ಎಲುಬಿಲ್ಲದ ನಾಲಿಗೆ ಅಂತ ಏನೇನೋ ಮಾತನಾಡಬೇಡಿ - ರಾಹುಲ್ ಗಾಂಧಿಗೆ, ಬಿ.ವೈ.ವಿಜಯೇಂದ್ರ ಕೊಟ್ಟ ಕಡಕ್ ಕೌಂಟರ್!!

ಲೋಕಸಭೆ ಚುನಾವಣೆಯ ಕಣದ ಬೆನ್ನಲ್ಲೇ ಈಗ ದೇಶದ ರಾಜಕಾರಣದಲ್ಲಿ ಮತ್ತೊಂದು ದೊಡ್ಡ ವಾಕ್ಸಮರ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರೋ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಕರ್ನಾಟಕ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ-ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ
ಪ್ರಧಾನಿ ಮೋದಿ-ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ನಾಯಕರ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.

"ಎಲುಬಿಲ್ಲದ ನಾಲಿಗೆ ಅಂತ ಏನೇನೋ ಮಾತನಾಡಬಾರದು!"

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರೋದನ್ನು ರಾಹುಲ್ ಗಾಂಧಿಗೆ ಸಹಿಸಿಕೊಳ್ಳಲು ಆಗ್ತಿಲ್ಲ ಅಂತ ವಿಜಯೇಂದ್ರ ಟೀಕಿಸಿದ್ದಾರೆ. "ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದವರು ಈ ರೀತಿ ಬಾಲಿಷವಾಗಿ ಮಾತನಾಡಬಾರದು. ಎಲುಬಿಲ್ಲದ ನಾಲಿಗೆ ಇದೆ ಅಂತ ಯಾರ ವಿರುದ್ಧ ಬೇಕಾದರೂ ಅವಮಾನಕರವಾಗಿ ಮಾತಾಡೋದು ಸರಿಯಲ್ಲ. ಹಿಂದುಳಿದ ಸಮಾಜದಿಂದ ಬಂದು ಮೂರನೇ ಬಾರಿಗೆ ಪ್ರಧಾನಿಯಾಗಿರೋ ಮೋದಿ ಅವರು ದೇಶವನ್ನು ವಿಶ್ವದ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಿದ್ದಾರೆ. ದೇಶದ ಈ ತರಹದ ಅಭಿವೃದ್ಧಿ ರಾಹುಲ್ ಗಾಂಧಿಗೆ ಸಹಿಸೋಕೆ ಆಗ್ತಿಲ್ಲ" ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಅಮಿತ್ ಶಾ ಅವರ ಸಾಧನೆಯನ್ನು ನೆನಪಿಸಿದ ವಿಜಯೇಂದ್ರ, "ಕಾಶ್ಮೀರದಲ್ಲಿ ಆರ್ಟಿಕಲ್ 370 ಕಿತ್ತು ಹಾಕುವ ಧೈರ್ಯ ಕಾಂಗ್ರೆಸ್‌ಗೆ ಇರಲಿಲ್ಲ. ಆ ಕೆಲಸವನ್ನು ಅಮಿತ್ ಶಾ ಮಾಡಿದ್ದಾರೆ. ದೇಶದಲ್ಲಿ ನಕ್ಸಲರನ್ನು ಬುಡಸಮೇತ ನಾಶ ಮಾಡಿದ್ದಾರೆ. ಇದಕ್ಕಾಗಿಯೇ ರಾಹುಲ್ ಗಾಂಧಿ ಅವರಿಗೆ ‘ದೇಶದ್ರೋಹಿ’ ಪಟ್ಟ ಕಟ್ಟುತ್ತಿದ್ದಾರಾ?" ಎಂದು ಪ್ರಶ್ನೆ ಮಾಡಿದ್ದಾರೆ.

"ವಿದೇಶಗಳಿಗೆ ಹೋಗಿ ಭಾರತದ ಗೌರವವನ್ನು ಹರಾಜು ಹಾಕುವ, ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ನಡೆದಾಗ ರಕ್ಷಿಸದ ರಾಹುಲ್ ಗಾಂಧಿ ಅವರೇ ಅಸಲಿ ದೇಶದ್ರೋಹಿ" ಅಂತ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲೂ ಇದ್ದಾರೆ ‘ನಾಲಾಯಕ್’ ಕಾಂಗ್ರೆಸ್ ಲೀಡರ್ಸ್!

ಕೇವಲ ಕೇಂದ್ರ ನಾಯಕರಷ್ಟೇ ಅಲ್ಲ, ರಾಜ್ಯದ ಕಾಂಗ್ರೆಸ್ ಸಚಿವರ ಮೇಲೂ ವಿಜಯೇಂದ್ರ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ. "ನಮ್ಮ ರಾಜ್ಯದಲ್ಲೂ ಕೆಲವು ನಾಲಾಯಕ್ ಕಾಂಗ್ರೆಸ್ ಮುಖಂಡರಿದ್ದಾರೆ. ಇಲ್ಲಿರೋ ಸಚಿವರು ತಾವೇನೋ ದೊಡ್ಡ ವಿದೇಶಾಂಗ ಸಚಿವರ ತರಹ, ರಕ್ಷಣಾ ಪರಿಣತರ ತರಹ ಹುಚ್ಚುಚ್ಚಾಗಿ ಸ್ಟೇಟ್‌ಮೆಂಟ್ ಕೊಡ್ತಾರೆ. ಇವರು ಅಧಿಕಾರಕ್ಕೆ ಬಂದು ಮೂರು ವರ್ಷವಾದ್ರೂ ಪೌತಿ ಖಾತೆ ಮಾಡಿದ್ದೇ ದೊಡ್ಡ ಸಾಧನೆ ಅನ್ನೋ ರೇಂಜ್‌ಗೆ ಬಿಲ್ಡಪ್ ಕೊಡ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿಗೆ ನಿತಿನ್ ನಬೀನ್ ಆಗಮನ; ಮೋದಿ 12 ವರ್ಷದ ಸಂಭ್ರಮ!

ಇದೇ ವೇಳೆ ಪಕ್ಷದ ಮುಂದಿನ ಪ್ಲಾನ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡ ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್ ಜೀ ಅವರು ಇದೇ ಮೇ 23 ಕ್ಕೆ ಮೊದಲ ಬಾರಿಗೆ ಬೆಂಗಳೂರಿಗೆ ಬರ್ತಿದ್ದಾರೆ ಎಂದು ತಿಳಿಸಿದರು. ಮೇ 24 ರಂದು ಬೆಂಗಳೂರು ಉತ್ತರ ಜಿಲ್ಲೆಯ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲಿದ್ದು, ಅಂದೇ ರಾಜ್ಯದ ಬಿಜೆಪಿ ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳ ಜೊತೆ ಪ್ರಮುಖ ಸಭೆ ನಡೆಯಲಿದೆ ಎಂದಿದ್ದಾರೆ.

ಜೊತೆಗೆ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಸುದೀರ್ಘ 12 ವರ್ಷ ಪೂರೈಸುತ್ತಿರೋ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಶ್ವ ಪರಿಸರ ದಿನ, ಯೋಗ ದಿನ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ ಆನೆ ಬಲ: ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜಣ್ಣ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರೋದರಿಂದ ತುಮಕೂರು ಸೇರಿದಂತೆ ಮಧ್ಯ ಕರ್ನಾಟಕದ ಭಾಗದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಹಾಗೇ, ಬಿಡದಿ ಟೌನ್‌ಶಿಪ್‌ಗಾಗಿ ಭೂಮಿ ಕಳೆದುಕೊಳ್ಳೋ ರೈತರನ್ನು ಯಾವುದೇ ಕಾರಣಕ್ಕೂ ಬೀದಿಗೆ ಬೀಳಲು ಬಿಡುವುದಿಲ್ಲ ಎಂದು ರೈತರ ಪರ ಬ್ಯಾಟ್ ಬೀಸಿದರು.

Latest News