ಆಲಿಯಾ ಭಟ್ ನಟನೆಯ ‘ಆಲ್ಫಾ’ ಟೀಸರ್ ರಿಲೀಸ್ ಬೆನ್ನಲ್ಲೇ ಭಾರಿ ವಿವಾದ - ವೈಆರ್‌ಎಫ್ ಸ್ಪೈ ಯೂನಿವರ್ಸ್‌ಗೆ ಬಿಗ್ ಶಾಕ್!!

ಬಾಲಿವುಡ್‌ನ ಬಹುನಿರೀಕ್ಷಿತ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾ ‘ಆಲ್ಫಾ’ (Alpha) ಟೀಸರ್ ರಿಲೀಸ್ ಆದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಆದ್ರೆ, ಈ ಸೌಂಡ್ ಮೆಚ್ಚುಗೆಯದ್ದಲ್ಲ, ಬದಲಿಗೆ ಭಾರಿ ವಿವಾದದ್ದು! ಹೌದು, ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ವಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರೋ ಈ ಚಿತ್ರದ ಟೀಸರ್ ನೋಡಿದ ಸಿನಿಮಾ ಪ್ರೇಮಿಗಳು, "ಇದು ಅಪ್ಪಟ ಕಾಪಿ ಕ್ಯಾಟ್ ಸಿನಿಮಾ" ಅಂತ ಟ್ರೋಲ್ ಮಾಡೋಕೆ ಸ್ಟಾರ್ಟ್ ಮಾಡಿದ್ದಾರೆ.

18ನೇ ವರ್ಷದ ಹುಟ್ಟುಹಬ್ಬ ಮತ್ತು ಮೊದಲ ಮಿಷನ್ ಹೈಡ್ರಾಮಾ
18ನೇ ವರ್ಷದ ಹುಟ್ಟುಹಬ್ಬ ಮತ್ತು ಮೊದಲ ಮಿಷನ್ ಹೈಡ್ರಾಮಾ

ಯಶ್ ರಾಜ್ ಫಿಲ್ಮ್ಸ್ (YRF) ಹೆಮ್ಮೆಯಿಂದ ನಿರ್ಮಿಸುತ್ತಿರೋ ಈ ಸ್ಪೈ ಯೂನಿವರ್ಸ್ ಚಿತ್ರವು 1990ರ ಸೂಪರ್ ಹಿಟ್ ಫ್ರೆಂಚ್ ಥ್ರಿಲ್ಲರ್ ಸಿನಿಮಾ ‘ಲಾ ಫೆಮ್ಮೆ ನಿಕಿತಾ’ (La Femme Nikita) ಮತ್ತು ಹಾಲಿವುಡ್‌ನ ಪ್ರಸಿದ್ಧ ‘ಅಮೆರಿಕನ್ ಸ್ನೈಪರ್’ ಚಿತ್ರದ ಕೃತಿಚೌರ್ಯ (Copy) ಮಾಡಿದೆ ಅಂತ ನೆಟ್ಟಿಗರು ಸಾಕ್ಷಿ ಸಮೇತ ಪತ್ತೆ ಹಚ್ಚಿದ್ದಾರೆ.

ಹದಿನೆಂಟನೇ ಬರ್ತ್‌ಡೇ ಗಿಫ್ಟ್ ಮತ್ತು ಮೊದಲ ಮಿಷನ್ ಹೈಡ್ರಾಮಾ

ಟೀಸರ್‌ನ ಆರಂಭದಲ್ಲೇ ಬರುವ ಒಂದು ಬಿಗ್ ಸೀನ್ ಈಗ ನೆಟ್ಟಿಗರ ಕಣ್ಣಿಗೆ ಕೆಂಪಗಾಗಿ ಕಾಣಿಸ್ತಿದೆ. ಅದರಲ್ಲಿ ವಿಲನ್ ಪಾತ್ರಧಾರಿ ಬಾಬಿ ಡಿಯೋಲ್ ಮತ್ತು ನಾಯಕಿ ಆಲಿಯಾ ಭಟ್ ಒಂದು ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ಕುಳಿತು ಊಟ ಮಾಡುತ್ತಿರುತ್ತಾರೆ. ಆಲಿಯಾಗೆ 18ನೇ ವರ್ಷದ ಹುಟ್ಟುಹಬ್ಬದ ವಿಶ್ ಮಾಡುವ ಬಾಬಿ ಡಿಯೋಲ್, ಕೈಗೊಂದು ಕಾರ್ಡ್ ಕೊಡ್ತಾರೆ. ಅದರಲ್ಲಿರೋ ರೂಮ್ ನಂಬರ್ ತೋರಿಸಿ, "ಇಷ್ಟು ವರ್ಷ ನೀನು ತಗೊಂಡಿರೋ ಟ್ರೈನಿಂಗ್ ಬಳಸಿಕೊಳ್ಳೋ ಟೈಮ್ ಬಂದಿದೆ" ಅಂತ ಮೊದಲ ಅಸೈನ್‌ಮೆಂಟ್ ಕೊಡ್ತಾರೆ.

ಇದೇ ದೃಶ್ಯವೇ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿರೋದು! ಯಾಕಂದ್ರೆ, 1990ರಲ್ಲಿ ಬಂದ ಲ್ಯೂಕ್ ಬೆಸ್ಸನ್ ನಿರ್ದೇಶನದ ಫ್ರೆಂಚ್ ಕ್ಲಾಸಿಕ್ ಸಿನಿಮಾ ‘ಲಾ ಫೆಮ್ಮೆ ನಿಕಿತಾ’ದಲ್ಲೂ ಡಿಟ್ಟೋ ಇಂತಹುದೇ ಸೀನ್ ಇದೆ. ಅಲ್ಲೂ ಕೂಡ ನಾಯಕಿಯನ್ನು ಇದೇ ತರಹದ ಒಂದು ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ, ಬರ್ತ್‌ಡೇ ನೆಪದಲ್ಲಿ ಗನ್ ಕೊಟ್ಟು ಮರ್ಡರ್ ಮಾಡೋಕೆ ಕಳುಹಿಸಲಾಗುತ್ತದೆ. ಈ ಎರಡೂ ಸೀನ್‌ಗಳನ್ನು ಅಕ್ಕಪಕ್ಕ ಇಟ್ಟು ಹೋಲಿಸಿರೋ ಸಿನಿಮಾ ಪ್ರೇಮಿಗಳು, "ಶೇಕಡಾ 90 ರಷ್ಟು ದೃಶ್ಯಗಳನ್ನು ಫ್ರೆಂಚ್ ಸಿನಿಮಾದಿಂದ ಹಾಗೇ ಎತ್ತಿ ಹೊಡೆಯಲಾಗಿದೆ. ಕೇವಲ ಸೀನ್ ಅಷ್ಟೇ ಅಲ್ಲ, ಇಡೀ ಸಿನಿಮಾದ ಕಥೆ ಕೂಡ ಅದೇ ರಿಮೇಕ್ ಇರಬಹುದು" ಅಂತ ಆಕ್ರೋಶ ಹೊರಹಾಕಿದ್ದಾರೆ.

ಡೈಲಾಗ್ ಕೂಡ ಹಾಲಿವುಡ್‌ನಿಂದಲೇ ಎಗರಿಸಿದ್ರಾ?

ಸಿನಿಮಾ ಪ್ರೇಮಿಗಳ ಆಕ್ರೋಶ ಇಲ್ಲಿಗೇ ಮುಗಿಯಲ್ಲ. ಕೇವಲ ಫ್ರೆಂಚ್ ಸಿನಿಮಾ ಮಾತ್ರವಲ್ಲದೆ, ಹಾಲಿವುಡ್‌ನ ಮತ್ತೊಂದು ಸಖತ್ ಫೇಮಸ್ ಸಿನಿಮಾದ ಡೈಲಾಗ್ ಅನ್ನು ಕೂಡ ‘ಆಲ್ಫಾ’ ಚಿತ್ರದಲ್ಲಿ ಕದಿಯಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

ಟೀಸರ್‌ನಲ್ಲಿ ಬಾಬಿ ಡಿಯೋಲ್ ಅವರು ಆಲಿಯಾಗೆ ಟ್ರೈನಿಂಗ್ ಕೊಡುವಾಗ ‘ತೋಳ ಮತ್ತು ಕುರಿ’ಯ ಉದಾಹರಣೆ ಕೊಟ್ಟು ಒಂದು ಖಡಕ್ ಸಂಭಾಷಣೆ ಹೇಳ್ತಾರೆ. ಆದ್ರೆ ಈ ಡೈಲಾಗ್ ಕೇಳಿದ ತಕ್ಷಣ ಹಾಲಿವುಡ್ ಪ್ರೇಮಿಗಳು ಅಲರ್ಟ್ ಆಗಿದ್ದಾರೆ. ಇದು ಕ್ಲಿಂಟ್ ಈಸ್ಟ್‌ವುಡ್ ನಿರ್ದೇಶನದ ಮತ್ತು ಬ್ರಾಡ್ಲಿ ಕೂಪರ್ ನಟನೆಯ 2014ರ ಸೂಪರ್ ಹಿಟ್ ವಾರ್ ಡ್ರಾಮಾ ‘ಅಮೆರಿಕನ್ ಸ್ನೈಪರ್’ (American Sniper) ಚಿತ್ರದ ಅಫೀಶಿಯಲ್ ಸಂಭಾಷಣೆಯನ್ನು ಹೋಲುತ್ತದೆ ಅಂತ ನೆಟ್ಟಿಗರು ಪಾಯಿಂಟ್ ಔಟ್ ಮಾಡಿದ್ದಾರೆ.

ಕ್ರಿಯೇಟಿವಿಟಿ ಇಲ್ಲದ ಬಾಲಿವುಡ್ ಬ್ಯಾನರ್‌ಗಳು

ಸ್ವಂತಿಕೆ ಇಲ್ಲದೆ ಬೇರೆ ದೇಶದ ಸಿನಿಮಾಗಳ ಸೀನ್ ಮತ್ತು ಡೈಲಾಗ್‌ಗಳನ್ನು ಕಾಪಿ ಮಾಡುತ್ತಿರುವ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. "ಕೈಯಲ್ಲಿ ಕೋಟ್ಯಂತರ ರೂಪಾಯಿ ಬಜೆಟ್ ಇದೆ, ಆಲಿಯಾ ಭಟ್ ನಂತಹ ಸ್ಟಾರ್ ನಟರಿದ್ದಾರೆ, ಆದ್ರೂ ಒಂದು ಕಥೆಗಾಗಿ ಬೇರೆ ದೇಶದ ಹಳೇ ಸಿನಿಮಾಗಳನ್ನು ಅವಲಂಬಿಸಿರುವುದು ನೋಡಿದರೆ ಬಾಲಿವುಡ್‌ನಲ್ಲಿ ಸೃಜನಶೀಲತೆಯ (Creativity) ಬರ ಬಂದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ" ಅಂತ ನೆಟ್ಟಿಗರು ಲೇವಡಿ ಮಾಡ್ತಿದ್ದಾರೆ.

ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ ‘ಆಲ್ಫಾ’ ಚಿತ್ರೀಕರಣದ ಹಂತದಲ್ಲೇ ಇಂತಹದ್ದೊಂದು ಕಳ್ಳತನದ ಆರೋಪ ಹೊತ್ತು ಟ್ರೋಲ್ ಆಗ್ತಿರೋದು ಚಿತ್ರತಂಡಕ್ಕೆ ಅರಗಿಸಿಕೊಳ್ಳಲು ಆಗ್ತಿಲ್ಲ. ಈ ವಿವಾದದ ಬಗ್ಗೆ ಯಶ್ ರಾಜ್ ಫಿಲ್ಮ್ಸ್ ಆಗಲಿ ಅಥವಾ ಆಲಿಯಾ ಭಟ್ ಆಗಲಿ ಇನ್ನೂ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ಕಾಪಿ ಕ್ಯಾಟ್ ವಿವಾದ ಯಾವ ತಿರುವು ತಗೋತದೆ ಅನ್ನೋದನ್ನು ಕಾಯ್ದು ನೋಡಬೇಕು.

Latest News