May 2, 2026 Languages : ಕನ್ನಡ | English

ಚಂದ್ರೇಗೌಡನ ಮೊಬೈಲ್‌ನಲ್ಲಿತ್ತು 20 ಮಹಿಳೆಯರ ರಹಸ್ಯ ವಿಡಿಯೋ - ಯಾರೀ ಮುಖವಾಡಧಾರಿ? ಕೇಳಿದ್ರೆ ಬೆಚ್ಚಿ ಬೀಳ್ತೀರಾ!!

ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ಹುಟ್ಟಿಸುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿ, ವಿಡಿಯೋ ಚಿತ್ರೀಕರಿಸಿಕೊಂಡು ಅವರನ್ನು ಬೆದರಿಸುತ್ತಿದ್ದ ಹನಿಯೂರು ಚಂದ್ರೇಗೌಡ ಎಂಬುವವನನ್ನು ಆರ್‌.ಆರ್. ನಗರ (ರಾಜರಾಜೇಶ್ವರಿ ನಗರ) ಪೊಲೀಸರು ಬಂಧಿಸಿದ್ದಾರೆ.

ಆರ್‌.ಆರ್. ನಗರದಲ್ಲಿ 'ಕಿಲಾಡಿ' ಚಂದ್ರೇಗೌಡನ ಅಸಲಿ ಆಟ ಬಯಲು
ಆರ್‌.ಆರ್. ನಗರದಲ್ಲಿ 'ಕಿಲಾಡಿ' ಚಂದ್ರೇಗೌಡನ ಅಸಲಿ ಆಟ ಬಯಲು

ಯಾರು ಈ ಚಂದ್ರೇಗೌಡ?

ಬಂಧಿತ ಚಂದ್ರೇಗೌಡ ಸಾಮಾನ್ಯ ವ್ಯಕ್ತಿಯಲ್ಲ, ಈತ ರಾಮನಗರ ಜಿಲ್ಲೆಯ ಮಕ್ಕಳ ಆಯೋಗ ಸಮಿತಿಯ ಸದಸ್ಯನಾಗಿ ಕೆಲಸ ಮಾಡುತ್ತಿದ್ದ. ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು ಒಳಗೊಳಗೆ ಮಾತ್ರ ಮಹಿಳೆಯರ ಬಾಳಿನಲ್ಲಿ ಆಟವಾಡುತ್ತಿದ್ದ ಈತನ ಮುಖವಾಡ ಈಗ ಕಳಚಿದೆ.

ಸುಳ್ಳು ಹೇಳೋದ್ರಲ್ಲಿ ಇವನು ಎತ್ತಿದ ಕೈ!

ಈ ಚಂದ್ರೇಗೌಡ ಅನ್ನೋನು ಒಂಥರಾ ಕಿಲಾಡಿ ವಂಚಕ. ಜನರನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ನಂಬಿಸೋಕೆ ಒಂದೊಂದು ಸಲ ಒಂದೊಂದು ನಾಟಕ ಆಡ್ತಿದ್ದ. ಇವನ ಅಸಲಿ ಮುಖವಾಡಗಳೇ ಬೇರೆ:

ಒಂದೊಂದು ಕಡೆ ಒಂದೊಂದು ವೇಷ: ಕೆಲವರಿಗೆ ನಾನು "ದೊಡ್ಡ ಪೊಲೀಸ್ ಆಫೀಸರ್" ಅಂತ ಕಥೆ ಬಿಡ್ತಿದ್ದ.

ವಕೀಲನ ಸೋಗು: ಇನ್ನೂ ಕೆಲವರ ಹತ್ತಿರ ಹೋಗಿ ನಾನು "ಲಾಯರ್" ಇಲ್ಲಾಂದ್ರೆ "ಮೀಡಿಯಾದವನು" ಅಂತ ಸೀನ್ ಹಾಕ್ತಿದ್ದ.

ಎಲ್ಲದಕ್ಕೂ ಡುಪ್ಲಿಕೇಟ್ ಕಾರ್ಡ್: ಇವನು ಹೇಳ್ತಿರೋ ಸುಳ್ಳನ್ನ ಜನ ನಂಬಲಿ ಅಂತಾನೇ ನಕಲಿ ಐಡಿ ಕಾರ್ಡ್‌ಗಳನ್ನು ರೆಡಿ ಮಾಡಿಕೊಂಡಿದ್ದ. ಇದನ್ನೇ ತೋರಿಸಿ ಎಲ್ಲರನ್ನೂ ಹೆದರಿಸ್ತಾ, ನಂಬಿಸ್ತಾ ಬುಟ್ಟಿಗೆ ಹಾಕಿಕೊಳ್ತಿದ್ದ!

ಮಹಿಳೆಗೆ ಮದುವೆಯ ಆಸೆ ತೋರಿಸಿ ವಂಚನೆ

ಇತ್ತೀಚೆಗೆ ಗಂಡನಿಂದ ದೂರವಾಗಿದ್ದ ಒಬ್ಬ ಮಹಿಳೆಯ ಪರಿಚಯ ಈತನಿಗೆ ಆಗಿತ್ತು. ಆಕೆಯ ಮುಂದೆ ತಾನು ಒಬ್ಬ ಕಾಲೇಜು ಲೆಕ್ಚರರ್ ಅಂತ ಸುಳ್ಳು ಹೇಳಿದ್ದ. ಅಷ್ಟೇ ಅಲ್ಲ, "ನನಗೂ ಡಿವೋರ್ಸ್ ಆಗಿದೆ, ನಿನ್ನನ್ನು ಮದುವೆಯಾಗುತ್ತೇನೆ" ಎಂದು ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಈ ಸಮಯದಲ್ಲಿ ಕಿಲಾಡಿ ಚಂದ್ರೇಗೌಡ ಯಾರಿಗೂ ತಿಳಿಯದಂತೆ ವಿಡಿಯೋ ಮಾಡಿಕೊಂಡಿದ್ದ.

ನಂತರ ತನ್ನ ಅಸಲಿ ರೂಪ ತೋರಿಸಿದ ಈತ, ಅದೇ ವಿಡಿಯೋ ಇಟ್ಟುಕೊಂಡು ಆಕೆಯನ್ನು ಬ್ಲಾಕ್‌ಮೇಲ್ ಮಾಡಲು ಶುರುಮಾಡಿದ್ದ. ವಿಡಿಯೋ ಲೀಕ್ ಮಾಡುತ್ತೇನೆ ಎಂದು ಬೆದರಿಸಿ ಆ ಮಹಿಳೆಯಿಂದ ಬರೋಬ್ಬರಿ ಐದು ಲಕ್ಷ ರೂಪಾಯಿ ಹಣವನ್ನೂ ಕಿತ್ತುಕೊಂಡಿದ್ದ.

ಮೊಬೈಲ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರ ವಿಡಿಯೋ!
ಒಮ್ಮೆ ಆ ಮಹಿಳೆ ಚಂದ್ರೇಗೌಡನ ಮೊಬೈಲ್ ಅನ್ನು ರಹಸ್ಯವಾಗಿ ಪರಿಶೀಲಿಸಿದಾಗ ಆಕೆಗೆ ದೊಡ್ಡ ಶಾಕ್ ಕಾದಿತ್ತು. ಆತನ ಫೋನ್‌ನಲ್ಲಿ ಕೇವಲ ಈಕೆಯ ವಿಡಿಯೋ ಮಾತ್ರ ಇರಲಿಲ್ಲ, ಬದಲಾಗಿ ಇಪ್ಪತ್ತಕ್ಕೂ ಹೆಚ್ಚು ಬೇರೆ ಬೇರೆ ಮಹಿಳೆಯರ ಫೋಟೋಗಳು, ವಿಡಿಯೋಗಳು ಮತ್ತು ಅಸಭ್ಯ ಚಾಟಿಂಗ್‌ಗಳು ಪತ್ತೆಯಾಗಿದ್ದವು. ಈತ ಹಲವು ಮಹಿಳೆಯರಿಗೆ ಇದೇ ರೀತಿ ಮೋಸ ಮಾಡುತ್ತಿದ್ದಾನೆ ಎಂದು ತಿಳಿದ ಕೂಡಲೇ ಆ ಮಹಿಳೆ ಆರ್‌.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸ್ ಬಲೆಗೆ ಬಿದ್ದ ಆರೋಪಿ

ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ನಿನ್ನೆ ಚಂದ್ರೇಗೌಡನನ್ನು ಬಂಧಿಸಿದ್ದಾರೆ. ಆತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿರುವ ಡೇಟಾ ನೋಡಿ ಪೊಲೀಸರೇ ದಂಗಾಗಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಇಂತಹ ಮತ್ತೊಂದು ಕೃತ್ಯ ಬೆಳಕಿಗೆ ಬಂದಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ.