ನಾಳೆ ಕೋಟೆ ನಾಡು ಚಿತ್ರದುರ್ಗದಲ್ಲಿ ಒಂದು ಭರ್ಜರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಕರ್ನಾಟಕ ರಾಜಕಾರಣದ 'ರಾಜಾಹುಲಿ' ಎಂದೇ ಖ್ಯಾತರಾದ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಸವಿ ನೆನಪಿಗಾಗಿ 'ಅಭಿಮಾನೋತ್ಸವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆಗೆ ಆಗಮಿಸಿದ ಸಂಸದ ಬಿ.ವೈ. ರಾಘವೇಂದ್ರ ಮತ್ತು ಸ್ವತಃ ಬಿ.ಎಸ್. ಯಡಿಯೂರಪ್ಪ ಅವರು ಈ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
"ಯಡಿಯೂರಪ್ಪ ಬರಿ ಹೆಸರಲ್ಲ, ಅದೊಂದು ಹೋರಾಟದ ಹಾದಿ"
ದಾವಣಗೆರೆಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ ಅವರು, "ನಮ್ಮ ತಂದೆಯವರು ಹಿಂದುತ್ವದ ವಿಚಾರವನ್ನು ಜನರ ಮನೆ ಮನಕ್ಕೆ ಮುಟ್ಟಿಸಿದವರು. ಬಗರ್ ಹುಕುಂ ಹೋರಾಟದ ಮೂಲಕ ದಲಿತರು ಮತ್ತು ಶೋಷಿತರ ಪರವಾಗಿ ನಿಂತು ಅವರ ಪ್ರೀತಿ ಗೆದ್ದವರು. ಬಿಜೆಪಿ ಎಂಬ ಚೌಕಟ್ಟಿನಲ್ಲೇ ಇದ್ದು, ಸ್ವಂತ ಸಂಘಟನಾ ಶಕ್ತಿಯಿಂದ ಬೆಳೆದಿದ್ದು ಅವರ ವಿಶೇಷ" ಎಂದು ಹೆಮ್ಮೆಯಿಂದ ಹೇಳಿದರು.
ಇದೇ ವೇಳೆ ಯಡಿಯೂರಪ್ಪ ಅವರಿಗೆ ವಿರೋಧಿಗಳೇ ಇಲ್ಲ ಎನ್ನುವ 'ಅಜಾತಶತ್ರು' ಪಟ್ಟದ ಬಗ್ಗೆ ಕೇಳಿದಾಗ, "ಅವರಿಗೆ ಅಜಾತಶತ್ರು ಅಂದ್ರೆ ಅಷ್ಟು ಸಮಂಜಸ ಅನ್ಸಲ್ಲ. ಪಾಪ, ಅವರ ನಕ್ಷತ್ರವೇ ಹಾಗಿದೆ, ಆರಂಭದಿಂದಲೂ ಅವರಿಗೆ ವಿರೋಧಗಳೇ ಹೆಚ್ಚು. ಆದರೆ ಅವರು ಆ ಎಲ್ಲಾ ಬಂಡೆಕಲ್ಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಂತರು. ಅವರು ಎಂದಿಗೂ ಸ್ವಾರ್ಥಕ್ಕಾಗಿ ಸಿಟ್ಟು ಮಾಡಲಿಲ್ಲ, ಏನಿದ್ದರೂ ಸಂಘಟನೆ ಮತ್ತು ಪಕ್ಷದ ಏಳಿಗೆಗಾಗಿ" ಎಂದು ರಾಘವೇಂದ್ರ ವಿವರಿಸಿದರು.
10 ಲಕ್ಷ ಜನ, ಅಮಿತ್ ಶಾ ಎಂಟ್ರಿ!
ನಾಳೆಯ ಕಾರ್ಯಕ್ರಮದ ಹೈಲೈಟ್ಸ್ ಇಲ್ಲಿದೆ ನೋಡಿ:
ಕೇಂದ್ರ ಗೃಹಸಚಿವ ಅಮಿತ್ ಶಾ: ಈ ಅದ್ದೂರಿ ಕಾರ್ಯಕ್ರಮಕ್ಕೆ ಅಮಿತ್ ಶಾ ಅವರು ಆಗಮಿಸುತ್ತಿದ್ದಾರೆ.
10 ಲಕ್ಷ ಜನ: ಚಿತ್ರದುರ್ಗಕ್ಕೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಬರುವ ನಿರೀಕ್ಷೆಯಿದೆ.
ಸ್ವಾಮೀಜಿಗಳ ಸಮ್ಮಿಲನ: ಒಂದೇ ವೇದಿಕೆಯಲ್ಲಿ ರಾಜ್ಯದ ಪ್ರಮುಖ ಮಠಾಧೀಶರನ್ನು, ಸ್ವಾಮೀಜಿಗಳನ್ನು ನೋಡುವ ಅಪರೂಪದ ಅವಕಾಶ ಈ ಕಾರ್ಯಕ್ರಮದಲ್ಲಿದೆ.
ಸತೀಶ್ ಜಾರಕಿಹೊಳಿ ಹೇಳಿಕೆಗೆ ಟಾಂಗ್
"ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದವರೇ ಈಗ ಉತ್ಸವ ಮಾಡುತ್ತಿದ್ದಾರೆ" ಎಂಬ ಸತೀಶ್ ಜಾರಕಿಹೊಳಿ ಅವರ ಟೀಕೆಗೆ ರಾಘವೇಂದ್ರ ಅವರು ಖಡಕ್ ಉತ್ತರ ನೀಡಿದ್ದಾರೆ. "ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ರಾಹುಲ್ ಗಾಂಧಿ ಅವರು ಸ್ಟಾಲಿನ್ ನನ್ನ ಬ್ರದರ್ ಅಂದಿದ್ದರು, ಆದರೆ ಈಗ ಅವರದ್ದೇ ಪಕ್ಷದ ಐವರು ಶಾಸಕರು ವಿಜಯ್ ಅವರ ಟಿವಿಕೆ (TVK) ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ. ಇಂತಹ ರಾಜಕೀಯ ಹೇಳಿಕೆಗಳಿಗೆ ಬೆಲೆ ಇಲ್ಲ. ಯಡಿಯೂರಪ್ಪ ಸಾಧನೆಯ ಬೆಟ್ಟ ಹತ್ತಿದವರು" ಎಂದು ತಿರುಗೇಟು ನೀಡಿದರು.
"ನಾವು ಸೈಕಲ್‌ನಲ್ಲಿ ಸುತ್ತಿದ್ದು ಯಾರಿಗೂ ಮರೆತಿಲ್ಲ"
ಇತ್ತ ದಾವಣಗೆರೆಯ ಖಾಸಗಿ ರೆಸಾರ್ಟ್‌ಗೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. "ನಾಳೆ ಎಲ್ಲರೂ ಬಹಳ ಪ್ರೀತಿ ವಿಶ್ವಾಸದಿಂದ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ನಾನು ಮತ್ತು ಅನಂತಕುಮಾರ್ ಅವರು ಅಂದು ಸೈಕಲ್‌ನಲ್ಲಿ ರಾಜ್ಯ ಪ್ರವಾಸ ಮಾಡಿದ್ದೆವು. ಅದರ ಫಲವಾಗಿಯೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಎಲ್ಲರಿಗೂ ಗೊತ್ತಿದೆ" ಎಂದರು.
ಇದು 2028ರ ಚುನಾವಣೆಗೆ ಬಿಜೆಪಿಯ ರಣಕಹಳೆಯೇ? ಎಂಬ ಮಾಧ್ಯಮಗಳ ಪ್ರಶ್ನೆಗೆ, ಬಿಎಸ್ವೈ ಅವರು ತಮ್ಮದೇ ಸ್ಟೈಲ್‌ನಲ್ಲಿ "ಕಾದು ನೋಡೋಣ" ಎನ್ನುವ ಮೂಲಕ ಕುತೂಹಲ ಉಳಿಸಿಕೊಂಡಿದ್ದಾರೆ.