Mar 2, 2026 Languages : ಕನ್ನಡ | English

ಸಾರಿಗೆ ಸಚಿವರ ಗಮನಕ್ಕೆ ಬಿಎಂಟಿಸಿ ದರ ಲೋಪ - ಬದಲಾಗುತ್ತಾ ಬೆಂಗಳೂರು ಬಸ್ ಟಿಕೆಟ್ ದರ ಪದ್ಧತಿ?

ಬೆಂಗಳೂರು ನಗರದ ಜೀವನಾಡಿ ಎನಿಸಿಕೊಂಡಿರುವ ಬಿಎಂಟಿಸಿ ಬಸ್‌ಗಳಲ್ಲಿನ 'ಹಂತ ಆಧಾರಿತ' (Stage-based) ಟಿಕೆಟ್ ದರ ಪದ್ಧತಿಯು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ವ್ಯವಸ್ಥೆಯಡಿ, ಬಿಎಂಟಿಸಿ ಪ್ರತಿ 2 ಕಿಲೋಮೀಟರ್‌ಗಳನ್ನು ಒಂದು 'ಹಂತ' ಎಂದು ಪರಿಗಣಿಸುತ್ತದೆ. ಮೊದಲ 2 ಕಿ.ಮೀ ಪ್ರಯಾಣಕ್ಕೆ 6 ರೂಪಾಯಿ ನಿಗದಿಪಡಿಸಲಾಗಿದ್ದು, ಪ್ರಯಾಣಿಕರು 2 ಕಿ.ಮೀ ದಾಟಿದ ತಕ್ಷಣ, ಅಂದರೆ ಕೇವಲ 2.1 ಅಥವಾ 2.5 ಕಿ.ಮೀ ಪ್ರಯಾಣಿಸಿದರೂ ಸಹ, ಅವರು ಎರಡನೇ ಹಂತದ ಪೂರ್ತಿ ದರವಾದ 12 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಕೇವಲ ಅರ್ಧ ಕಿಲೋಮೀಟರ್ ಹೆಚ್ಚಿನ ಪ್ರಯಾಣಕ್ಕೆ ದರವು ಎರಡರಷ್ಟು ಹೆಚ್ಚಾಗುತ್ತಿರುವುದು ದೈನಂದಿನ ಪ್ರಯಾಣಿಕರ ಜೇಬಿಗೆ ಭಾರಿ ಹೊರೆಯಾಗುತ್ತಿದೆ. ಜಿಪಿಎಸ್ ಮತ್ತು ಅತ್ಯಾಧುನಿಕ ತಂತ್ರಜ್ಞಾನವಿರುವ ಈ ಕಾಲದಲ್ಲಿಯೂ ಬಿಎಂಟಿಸಿ ಇನ್ನು ಕಿಲೋಮೀಟರ್ ಆಧಾರಿತ ದರ ಪದ್ಧತಿಗೆ ಬದಲಾಗದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

2 KMಗೆ 6 ರೂಪಾಯಿ, 2.5 KMಗೆ 12 ರೂಪಾಯಿ - ಟೆಕ್ ಸಿಟಿಯಲ್ಲೇಕೆ ಇನ್ನು ಹಳೇ ಕಾಲದ ಟಿಕೆಟ್ ಸಿಸ್ಟಮ್?
2 KMಗೆ 6 ರೂಪಾಯಿ, 2.5 KMಗೆ 12 ರೂಪಾಯಿ - ಟೆಕ್ ಸಿಟಿಯಲ್ಲೇಕೆ ಇನ್ನು ಹಳೇ ಕಾಲದ ಟಿಕೆಟ್ ಸಿಸ್ಟಮ್?

ಬಿಎಂಟಿಸಿ ಅಧಿಕಾರಿಗಳ ಪ್ರಕಾರ, ಈ ಹಂತ ಆಧಾರಿತ ಪದ್ಧತಿಯು ಸುಮಾರು 25 ವರ್ಷಗಳಷ್ಟು ಹಳೆಯದಾಗಿದ್ದು, ಇದನ್ನು ಬದಲಾಯಿಸಲು ಕೆಲವು ಪ್ರಾಯೋಗಿಕ ತೊಂದರೆಗಳಿವೆ. ಪ್ರತಿ ನಿಲ್ದಾಣಕ್ಕೂ ದರ ಬದಲಾವಣೆಯಾದರೆ ನಿರ್ವಾಹಕರಿಗೆ ಟಿಕೆಟ್ ನೀಡಲು ಸಮಯದ ಅಭಾವ ಉಂಟಾಗಬಹುದು ಮತ್ತು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳು (ETM) ಕೈಕೊಟ್ಟಾಗ ಮ್ಯಾನ್ಯುವಲ್ ಆಗಿ ಟಿಕೆಟ್ ನೀಡುವುದು ಕಷ್ಟವಾಗಬಹುದು ಎಂಬುದು ಅಧಿಕಾರಿಗಳ ವಾದ. ಆದರೆ, ಸಾರಿಗೆ ತಜ್ಞರು ಈ ವಾದವನ್ನು ಒಪ್ಪುತ್ತಿಲ್ಲ. ಪ್ರಸ್ತುತ ಬಳಕೆಯಲ್ಲಿರುವ ಆಂಡ್ರಾಯ್ಡ್ ಆಧಾರಿತ ಇಟಿಎಂ ಯಂತ್ರಗಳು ಜಿಪಿಎಸ್ ಸೌಲಭ್ಯವನ್ನು ಹೊಂದಿರುವುದರಿಂದ, ನಿಖರವಾದ ಕಿಲೋಮೀಟರ್ ಲೆಕ್ಕಾಚಾರ ಮಾಡುವುದು ತಾಂತ್ರಿಕವಾಗಿ ಅಸಾಧ್ಯವೇನಲ್ಲ. 'ಟೆಕ್ ಸಿಟಿ' ಎಂದು ಕರೆಸಿಕೊಳ್ಳುವ ಬೆಂಗಳೂರು ಇಂತಹ ಹಳೆಯ ಪದ್ಧತಿಯನ್ನು ಬಿಟ್ಟು ಹೊಸ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಪ್ರಯಾಣಿಕರು ನೀಡುತ್ತಿರುವ ಉದಾಹರಣೆಗಳು ಈ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುತ್ತಿವೆ. ಹೊಸೂರು ರಸ್ತೆಯ ಕೃಪಾನಿಧಿ ಕಾಲೇಜಿನಿಂದ ಮಡಿವಾಳದ ನಡುವಿನ ಅಂತರ ಕೇವಲ 900 ಮೀಟರ್ ಇದ್ದರೂ, ಅಲ್ಲಿ ಸ್ಟೇಜ್ ಬದಲಾಗುವುದರಿಂದ ಪ್ರಯಾಣಿಕರು ಹೆಚ್ಚಿನ ದರ ನೀಡಬೇಕಿದೆ. ಅದೇ ರೀತಿ ಕೋನಪ್ಪನ ಅಗ್ರಹಾರ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವೆಯೂ ಇಂತಹದ್ದೇ ಸಮಸ್ಯೆ ಎದುರಾಗುತ್ತಿದೆ. ಅಲ್ಪ ದೂರದ ಪ್ರಯಾಣಕ್ಕೂ ದುಪ್ಪಟ್ಟು ಹಣ ನೀಡುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಗಂಭೀರ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಟಿಕೆಟ್ ದರ ವ್ಯವಸ್ಥೆಯನ್ನು ಪುನರ್ ವಿಮರ್ಶಿಸುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಇದು ಜಾರಿಗೆ ಬಂದರೆ, ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರಿಗೆ ಆರ್ಥಿಕವಾಗಿ ದೊಡ್ಡ ಸಮಾಧಾನ ಸಿಗಲಿದೆ.

Latest News