ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಸಮೀಪದ ಹನುಮಂತಗೌಡನಪಾಳ್ಯದಲ್ಲಿ ಶನಿವಾರ ಬೆಳಿಗ್ಗೆ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ತಾಯಿಯ ಕೈ ಹಿಡಿದು ಆಸರೆಯಾಗಿ ನಡೆಯುತ್ತಿದ್ದ ಕೇವಲ 4 ವರ್ಷದ ಪುಟ್ಟ ಬಾಲಕಿಯೊಬ್ಬಳು, ಅತಿವೇಗವಾಗಿ ಬಂದ ಸರಕು ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಮೃತ ಬಾಲಕಿಯನ್ನು ನಿಶಿಕಾ ಎಂದು ಗುರುತಿಸಲಾಗಿದ್ದು, ಈಕೆ ದಾಸನಪುರದ ನಿವಾಸಿಗಳಾದ ರಾಜೇಂದ್ರ ಮತ್ತು ಲಾವಣ್ಯ ದಂಪತಿಯ ಮಗಳಾಗಿದ್ದಾಳೆ. ಘಟನೆ ನಡೆದ ದಿನದಂದು ತಾಯಿ ಲಾವಣ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಸಮೀಪದ ಶ್ರೀ ಆಂಜನೇಯ ದೇವಸ್ಥಾನಕ್ಕೆ ದರ್ಶನ ಪಡೆಯಲು ತೆರಳುತ್ತಿದ್ದರು. ಲಾವಣ್ಯ ಅವರು ಒಂದು ಮಗುವನ್ನು ತಮ್ಮ ತೋಳುಗಳಲ್ಲಿ ಹೊತ್ತುಕೊಂಡಿದ್ದರೆ, ನಾಲ್ಕು ವರ್ಷದ ನಿಶಿಕಾಳ ಕೈ ಹಿಡಿದುಕೊಂಡು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಹಿಂದಿನಿಂದ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಸರಕು ವಾಹನವು ಏಕಾಏಕಿ ಬಾಲಕಿಯ ಮೇಲೆ ಹತ್ತಿಸಿದೆ.

ಈ ಭೀಕರ ದೃಶ್ಯವನ್ನು ಸ್ವತಃ ತಾಯಿಯೇ ಕಣ್ಣಾರೆ ಕಂಡಿದ್ದಾರೆ. "ನಾನು ನನ್ನ ಮಗಳ ಕೈ ಹಿಡಿದೇ ನಡೆದುಕೊಂಡು ಹೋಗುತ್ತಿದ್ದೆ, ನನ್ನ ಕಣ್ಣೆದುರೇ ಅವಳು ಮೃತಪಟ್ಟಳು" ಎಂದು ತಾಯಿ ಲಾವಣ್ಯ ಅವರು ರೋಧಿಸುತ್ತಿರುವುದು ಸ್ಥಳದಲ್ಲಿದ್ದವರ ಮನಕಲಕುವಂತಿತ್ತು. ನಿಶಿಕಾ ಅಂಗನವಾಡಿ ಶಾಲೆಗೆ ಹೋಗುತ್ತಿದ್ದ ಮುದ್ದು ಮಗಳಾಗಿದ್ದು, ಕುಟುಂಬದ ಕಣ್ಣೀರಿನ ಮಡುವಿನಲ್ಲಿ ಮುಳುಗಿದೆ.

ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ಅಪಘಾತಕ್ಕೆ ಕಾರಣವಾದ ಲಾರಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ ಮತ್ತು ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ಕೂಡಲೇ ಮದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು (MH-04-HY-2203) ವಶಕ್ಕೆ ಪಡೆದಿದ್ದಾರೆ. ಲಾರಿಯ ಚಾಲಕನನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಪುಟ್ಟ ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ರಸ್ತೆಗಳಲ್ಲಿ ವಾಹನ ಚಾಲಕರು ಅತಿವೇಗ ಮತ್ತು ನಿರ್ಲಕ್ಷ್ಯವನ್ನು ತೋರುವುದರಿಂದ ಇಂತಹ ಎಷ್ಟೋ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂಬುದು ಸಾರ್ವಜನಿಕರ ಕಳವಳವಾಗಿದೆ.