ಕೇವಲ ಒಂದೇ ಒಂದು ಆನ್‌ಲೈನ್ ಆ್ಯಪ್ ಮೂಲಕ ದೇಶದ ಎಜುಕೇಶನ್ ಸಿಸ್ಟಮ್ ಅನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದ ಬೈಜೂಸ್ (Byju's) ಸಂಸ್ಥಾಪಕ ಬೈಜು ರವೀಂದ್ರನ್ ಸದ್ಯ ಬಿಗ್ ಟ್ರಬಲ್‌ನಲ್ಲಿದ್ದಾರೆ. ತಲೆಗೆ ಹತ್ತಿರ ಹತ್ತಿರ ಹತ್ತು ಸಾವಿರ ಕೋಟಿಗೂ ಹೆಚ್ಚು ಸಾಲ, ಇನ್ವೆಸ್ಟರ್ಸ್ ಜೊತೆ ರಂಪಾಟದ ಮಧ್ಯೆ ಈಗ ಸಿಂಗಾಪುರ ನ್ಯಾಯಾಲಯ ಭಾರತದ ಈ ಮಾಜಿ ಬಿಲಿಯನೇರ್‌ಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್ ಆದೇಶವನ್ನು ಗೌರವಿಸದೇ ಪದೇ ಪದೇ ಕಾನೂನು ಉಲ್ಲಂಘನೆ (Contempt of Court) ಮಾಡಿದ ಹಿನ್ನೆಲೆಯಲ್ಲಿ ಈ ಕಠಿಣ ಶಿಕ್ಷೆ ಪ್ರಕಟವಾಗಿದೆ.
ಏನಿದು ಆಸ್ತಿ ಮುಚ್ಚಿಟ್ಟ ಹೈಡ್ರಾಮಾ? (The Inside Story)
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಈ ಇಡೀ ಜೈಲು ಶಿಕ್ಷೆಯ ಕಥೆ ಲಿಂಕ್ ಆಗಿರೋದು ಆಸ್ತಿ ವಿವರಗಳ ಮುಚ್ಚಿಡುವ ಆಟಕ್ಕೆ! 2024ರ ಏಪ್ರಿಲ್‌ನಿಂದ ಸಿಂಗಾಪುರ ಕೋರ್ಟ್ ಬೈಜು ರವೀಂದ್ರನ್‌ಗೆ "ನಿಮ್ಮ ಕಂಪನಿಯ ಹಣಕಾಸು ವಹಿವಾಟುಗಳು ಮತ್ತು ಆಸ್ತಿ ಎಲ್ಲೆಲ್ಲಿದೆ ಎಂಬ ಸಂಪೂರ್ಣ ರಿಪೋರ್ಟ್ ಕೊಡಿ" ಎಂದು ಕಟ್ಟುನಿಟ್ಟಿನ ಆರ್ಡರ್ ಮಾಡಿತ್ತು. ಆದರೆ ಕೋರ್ಟ್ ಡೆಡ್‌ಲೈನ್‌ಗಳನ್ನೇ ಲೆಕ್ಕಿಸದ ಬೈಜು, ಮಾಹಿತಿ ನೀಡದೆ ನುಣುಚಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಕೊನೆಗೆ ಗರಂ ಆದ ಜಡ್ಜ್‌ಗಳು, "ಕಾನೂನು ಎಲ್ಲರಿಗೂ ಒಂದೇ" ಎಂದು ಛೀಮಾರಿ ಹಾಕಿ, ಬೈಜುಗೆ ಅಧಿಕಾರಿಗಳ ಮುಂದೆ ತಕ್ಷಣವೇ ಸರೆಂಡರ್ ಆಗುವಂತೆ ವಾರಂಟ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಇಡೀ ಲೀಗಲ್ ಫೈಟ್‌ನ ಖರ್ಚು ವೆಚ್ಚದ ದಂಡವಾಗಿ 70,500 ಸಿಂಗಾಪುರ್ ಡಾಲರ್ ಪಾವತಿಸಲು ತೀರ್ಪು ನೀಡಿದ್ದಾರೆ. ಜೊತೆಗೆ ಇವರ ಅಡಿಯಲ್ಲಿರುವ 'ಬೀಯರ್ ಇನ್ವೆಸ್ಟ್‌ಕೋ' (Beeaar Investco Pte) ಕಂಪನಿಯ ಒಡೆತನದ ಅಸಲಿ ಕಾಗದಪತ್ರಗಳನ್ನು ತರುವಂತೆ ಗಡುವು ನೀಡಿದ್ದಾರೆ.
ಕತಾರ್ ಇನ್ವೆಸ್ಟರ್ಸ್ ಕೊಟ್ಟ ಬಿಗ್ ಶಾಕ್!
ನಿಮಗೆ ಗೊತ್ತಿರಲಿ, ಈ ಕೇಸ್ ಮುನ್ನೆಲೆಗೆ ತಂದಿದ್ದು ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ (QIA) ಒಂದು ಸಬ್ಸಿಡಿಯರಿ ಸಂಸ್ಥೆ. ಬೈಜೂಸ್ ಕಂಪನಿ ನಷ್ಟದಲ್ಲಿದ್ದಾಗ, ನೌಕರರನ್ನು ಕೆಲಸದಿಂದ ವಜಾ ಮಾಡುತ್ತಿದ್ದ ಆ ದಿನಗಳಲ್ಲಿ ಇವರು ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದರು. ಆದರೆ ಮ್ಯಾನೇಜ್‌ಮೆಂಟ್‌ನ ನಡವಳಿಕೆಯಿಂದ ಬೇಸತ್ತು ಕೊನೆಗೆ ನ್ಯಾಯಕ್ಕಾಗಿ ಸಿಂಗಾಪುರ ಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್‌ನಲ್ಲಿ ಕತಾರ್ ಸಂಸ್ಥೆಯ ಪರವಾಗಿ ಪ್ರಭಾವಿ ಲಾ ಫರ್ಮ್ 'ಡ್ರೂ ಆಂಡ್ ನೇಪಿಯರ್' ಸಖತ್ ವಾದ ಮಂಡಿಸಿದ್ದರೆ, ಬೈಜೂಸ್ ಇನ್ವೆಸ್ಟ್‌ಮೆಂಟ್ಸ್ ಪರವಾಗಿ 'ಫರ್ವೆಂಟ್ ಚೇಂಬರ್ಸ್' ಕೋರ್ಟ್‌ನಲ್ಲಿ ವಕಾಲತ್ತು ವಹಿಸಿತ್ತು. ಪ್ರಸ್ತುತ ಸಿಂಗಾಪುರ ಜೈಲು ಶಿಕ್ಷೆಯ ಆರ್ಡರ್ ಕಾಪಿ ಕೈ ಸೇರಿದ್ರೂ, ಬೈಜು ರವೀಂದ್ರನ್ ಎಲ್ಲಿದ್ದಾರೆ ಮತ್ತು ಅವರ ಮುಂದಿನ ಪ್ಲಾನ್ ಏನು ಅನ್ನೋದು ಇನ್ನು ನಿಗೂಢವಾಗಿದೆ.
'ಅರಸನಾಗಿದ್ದವನು ಅನಾಥನಾದ' ಕಥೆ: ಬೈಜೂಸ್ ಅರ್ಶದಿಂದ ಫರ್ಶಕ್ಕೆ!
ಕೇರಳದ ಒಬ್ಬ ಸಾಮಾನ್ಯ ಗಣಿತ ಶಿಕ್ಷಕನಾಗಿದ್ದ ಬೈಜು ರವೀಂದ್ರನ್, 'ಥಿಂಕ್ ಆಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್' ಆರಂಭಿಸಿದಾಗ ಇಡೀ ಭಾರತವೇ ಅವರ ಕಡೆ ತಿರುಗಿ ನೋಡಿತ್ತು. ಅದರಲ್ಲೂ ಕೋವಿಡ್ ಲಾಕ್‌ಡೌನ್ ಬಂದಾಗ ಮನೆಯಲ್ಲೇ ಕೂತಿದ್ದ ಮಕ್ಕಳಿಗೆ ಬೈಜೂಸ್ ಆ್ಯಪ್ ಅನಿವಾರ್ಯವಾಯಿತು. ಗ್ಲೋಬಲ್ ಫಂಡಿಂಗ್ ಸಿಕ್ಕಿದ್ದೇ ತಡ, ಕಂಪನಿಯ ವ್ಯಾಲ್ಯೂ ಬರೋಬ್ಬರಿ 22 ಬಿಲಿಯನ್ ಡಾಲರ್‌ಗೆ (ಅಂದಾಜು 1.8 ಲಕ್ಷ ಕೋಟಿ ರೂ.) ಜಂಪ್ ಹೊಡೆದಿತ್ತು. ಭಾರತದ ಕ್ರಿಕೆಟ್ ಜರ್ಸಿ ಮೇಲೆಯೂ ಬೈಜೂಸ್ ಲೋಗೋ ರಾರಾಜಿಸಿತ್ತು.
ಆದರೆ, 'ಬಂದಷ್ಟೇ ವೇಗವಾಗಿ ಹೋದ' ಎನ್ನುವಂತೆ ಕೋವಿಡ್ ಮುಗಿದು ಆಫ್‌ಲೈನ್ ಕ್ಲಾಸ್‌ಗಳು ಶುರುವಾದ ಮೇಲೆ ಬೈಜೂಸ್ ದಿನಗಳು ಉಲ್ಟಾ ಹೊಡೆದವು. ಅಮೆರಿಕದ ಕ್ರೆಡಿಟರ್ಸ್ 1.2 ಬಿಲಿಯನ್ ಡಾಲರ್ ಸಾಲ ವಾಪಸ್ ಕೇಳಿ ಕೋರ್ಟ್ ಹತ್ತಿದರು. ಸಂಬಳವಿಲ್ಲದೆ ಐಟಿ ನೌಕರರು ಬೀದಿಗೆ ಬಿದ್ದರು. ಸದ್ಯ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಅಂದು ಸಾವಿರಾರು ಕೋಟಿಯ ಒಡೆಯನಾಗಿದ್ದ ವ್ಯಕ್ತಿ ಇವತ್ತು ಸಿಂಗಾಪುರದಲ್ಲಿ ಕೈದಿಯಾಗುವ ಸ್ಥಿತಿ ಬಂದು ನಿಂತಿದೆ. ಸ್ಟಾರ್ಟ್‌ಅಪ್ ಲೋಕದಲ್ಲಿ ಅತಿಯಾದ ಹಪಾಹಪಿ ಮತ್ತು ತಪ್ಪು ನಿರ್ಧಾರಗಳು ಹೇಗೆ ಮಣ್ಣು ಮುಕ್ಕಿಸುತ್ತವೆ ಅನ್ನೋದಕ್ಕೆ ಬೈಜೂಸ್ ಕಥೆಯೇ ಕಣ್ಣೆದುರಿಗಿರೋ ಸಾಕ್ಷಿ.