತ ಊಟದ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದೆ.