ಬೀದರ್ ಜಿಲ್ಲೆಯ ಹುಲಸೂರ ತಾಲೂಕು, ಬೇಲೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜ್ಞಾನ ಶಿಕ್ಷಕಿ ಸಂಗೀತಾ ಅವರ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಆರೋಪದಂತೆ, ಶಿಕ್ಷಕಿ ಪಾಠವನ್ನು ಸರಿಯಾಗಿ ಮಾಡುತ್ತಿಲ್ಲ. “ಪಾಠ ತಿಳಿಯದಿದ್ದರೆ ಯೂಟ್ಯೂಬ್, ಗೂಗಲ್ ಸರ್ಚ್ ಮಾಡಿ ಓದಿ” ಎಂದು ಹೇಳುತ್ತಿದ್ದಾರಂತೆ.
ಇದರಿಂದ ವಿದ್ಯಾರ್ಥಿಗಳು ಬೇಸರಗೊಂಡು, “ಶಿಕ್ಷಕಿಯನ್ನು ವರ್ಗಾವಣೆ ಮಾಡದಿದ್ದರೆ ಶಾಲೆಗೆ ಬರುವುದಿಲ್ಲ” ಎಂದು ಪ್ರತಿಭಟಿಸಿದ್ದಾರೆ. ಪೋಷಕರು ಕೂಡಾ ಮಕ್ಕಳೊಂದಿಗೆ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೆಲವೇ ದಿನಗಳಲ್ಲಿ ಪರೀಕ್ಷೆ ಇದೆ. ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗುತ್ತಿದೆ. ಹೆಡ್ ಮಾಸ್ಟರ್ ಹಾಗೂ ಬಿಇಓಗೆ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಪೋಷಕರು ಆರೋಪಿಸಿದ್ದಾರೆ. ಅವರು ಕೂಡಲೇ ಶಿಕ್ಷಕಿಯನ್ನು ವರ್ಗಾವಣೆ ಮಾಡಿ, ಶಾಲೆಗೆ ಒಳ್ಳೆಯ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಹೇಳುವಂತೆ, ಶಾಲೆಯ ಶಿಕ್ಷಣದ ಗುಣಮಟ್ಟ ಕುಸಿದರೆ ಅದು ಮಕ್ಕಳ ಭವಿಷ್ಯಕ್ಕೆ ದೊಡ್ಡ ಹಾನಿ. “ಮಕ್ಕಳಿಗೆ ಸರಿಯಾಗಿ ಪಾಠ ಮಾಡುವುದು ಶಿಕ್ಷಕರ ಮೂಲಭೂತ ಜವಾಬ್ದಾರಿ. ಅದನ್ನು ನಿರ್ಲಕ್ಷ್ಯ ಮಾಡಿದರೆ ನಾವು ಮೌನವಾಗುವುದಿಲ್ಲ” ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಈ ಪ್ರತಿಭಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದ್ದು, ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
“ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು. ಇಲ್ಲದಿದ್ದರೆ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..