ಬಸವಕಲ್ಯಾಣ ಚಲೋ ಕಾರ್ಯಕ್ರಮದ ಭವಿಷ್ಯಕ್ಕೆ ಇಂದು ಹೈಕೋರ್ಟ್ ಮುನ್ನುಡಿ - ಮಧ್ಯಾಹ್ನ 2:30ಕ್ಕೆ ಹೊರಬೀಳಲಿದೆ ಬಿಗ್ ತೀರ್ಪು!!

ಬೀದರ್ ಜಿಲ್ಲೆಯ ಐತಿಹಾಸಿಕ ಮತ್ತು ಧಾರ್ಮಿಕ ನಗರಿ ಬಸವಕಲ್ಯಾಣದಲ್ಲಿ ಜೂನ್ 28ರಂದು ಆಯೋಜಿಸಲಾಗಿರುವ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದ ಬೃಹತ್ ಹಿಂದೂ ಸಮಾವೇಶವು ಇಡೀ ರಾಜ್ಯದ ಗಮನ ಸೆಳೆದಿದೆ. ತಾಲೂಕಾಡಳಿತವು ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಈ ಬೃಹತ್ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದ ನಡೆ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಈ ಪ್ರತಿಷ್ಠಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಬುರ್ಗಿ ಹೈಕೋರ್ಟ್ ಪೀಠದಲ್ಲಿ ಸುದೀರ್ಘ ವಾದ-ಪ್ರತಿವಾದ ಆಲಿಸಿರುವ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠವು ಇಂದು ಮಧ್ಯಾಹ್ನ 2:30ಕ್ಕೆ ತನ್ನ ಮಹತ್ವದ ತೀರ್ಪನ್ನು ಪ್ರಕಟಿಸಲಿದೆ. ಹೈಕೋರ್ಟ್ ತೀರ್ಪಿನ ಮೇಲೆ ಇಡೀ ಜಿಲ್ಲೆಯ ಸಾರ್ವಜನಿಕರು ಹಾಗೂ ಧಾರ್ಮಿಕ ಮುಖಂಡರ ಕಣ್ಣು ನೆಟ್ಟಿದೆ.

ಕನ್ನೇರಿ ಶ್ರೀಗಳ ಸಮಾವೇಶಕ್ಕೆ ಲಿಂಗಾಯತ ಸ್ವಾಮೀಜಿಗಳ ಕಡಕ್ ಬ್ರೇಕ್
ಕನ್ನೇರಿ ಶ್ರೀಗಳ ಸಮಾವೇಶಕ್ಕೆ ಲಿಂಗಾಯತ ಸ್ವಾಮೀಜಿಗಳ ಕಡಕ್ ಬ್ರೇಕ್

ಕಲಬುರಗಿ ಹೈಕೋರ್ಟ್‌ನಲ್ಲಿ ಹೈವೋಲ್ಟೇಜ್ ವಾದ-ಪ್ರತಿವಾದ

ಬಸವಕಲ್ಯಾಣ ತಾಲೂಕಾಡಳಿತವು ಸಮಾವೇಶಕ್ಕೆ ತಡೆ ನೀಡಿದ್ದನ್ನು ಪ್ರಶ್ನಿಸಿ ಆಯೋಜಕರು ಮತ್ತು ಕನ್ನೇರಿ ಶ್ರೀಗಳ ಭಕ್ತರು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ನಿನ್ನೆ ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರು ಉಭಯ ಪಕ್ಷಗಳ ವಾದವನ್ನು ಆಲಿಸಿದರು.

ಸರ್ಕಾರದ ಪರ ವಾದ: ಸರ್ಕಾರದ ಪರವಾಗಿ ಪ್ರಭಾವಿ ವಕೀಲರಾದ ಶಶಿಕಿರಣ ಶೆಟ್ಟಿ ಅವರು ವಾದ ಮಂಡಿಸಿ, "ಬಸವಕಲ್ಯಾಣದಲ್ಲಿ ಪ್ರಸ್ತುತ ಪರಿಸ್ಥಿತಿ ಸೂಕ್ಷ್ಮವಾಗಿದೆ. ಸಮಾವೇಶಕ್ಕೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಈ ಕಾರಣದಿಂದಲೇ ತಾಲೂಕಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಅನುಮತಿ ನಿರಾಕರಿಸಿದೆ" ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.

ಸ್ವಾಮೀಜಿಗಳ ಪರ ವಾದ: ಕನ್ನೇರಿ ಶ್ರೀಗಳ ಹಾಗೂ ಆಯೋಜಕರ ಪರವಾಗಿ ಹಿರಿಯ ನ್ಯಾಯವಾದಿ ವೆಂಕಟೇಶ ದಳವಾಯಿ ಅವರು ಪ್ರಬಲ ವಾದ ಮಂಡಿಸಿದರು. "ಧಾರ್ಮಿಕ ಸಭೆ ಹಾಗೂ ಸಮಾವೇಶಗಳನ್ನು ನಡೆಸುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕು. ಶಾಂತಿಯುತವಾಗಿ ನಡೆಸುವ ಸಮಾವೇಶಕ್ಕೆ ರಾಜಕೀಯ ಒತ್ತಡಗಳಿಗೆ ಮಣಿದು ತಾಲೂಕಾಡಳಿತ ಏಕಾಏಕಿ ಅನುಮತಿ ನಿರಾಕರಿಸಿರುವುದು ಕಾನೂನುಬಾಹಿರ" ಎಂದು ತಾಲೂಕಾಡಳಿತದ ಆದೇಶವನ್ನು ಬಲವಾಗಿ ಆಕ್ಷೇಪಿಸಿದರು.

ಪರಸ್ಪರ ವಾದ-ಪ್ರತಿವಾದಗಳನ್ನು ಕೂಲಂಕಷವಾಗಿ ಆಲಿಸಿದ ನ್ಯಾಯಮೂರ್ತಿಗಳು, ಇಂದು ಮಧ್ಯಾಹ್ನ 2:30ಕ್ಕೆ ತೀರ್ಪು ಕಾಯ್ದಿರಿಸಿದ್ದು, ಬಸವಕಲ್ಯಾಣ ಚಲೋ ಕಾರ್ಯಕ್ರಮದ ಭವಿಷ್ಯ ಈ ತೀರ್ಪಿನ ಮೇಲೆ ನಿಂತಿದೆ.

ಕನ್ನೇರಿ ಶ್ರೀಗಳ ಸಮಾವೇಶಕ್ಕೆ ಲಿಂಗಾಯತ ಸ್ವಾಮೀಜಿಗಳ ತೀವ್ರ ವಿರೋಧ

ಜೂನ್ 28 ರಂದು ನಡೆಯಲಿರುವ ಕೊಲ್ಹಾಪುರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಈ ಬೃಹತ್ ಹಿಂದೂ ಸಮಾವೇಶಕ್ಕೆ ಸ್ಥಳೀಯವಾಗಿ ತೀವ್ರ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಬಸವಕಲ್ಯಾಣದ ಸ್ಥಳೀಯ ಲಿಂಗಾಯತ ಸ್ವಾಮೀಜಿಗಳು ಹಾಗೂ ಬಸವಾನುಯಾಯಿಗಳು ಈ ಸಮಾವೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ಕಲ್ಯಾಣದ ನೆಲದಲ್ಲಿ ವೈದಿಕ ಮತ್ತು ಮಠೀಯ ವಿಚಾರಗಳ ಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಲಿಂಗಾಯತ ಸ್ವಾಮೀಜಿಗಳು, ಈ ಸಮಾವೇಶಕ್ಕೆ ಯಾವುದೇ ಕಾರಣಕ್ಕೂ ಸರ್ಕಾರ ಅನುಮತಿ ನೀಡಬಾರದು ಎಂದು ಸಭೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೆ, ಒಂದು ವೇಳೆ ಹೈಕೋರ್ಟ್ ಅನುಮತಿ ನೀಡಿದರೂ ಸಹ, ಜೂನ್ 28ರ ಸಮಾವೇಶದ ದಿನದಂದೇ ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನೆ ಮತ್ತು ಕಲ್ಯಾಣ ಬಂದ್ ನಡೆಸಲು ಲಿಂಗಾಯತ ಸ್ವಾಮೀಜಿಗಳು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ: 'ಬಸವಕಲ್ಯಾಣ ಚಲೋ' ಅಭಿಯಾನ

ಇನ್ನೊಂದೆಡೆ, ತಾಲೂಕಾಡಳಿತವು ಸಮಾವೇಶಕ್ಕೆ ಅನುಮತಿ ನಿರಾಕರಿಸಿದ ಕ್ರಮಕ್ಕೆ ಹಿಂದೂ ಸಂಘಟನೆಗಳು ಹಾಗೂ ಕನ್ನೇರಿ ಮಠದ ಭಕ್ತ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್ (X) ಮತ್ತು ವಾಟ್ಸಾಪ್‌ಗಳಲ್ಲಿ ಸರ್ಕಾರದ ನಡೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, 'ಬಸವಕಲ್ಯಾಣ ಚಲೋ' ಎಂಬ ಹ್ಯಾಶ್‌ಟ್ಯಾಗ್ ಅಭಿಯಾನ ಮುಂಚೂಣಿಗೆ ಬಂದಿದೆ. ನ್ಯಾಯಾಲಯದ ತೀರ್ಪು ಏನೇ ಬಂದರೂ ಜೂನ್ 28ರಂದು ಲಕ್ಷಾಂತರ ಹಿಂದೂ ಕಾರ್ಯಕರ್ತರು ಬಸವಕಲ್ಯಾಣಕ್ಕೆ ಲಗ್ಗೆ ಇಡಲಿದ್ದಾರೆ ಎಂಬ ಪೋಸ್ಟ್‌ಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಪ್ರಮೋದ್ ಮುತಾಲಿಕ್ ಎಂಟ್ರಿ - ಕ್ರಾಂತಿಕಾರಿ ಕರೆ

ಈ ವಿವಾದಕ್ಕೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಂಟ್ರಿ ಕೊಟ್ಟಿದ್ದು, ತಾಲೂಕಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕನ್ನೇರಿ ಶ್ರೀಗಳ ಸಮಾವೇಶಕ್ಕೆ ತಡೆ ನೀಡಿರುವುದನ್ನು ಕಟು ಶಬ್ದಗಳಿಂದ ಖಂಡಿಸಿರುವ ಮುತಾಲಿಕ್,

"ಬಸವಕಲ್ಯಾಣದಲ್ಲಿ ಹಿಂದೂ ಸಮಾವೇಶ ಮಾಡಲು ಹಿಂದೂಗಳಿಗೇ ಅನುಮತಿ ನಿರಾಕರಿಸುತ್ತಿರುವುದು ಅತ್ಯಂತ ಖಂಡನೀಯ. ಇದು ತುಷ್ಟೀಕರಣದ ರಾಜಕಾರಣವಾಗಿದೆ. ನಾವು ಯಾವುದೇ ಭೀತಿಗೂ ಜಗ್ಗುವುದಿಲ್ಲ. ಹೈಕೋರ್ಟ್ ನಮಗೆ ನ್ಯಾಯ ನೀಡುವ ವಿಶ್ವಾಸವಿದೆ. ಒಂದು ವೇಳೆ ಯಾವುದೇ ಅಡೆತಡೆಗಳು ಬಂದರೂ ಸರಿ, ಇಡೀ ರಾಜ್ಯದ ಹಿಂದೂಗಳು ಜೂನ್ 28 ರಂದು 'ಬಸವಕಲ್ಯಾಣ ಚಲೋ' ಅಭಿಯಾನವನ್ನು ಯಶಸ್ವಿಗೊಳಿಸಲೇಬೇಕು" ಎಂದು ಮುತಾಲಿಕ್ ಕರೆ ನೀಡಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್‌ಗೆ ಸಿದ್ಧತೆ

ಈ ಪರ-ವಿರೋಧದ ಹೋರಾಟಗಳು ಮತ್ತು ಹೈಕೋರ್ಟ್‌ನ ಇಂದಿನ ತೀರ್ಪಿನ ಹಿನ್ನೆಲೆಯಲ್ಲಿ ಬಸವಕಲ್ಯಾಣ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯು ಬಸವಕಲ್ಯಾಣದಾದ್ಯಂತ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿದೆ. ಇಂದು ಮಧ್ಯಾಹ್ನ ಹೈಕೋರ್ಟ್ ನೀಡುವ ತೀರ್ಪು ಬಸವಕಲ್ಯಾಣದ ಮುಂದಿನ ಕಾನೂನು ಸುವ್ಯವಸ್ಥೆಯ ದಿಕ್ಕನ್ನು ನಿರ್ಧರಿಸಲಿದೆ. ಆಡಳಿತ ಮಂಡಳಿ ಹಾಗೂ ಹಿಂದೂ ಸಂಘಟನೆಗಳು ಕೋರ್ಟ್ ತೀರ್ಪನ್ನು ಎದುರುನೋಡುತ್ತಿವೆ.

Latest News