ಬೆಸ್ಕಾಂ ಬಿಗ್ ಅಪ್‌ಡೇಟ್- ಜುಲೈನಲ್ಲಿ ಭೌತಿಕ ವಿದ್ಯುತ್ ಬಿಲ್ ಇಲ್ಲ; ಜುಲೈ 29ರಂದು ಬೆಂಗಳೂರಿನ ಹಲವೆಡೆ ಪವರ್ ಕಟ್!!

ರಾಜಧಾನಿ ಬೆಂಗಳೂರಿನ ವಿದ್ಯುತ್ ಗ್ರಾಹಕರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಎರಡು ಪ್ರಮುಖ ಮಾಹಿತ ನೀಡಿದೆ. ಒಂದೆಡೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹ ಜ್ಯೋತಿ' ಯೋಜನೆಯ ಫಲಾನುಭವಿಗಳ ದತ್ತಾಂಶ ಹಾಗೂ ಮನೆ-ಮನೆ ಮಾಹಿತಿ ಪರಿಶೀಲನೆ ಕಾರ್ಯ ಭರದಿಂದ ಸಾಗುತ್ತಿರುವುದರಿಂದ ಜುಲೈ ತಿಂಗಳಲ್ಲಿ ಸಾಮಾನ್ಯ ಗೃಹ ಬಳಕೆ ಗ್ರಾಹಕರಿಗೆ ಭೌತಿಕ (ಫಿಸಿಕ್) ವಿದ್ಯುತ್ ಬಿಲ್ ವಿತರಿಸಲಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ನಗರದ ಪ್ರಮುಖ ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುವುದರಿಂದ ಜುಲೈ 29ರ ಬುಧವಾರದಂದು ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು ಜನತೆಗೆ ಬೆಸ್ಕಾಂ ಸೂಚನೆ | Photo Credit: CANVA
ಬೆಂಗಳೂರು ಜನತೆಗೆ ಬೆಸ್ಕಾಂ ಸೂಚನೆ | Photo Credit: CANVA

ಜುಲೈ ತಿಂಗಳ ವಿದ್ಯುತ್ ಬಿಲ್ ವ್ಯವಸ್ಥೆ

ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಹಾಗೂ ನೋಂದಾಯಿಸಿಕೊಂಡಿರುವ ಗ್ರಾಹಕರ ಮಾಹಿತಿ ಪರಿಶೀಲನೆಗಾಗಿ ಮೀಟರ್ రీಡರ್‌ಗಳನ್ನು (Meter Readers) ಮನೆ-ಮನೆಗೆ ನಿಯೋಜಿಸಲಾಗಿದೆ. ಈ ವಿಶೇಷ ಪರಿಶೀಲನಾ ಕಾರ್ಯದ ಹಿನ್ನೆಲೆಯಲ್ಲಿ ಜುಲೈ ತಿಂಗಳಿಗೆ ಸಂಬಂಧಿಸಿದಂತೆ ಗೃಹ ಬಳಕೆದಾರರ ಮನೆ ಬಾಗಿಲಿಗೆ ತೆರಳಿ ಭೌತಿಕವಾಗಿ ಬಿಲ್ ಪ್ರಿಂಟ್ ಮಾಡಿ ನೀಡುವ ಪ್ರಕ್ರಿಯೆಯನ್ನು ಬೆಸ್ಕಾಂ ತಾತ್ಕಾಲಿಕವಾಗಿ ತಡೆಹಿಡಿದಿದೆ.

ಬಿಲ್ ಲೆಕ್ಕಾಚಾರ ಹೇಗೆ?

ಸರಾಸರಿ ಆಧಾರಿತ ಬಿಲ್: ಜುಲೈ ತಿಂಗಳಲ್ಲಿ ಗ್ರಾಹಕರು ಬಳಸಿದ ವಿದ್ಯುತ್‌ಗೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳ ಸರಾಸರಿ ಬಳಕೆಯನ್ನು (Average Consumption) ಪರಿಗಣನೆಗೆ ತೆಗೆದುಕೊಂಡು ಬಿಲ್ ಸಿದ್ಧಪಡಿಸಲಾಗಿದೆ.

ಡಿಜಿಟಲ್ ಸಂದೇಶ ರವಾನೆ: ತಯಾರಿಸಿದ ಬಿಲ್ ಮೊತ್ತದ ಮಾಹಿತಿಯನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ (SMS) ಹಾಗೂ ಇಮೇಲ್ (E-mail) ಮೂಲಕ ಈಗಾಗಲೇ ಕಳುಹಿಸಿಕೊಡಲಾಗಿದೆ.

ಯಾರಿಗೆ ನೈಜ (ಆಕ್ಚುವಲ್) ಮೀಟರ್ ರೀಡಿಂಗ್ ಬಿಲ್ ಸಿಗಲಿದೆ?

ಸಾಮಾನ್ಯ ಗೃಹ ಬಳಕೆದಾರರಿಗೆ ಸರಾಸರಿ ಬಿಲ್ ನೀಡಲಾಗುತ್ತಿದ್ದರೂ, ಕೆಳಗಿನ ವರ್ಗದ ಗ್ರಾಹಕರಿಗೆ ಯಥಾರೀತಿ ನೈಜ ಮೀಟರ್ ರೀಡಿಂಗ್ (Actual Meter Reading) ಆಧಾರದ ಮೇಲೆಯೇ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ:

ಎಚ್‌ಟಿ ಗ್ರಾಹಕರು (High Tension Consumers): ಉದ್ಯಮ ಹಾಗೂ ದೊಡ್ಡ ವಾಣಿಜ್ಯ ಸಂಕೀರ್ಣಗಳು.

40 HP ಮತ್ತು ಅಧಿಕ ಲೋಡ್‌ ಗ್ರಾಹಕರು: 40 HP ಹಾಗೂ ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಲೋ ಟೆನ್ಷನ್ (LT) ಗ್ರಾಹಕರು.

ಸೋಲಾರ್ ಗ್ರಾಹಕರು (SRTPV): ಸೌರ ಮೇಲ್ಛಾವಣಿ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಅಳವಡಿಸಿಕೊಂಡಿರುವ ಗ್ರಾಹಕರು.

ತಾತ್ಕಾಲಿಕ ಸಂಪರ್ಕಗಳು: ನಿರ್ಮಾಣ ಕಾಮಗಾರಿ ಅಥವಾ ಶುಭ ಸಮಾರಂಭಗಳಿಗೆ ಪಡೆದಿರುವ ತಾತ್ಕಾಲಿಕ ವಿದ್ಯುತ್ ಸಂಪರ್ಕದಾರರು.

ಜುಲೈ 29ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

ಕೆಪಿಟಿಸಿಎಲ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿಗಳ ಕಾರಣದಿಂದಾಗಿ ನಗರದ ಉತ್ತರ ಹಾಗೂ ದಕ್ಷಿಣ ಭಾಗದ ಹಲವು ಪ್ರಮುಖ ಲೇಔಟ್‌ಗಳು, ಆಸ್ಪತ್ರೆ ವಲಯಗಳು ಮತ್ತು ರಸ್ತೆಗಳಲ್ಲಿ ಜುಲೈ 29ರ ಬುಧವಾರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಟ್ಟಿಗೇನಹಳ್ಳಿ ಸಬ್‌ಸ್ಟೇಷನ್ ವ್ಯಾಪ್ತಿ (ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ)

 ಕೆವಿ (66/11 KV) ಕಟ್ಟಿಗೇನಹಳ್ಳಿ ಸಬ್‌ಸ್ಟೇಷನ್‌ನಲ್ಲಿ ತುರ್ತು ಕಾಮಗಾರಿ ನಡೆಯಲಿದ್ದು, ಹೆಬ್ಬಾಳ ವಿಭಾಗದ ಸಿ-7 (C-7) ಉಪ ವಿಭಾಗದ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸತತ 6 ಗಂಟೆಗಳ ಕಾಲ ವಿದ್ಯುತ್ ಇರುವುದಿಲ್ಲ.

ಬಾಧಿತ ಪ್ರದೇಶಗಳು:

ಉತ್ತರ ಗೇಟ್ 1, 2, ಮತ್ತು 3

ವಿವಿಧ ರಾಯಭಾರ ಕಚೇರಿಗಳ ವ್ಯಾಪ್ತಿ (Embassy area)

ಫಿಲಿಪ್ಸ್ ಕಂಪನಿ (Philips Company) ಪರಿಸರ

ದ್ವಾರಕಾನಗರ ಹಾಗೂ ಬಾಬಾನಗರ

ಕಟ್ಟಿಗೇನಹಳ್ಳಿ ಸುತ್ತಮುತ್ತಲಿನ ಸಕಲ ಪ್ರದೇಶಗಳು

ಬಾಗಲೂರು ಕ್ರಾಸ್ ಮತ್ತು ಬಾಗಲೂರು ಮುಖ್ಯ ರಸ್ತೆ

ಮಣಿಪಾಲ ಕಾಲೇಜು, BSF, PDMS ವಲಯಗಳು

ಬಾಗಲೂರು ಕ್ರಾಸ್ ವಿನಾಯಕನಗರ ಮತ್ತು ಸುತ್ತಮುತ್ತಲಿನ ಬಡಾವಣೆಗಳು

ನಿಮ್ಹಾನ್ಸ್ ಮತ್ತು ಜಯದೇವ ಸಬ್‌ಸ್ಟೇಷನ್ ವ್ಯಾಪ್ತಿ (ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ)

66/11 ಕೆ.ವಿ. ನಿಮ್ಹಾನ್ಸ್ (NIMHANS) ಮತ್ತು ಜಯದೇವ (Jayadeva) ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ತುರ್ತು ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ದಕ್ಷಿಣ ಬೆಂಗಳೂರಿನ ಪ್ರಮುಖ ವಾಣಿಜ್ಯ ಹಾಗೂ ವಾಸದ ಪ್ರದೇಶಗಳಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳ್ಳಲಿದೆ.

ಬಾಧಿತ ಪ್ರಮುಖ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ವಲಯಗಳು:

ಎಸ್‌-1 ನಿಮ್ಹಾನ್ಸ್, ಕಿಡ್ವಾಯ್ ಸ್ಮಾರಕ ಗ್ರಂಥಿ ಸಂಸ್ಥೆ

ರಾಜೀವ್ ಗಾಂಧಿ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ, ಮತ್ತು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಪರಿಸರ

ಬಾಧಿತ ಬಡಾವಣೆಗಳು ಮತ್ತು ರಸ್ತೆಗಳು:

ಜಯನಗರ 1ನೇ, 2ನೇ, 3ನೇ, 4ನೇ ಹಾಗೂ 9ನೇ 'ಟಿ' ಬ್ಲಾಕ್

ಜಯನಗರ ಈಸ್ಟ್ ಎಂಡ್, ಎಬಿಸಿಡಿ ರಸ್ತೆ, ಬಿಎಚ್‌ಇಎಲ್ ಲೇಔಟ್ (BHEL Layout)

ಸೋಮೇಶ್ವರ ನಗರ, ವಿಲ್ಸನ್ ಗಾರ್ಡನ್, ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ ಮತ್ತು ಸುತ್ತಮುತ್ತ

ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಮತ್ತು ಎನ್.ಎಸ್. ಪಾಳ್ಯ ಕೈಗಾರಿಕಾ ಪ್ರದೇಶ

ಜಾಹ್ನವಿ ಎನ್‌ಕ್ಲೇವ್‌, ಅನಂತ ಲೇಔಟ್, ಬಿಳೆಕಳ್ಳಿ ಮುಖ್ಯ ರಸ್ತೆ

ಎಸ್‌ಆರ್‌ಕೆ ಗಾರ್ಡನ್, ಎನ್ಎಲ್ ಲೇಔಟ್, ತಿಲಕ್ ನಗರ, ಶಾಂತಿ ಪಾರ್ಕ್

ಜಯದೇವ ಆಸ್ಪತ್ರೆ ಸುತ್ತಮುತ್ತ, ರ್ಯಾಂಕ್ ಕಾಲೋನಿ, ಎನ್‌ಎಸ್ ಪಾಳ್ಯ ಮೇನ್ ರೋಡ್

ಜಿಆರ್‌ಬಿ ಮೇನ್ ರೋಡ್, ಬಿಸ್ಮಿಲ್ಲಾ ನಗರ, ಶೋಭಾ ಅಪಾರ್ಟ್‌ಮೆಂಟ್, ದಿವ್ಯಶ್ರೀ ಟೆರೇಸಸ್

ವೇಗಾಸಿಟಿ ಮಾಲ್ (Vega City Mall), ಏರ್‌ಟೆಲ್ ಆಫೀಸ್, ಬನ್ನೇರುಘಟ್ಟ ಮುಖ್ಯ ರಸ್ತೆ

ಕೆ.ಇ.ಬಿ ಕಾಲೋನಿ, ಗುರಪ್ಪನ ಪಾಳ್ಯ, ಬಿಟಿಎಂ 1ನೇ ಹಂತ (BTM 1st Stage) ಹಾಗೂ ಸುತ್ತಮುತ್ತಲಿನ ಪ್ರದೇಶಗಳು

ಗ್ರಾಹಕರಿಗೆ ಬೆಸ್ಕಾಂ ಮುಖ್ಯ ಸೂಚನೆಗಳು

ವಿದ್ಯುತ್ ವ್ಯತ್ಯಯ ಹಾಗೂ ಬಿಲ್ಲಿಂಗ್ ಪ್ರಕ್ರಿಯೆಯಲ್ಲಿನ ಬದಲಾವಣೆಗಳ ಕುರಿತು ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ವಿನಂತಿಸಿದೆ.

ಪವರ್ ಕಟ್ ಮುನ್ನೆಚ್ಚರಿಕೆ: ಜುಲೈ 29ರಂದು ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ನಿವಾಸಿಗಳು, ಕಚೇರಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ತಮ್ಮ ದೈನಂದಿನ ಕಾರ್ಯಗಳನ್ನು ಅದಕ್ಕೆ ತಕ್ಕಂತೆ ಯೋಜಿಸಿಕೊಳ್ಳಬೇಕು. ನೀರಿನ ಪಂಪ್‌ಗಳು, ಇನ್ವರ್ಟರ್ ಹಾಗೂ ಇತರೆ ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಜಾಗ್ರತೆ ವಹಿಸುವುದು ಸೂಕ್ತ.

ಬಿಲ್ ಪಾವತಿ: ಭೌತಿಕ ಬಿಲ್ ಸಿಗದ ಗೃಹ ಬಳಕೆದಾರರು ತಮಗೆ ಬಂದಿರುವ ಎಸ್‌ಎಂಎಸ್/ಇಮೇಲ್ ಲಿಂಕ್‌ಗಳನ್ನು ಬಳಸಿ ಅಥವಾ ಬೆಸ್ಕಾಂನ ಅಧಿಕೃತ ಆನ್‌ಲೈನ್ ಪೋರ್ಟಲ್/ಆಪ್ (Bescom Mithra) ಮೂಲಕ ಸರಾಸರಿ ಬಿಲ್ ಮೊತ್ತವನ್ನು ಸುಲಭವಾಗಿ ಪಾವತಿಸಬಹುದು.

ಸಹಾಯವಾಣಿ: ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬಂದಲ್ಲಿ ಅಥವಾ ಬಿಲ್‌ಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ಬೆಸ್ಕಾಂನ ಉಚಿತ ಸಹಾಯವಾಣಿ ಸಂಖ್ಯೆ 1912 ಅನ್ನು ಸಂಪರ್ಕಿಸಬಹುದಾಗಿದೆ.

ವಿದ್ಯುತ್ ಜಾಲದ ಸುಧಾರಣೆ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ತುರ್ತು ಕಾಮಗಾರಿಗಳು ಹಾಗೂ ಪರಿಶೀಲನೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

Latest News