ಭೀಮಾತೀರ ಅಂದ ತಕ್ಷಣ ಎಲ್ಲೋ ಒಂದು ಕಡೆ ನೆತ್ತರು, ಹಗೆತನದ ಕಥೆಗಳೇ ಕಣ್ಣ ಮುಂದೆ ಬರುತ್ತವೆ. ಇತ್ತೀಚೆಗಷ್ಟೇ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಆರು ಜನರ ಭೀಕರ ಹತ್ಯೆ ಇಡೀ ರಾಜ್ಯವನ್ನೇ ನಡುಗಿಸಿತ್ತು. ನಿರಾಳೆ ಕುಟುಂಬದ ಆರು ಜನರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದ್ದ ಈ ಘಟನೆಯ ಕರಾಳ ನೆರಳು ಇನ್ನು ಮಾಸಿಲ್ಲ.
ಆದ್ರೆ, ಈ ಹತ್ಯೆಯಾದ ನಿರಾಳೆ ಕುಟುಂಬದ ಸದಸ್ಯರ ನೆನಪು ಈಗ ಕೇವಲ ಕರ್ನಾಟಕ ಮಾತ್ರವಲ್ಲ, ಪಕ್ಕದ ಮಹಾರಾಷ್ಟ್ರದಲ್ಲೂ ಭಾರಿ ಕಣ್ಣೀರು ಹಾಕಿಸುತ್ತಿದೆ. ಭೀಮಾತೀರದ ಈ ಸಹೋದರರ ಅಕಾಲಿಕ ಮರಣಕ್ಕೆ ಮಹಾರಾಷ್ಟ್ರದಾದ್ಯಂತ ಜನ ತೀವ್ರ ಸಂತಾಪ ಸೂಚಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ಆ ಕುಟುಂಬ ಸಾಕಿ ಬೆಳೆಸಿದ್ದ 'ಖಿಲಾರಿ ಹೋರಿಗಳು'!
ಉತ್ತರ ಕರ್ನಾಟಕ, ಮಹಾರಾಷ್ಟ್ರದಲ್ಲಿ ಫೇಮಸ್ ಆಗಿದ್ದ ನಿರಾಳೆ ಬ್ರದರ್ಸ್!
ಹೌದು, ಹತ್ಯೆಯಾದ ನಿರಾಳೆ ಕುಟುಂಬದ ಸಹೋದರರು ಕೇವಲ ಸಾಮಾನ್ಯ ರೈತರಾಗಿರಲಿಲ್ಲ. ಇಡೀ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಅವರು ಸಖತ್ ಫೇಮಸ್ ಆಗಿದ್ದರು. ಅದಕ್ಕೆ ಕಾರಣ ಅವರು ಸಾಕುತ್ತಿದ್ದ ಗಂಡುಮೆಟ್ಟಿದ 'ಖಿಲಾರಿ' ತಳಿಯ ಹೋರಿಗಳು (ಗೂಳಿಗಳು).
ಖಿಲಾರಿ ತಳಿಯ ಹೋರಿಗಳನ್ನು ಸಾಕುವುದು, ಅವುಗಳನ್ನು ಅತ್ಯಂತ ಪ್ರೀತಿಯಿಂದ ಮಕ್ಕಳಂತೆ ಸಾಕಿ ಸಲಹುವುದು ನಿರಾಳೆ ಸಹೋದರರ ಹವ್ಯಾಸ ಮತ್ತು ಹೆಮ್ಮೆಯಾಗಿತ್ತು. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ದೊಡ್ಡ ದೊಡ್ಡ ಜಾತ್ರೆಗಳು, ಕೃಷಿ ಉತ್ಸವಗಳು ಮತ್ತು ಹೋರಿ ಪ್ರದರ್ಶನಗಳಲ್ಲಿ ನಿರಾಳೆ ಸಹೋದರರು ಮತ್ತು ಅವರ ಖಿಲಾರಿ ಹೋರಿಗಳು ಇದ್ದರೆ ಅಲ್ಲಿ ಜನವೋ ಜನ!
ಮಹಾರಾಷ್ಟ್ರದ ಪ್ರತಿಷ್ಠೆಯ ಸಂಕೇತ 'ಖಿಲಾರಿ ಹೋರಿ'
ಪಕ್ಕದ ಮಹಾರಾಷ್ಟ್ರದಲ್ಲಿ ಖಿಲಾರಿ ತಳಿಯ ಹೋರಿಗಳನ್ನು ಸಾಕುವುದು ಬರೀ ಕೃಷಿ ಕೆಲಸಕ್ಕೆ ಮಾತ್ರವಲ್ಲ, ಅದೊಂದು ದೊಡ್ಡ ಪ್ರತಿಷ್ಠೆಯ ಸಂಕೇತ (Status Symbol). ಯಾರ ಮನೆಯಲ್ಲಿ ಗಟ್ಟಿಮುಟ್ಟಾದ ಖಿಲಾರಿ ಹೋರಿ ಇರುತ್ತದೆಯೋ, ಅವರಿಗೆ ಅಲ್ಲಿ ಸಿಗುವ ಗೌರವವೇ ಬೇರೆ.
ಅಂತಹ ಕಟ್ಟುಮಸ್ತಾದ, ರಾಜ ಗಾಂಭೀರ್ಯದ ಹೋರಿಗಳನ್ನು ನಿರಾಳೆ ಕುಟುಂಬದವರು ಸಾಕುತ್ತಿದ್ದರು. ಜಾತ್ರೆಗಳಲ್ಲಿ ಇವರ ಹೋರಿಗಳ ಪ್ರದರ್ಶನ ನೋಡಲೆಂದೇ ಸಾವಿರಾರು ಜನ ಕಾಯುತ್ತಿದ್ದರು. ಹೋರಿಗಳ ಖರೀದಿ ಮತ್ತು ಮಾರಾಟ ವ್ಯವಹಾರದಲ್ಲೂ ಈ ಸಹೋದರರು ಸಖತ್ ಹೆಸರು ಮಾಡಿದ್ದರು. ಮಹಾರಾಷ್ಟ್ರದ ದೊಡ್ಡ ದೊಡ್ಡ ರೈತರು, ಹೋರಿ ಪ್ರೇಮಿಗಳು ನಿರಾಳೆ ಸಹೋದರರ ಜೊತೆ ಉತ್ತಮ ಒಡನಾಟ ಹೊಂದಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಹಳೇ ವಿಡಿಯೋಗಳು ಫುಲ್ ವೈರಲ್!
ನಿರಾಳೆ ಕುಟುಂಬದ ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ, ಇತ್ತ ಖಿಲಾರಿ ಹೋರಿಗಳನ್ನು ಬೆಳೆಸುವ ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾವಿರಾರು ರೈತರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಿರಾಳೆ ಸಹೋದರರು ತಮ್ಮ ನೆಚ್ಚಿನ ಖಿಲಾರಿ ಹೋರಿಗಳ ಜೊತೆಗಿರುವ ಹಳೇ ವಿಡಿಯೋಗಳು ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಜಾತ್ರೆಗಳಲ್ಲಿ ಅವರು ಹೋರಿಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದ ಗತ್ತು, ಹೋರಿಗಳ ಮೈದಡವಿ ಪ್ರೀತಿ ತೋರುತ್ತಿದ್ದ ದೃಶ್ಯಗಳನ್ನು ನೋಡಿ ನೆಟ್ಟಿಗರು ಕಣ್ಣೀರು ಹಾಕುತ್ತಿದ್ದಾರೆ. "ಇಂತಹ ರೈತ ಕಲಿಗಳನ್ನು ಕ್ರೂರವಾಗಿ ಕೊಂದ ಆ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ" ಎಂದು ಹೋರಿ ಪ್ರೇಮಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಭೀಮಾತೀರದ ರ*ಕ್ತಚರಿತ್ರೆಗೆ ಬಲಿಯಾದ ಈ ನಿರಾಳೆ ಕುಟುಂಬದ ಸಹೋದರರು ಇಂದು ನಮ್ಮೊಂದಿಗಿಲ್ಲದೇ ಇರಬಹುದು, ಆದರೆ ಅವರು ಕೃಷಿ ಲೋಕದಲ್ಲಿ ಮತ್ತು ಖಿಲಾರಿ ಹೋರಿ ಸಾಕಣೆಯಲ್ಲಿ ಬಿಟ್ಟುಹೋದ ಹೆಸರು ಮಾತ್ರ ಗಡಿ ಭಾಗದ ಜನರ ಮನಸಲ್ಲಿ ಸದಾ ಜೀವಂತವಾಗಿರುತ್ತದೆ.