ರಾಜಕೀಯದಲ್ಲಿ ಐದು ದಶಕಗಳ ಪಯಣ ಪೂರೈಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೌರವ ಸಲ್ಲಿಸಲು ಚಿತ್ರದುರ್ಗದಲ್ಲಿ ಭರ್ಜರಿ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಇಡೀ ಕೋಟೆನಾಡು ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದು, ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಶನಿವಾರ ನಡೆಯಲಿರುವ ಅಭಿಮಾನೋತ್ಸವದಲ್ಲಿ ಭಾಗವಹಿಸಲು ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಅವರ ಸ್ವಾಗತಕ್ಕಾಗಿ ಭರ್ಜರಿ ಮೆರವಣಿಗೆ ಸಿದ್ಧವಾಗಿದ್ದು, ಸಾವಿರಾರು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತಕ್ಕೆ ಆಗಮಿಸುವ ಯಡಿಯೂರಪ್ಪ ಅವರಿಗೆ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭದ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರಲಿದ್ದಾರೆ.
ಇದೇ ವೇಳೆ ರೈತರು ವಿಶೇಷವಾಗಿ ರಾಶಿ ಪೂಜೆ ನಡೆಸಿ ತಮ್ಮ ಗೌರವ ಸಲ್ಲಿಸಲಿದ್ದಾರೆ. ರೈತ ನಾಯಕನಾಗಿ ಗುರುತಿಸಿಕೊಂಡಿರುವ ಯಡಿಯೂರಪ್ಪ ಅವರಿಗಾಗಿ ಸುಮಾರು 2000ಕ್ಕೂ ಹೆಚ್ಚು ರೈತರು ನೇಗಿಲು ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ರೈತರ ಘೋಷಣೆಗಳೊಂದಿಗೆ ಮೆರವಣಿಗೆ ಮತ್ತಷ್ಟು ರಂಗೇರಲಿದೆ.
ಕನಕ ವೃತ್ತದ ಸಮೀಪದ ಚಂದ್ರವಳ್ಳಿ ಮೈದಾನದಿಂದ ಆರಂಭವಾಗುವ ಮೆರವಣಿಗೆಯಲ್ಲಿ ಯಡಿಯೂರಪ್ಪ ಅವರನ್ನು ಪುಷ್ಪಾಲಂಕೃತ ಸಾರೋಟ್‌ನಲ್ಲಿ ಕರೆತರಲಾಗುತ್ತದೆ. ಈ ಮೆರವಣಿಗೆಯ ಮತ್ತೊಂದು ವಿಶೇಷ ಅಂದ್ರೆ, ಅವರ ಹೋರಾಟದ ದಿನಗಳ ನೆನಪನ್ನು ಮೂಡಿಸುವ ಅಂಬಾಸಿಡರ್ ಕಾರು. ಯಡಿಯೂರಪ್ಪ ಬಳಸುತ್ತಿದ್ದ ಸಿಕೆಆರ್ 45 ಸಂಖ್ಯೆಯ ಹಳೆಯ ಅಂಬಾಸಿಡರ್ ಕಾರು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿದೆ.
ಮೆರವಣಿಗೆಯಲ್ಲಿ ಯಡಿಯೂರಪ್ಪ ಅವರ ರಾಜಕೀಯ ಪಯಣ, ಸಾಧನೆ ಮತ್ತು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ಜನಪ್ರಿಯ ಯೋಜನೆಗಳನ್ನು ಪರಿಚಯಿಸುವ ಸ್ತಬ್ಧಚಿತ್ರಗಳನ್ನೂ ಪ್ರದರ್ಶಿಸಲಾಗುತ್ತಿದೆ. ಭಾಗ್ಯಲಕ್ಷ್ಮೀ ಯೋಜನೆ, ಹೆಣ್ಣುಮಕ್ಕಳಿಗೆ ಸೈಕಲ್ ವಿತರಣೆ, ಕೃಷಿ ಬಜೆಟ್ ಸೇರಿದಂತೆ ಹಲವು ಯೋಜನೆಗಳ ದೃಶ್ಯಾವಳಿಗಳು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ.
ಇದರ ಜೊತೆಗೆ ಆರು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ಯಡಿಯೂರಪ್ಪ ಅವರ ಬಾಲ್ಯದಿಂದ ಹಿಡಿದು ಮುಖ್ಯಮಂತ್ರಿ ಹುದ್ದೆಯವರೆಗಿನ ಜೀವನ ಪಯಣವನ್ನು ಜನರಿಗೆ ಪರಿಚಯಿಸಲಾಗುತ್ತದೆ. ಸಾಮಾನ್ಯ ಕಾರ್ಯಕರ್ತನಿಂದ ರಾಜ್ಯದ ಪ್ರಮುಖ ನಾಯಕನಾಗುವವರೆಗಿನ ಅವರ ರಾಜಕೀಯ ಬದುಕನ್ನು ಈ ಎಲ್‌ಇಡಿಗಳ ಮೂಲಕ ತೋರಿಸಲಾಗುತ್ತದೆ.
ಮೆರವಣಿಗೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕೂಡ ವಿಶೇಷವಾಗಿರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ನಾರಿ ಶಕ್ತಿ ವಂದನ್’ ಕಾಯ್ದೆಗೆ ಬೆಂಬಲ ಸೂಚಿಸುವ ರೀತಿಯಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವ ವೇಷದಲ್ಲಿ ಭಾಗವಹಿಸಲಿದ್ದಾರೆ. ಒನಕೆ ಓಬವ್ವನ ನೆಲವಾದ ಚಿತ್ರದುರ್ಗದಲ್ಲಿ ಈ ದೃಶ್ಯ ವಿಶೇಷ ಆಕರ್ಷಣೆಯಾಗಲಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ. ಪೂಜಾ ಕುಣಿತ, ಡೊಳ್ಳು ಕುಣಿತ, ಕೋಲಾಟ, ಗಾರುಡಿ ಗೊಂಬೆ, ಕಂಸಾಳೆ, ಲಂಬಾಣಿ ನೃತ್ಯ, ವೀರಗಾಸೆ, ತಮಟೆ, ಬೇಡರ ವೇಷ, ಕೀಲು ಕುದುರೆ, ರಾಜರಾಣಿ ಸೇರಿದಂತೆ ಹಲವು ಜನಪದ ಕಲಾ ರೂಪಗಳು ಜನರ ಮನಸೆಳೆಯಲಿವೆ.
ಈ ಅಭಿಮಾನೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ.