Apr 24, 2026 Languages : ಕನ್ನಡ | English

ಡ್ರಾಗರ್‌ನಿಂದ ಇರಿದು ಪರಾರಿಯಾಗಿದ್ದ ನಾಲ್ವರು ಪಾತಕಿಗಳು ಅರೆಸ್ಟ್ - ಪಾರಿವಾಳಕ್ಕಾಗಿ ಲಗ್ಗೆರೆಯಲ್ಲಿ ಘೋರ ಹತ್ಯೆ!!

ಸಿಲಿಕಾನ್ ಸಿಟಿಯಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಶುರುವಾಗುವ ಗಲಾಟೆಗಳು ಎಲ್ಲಿಗೆ ಬಂದು ನಿಲ್ಲುತ್ತವೆ ಎಂದು ಊಹಿಸುವುದೂ ಕಷ್ಟವಾಗಿದೆ. ಕೇವಲ ಒಂದು ಪಾರಿವಾಳದ ವಿಚಾರಕ್ಕೆ ಶುರುವಾದ ಕಿರಿಕ್, ಲಗ್ಗೆರೆಯ ರಾಜಗೋಪಾಲನಗರ ವ್ಯಾಪ್ತಿಯಲ್ಲಿ ಒಬ್ಬ ಅಮಾಯಕ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ. 24 ವರ್ಷದ ಮಲ್ಲಿಕಾರ್ಜುನ್ ಎಂಬುವವರೇ ಈ ಕ್ರೂರ ಹತ್ಯೆಗೆ ಬಲಿಯಾದ ದುರ್ದೈವಿ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ನೋಡಿ ತಂದೆ-ತಾಯಿ ಆಕ್ರಂದನ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ನೋಡಿ ತಂದೆ-ತಾಯಿ ಆಕ್ರಂದನ

ಲಗ್ಗೆರೆಯ ನಿವಾಸಿಯಾದ ಪ್ರಶಾಂತ್ ಎಂಬಾತನಿಗೆ ಪಾರಿವಾಳಗಳನ್ನು ಸಾಕುವುದೆಂದರೆ ಎಲ್ಲಿಲ್ಲದ ಪ್ರೀತಿ. ತನ್ನ ಮನೆಯಲ್ಲೇ ಸಾಕಷ್ಟು ಪಾರಿವಾಳಗಳನ್ನು ಆತ ಸಾಕಿ ಸಲಹುತ್ತಿದ್ದ. ಆದರೆ, ಕಳೆದ ಕೆಲವು ದಿನಗಳಿಂದ ಆತನ ಕೆಲವು ಪಾರಿವಾಳಗಳು ನಾಪತ್ತೆಯಾಗಿದ್ದವು. ತನ್ನ ಪಾರಿವಾಳಗಳನ್ನು ಯಾರೋ ಕದ್ದಿದ್ದಾರೆ ಎಂಬ ಸಂಶಯ ಆತನನ್ನು ಕಾಡುತ್ತಿತ್ತು. ಇದೇ ವಿಚಾರವಾಗಿ ಪ್ರಶಾಂತ್ ಮತ್ತು ಏರಿಯಾದ ಇತರ ಕೆಲವು ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.

"ನನ್ನ ಪಾರಿವಾಳ ನೀವೇ ಕದ್ದಿರೋದು, ಅದನ್ನ ವಾಪಸ್ ಕೊಟ್ಟುಬಿಡಿ" ಅಂತ ಪ್ರಶಾಂತ್ ಕೇಳಿದ್ದಾನೆ. ಈ ಮಾತಿಗೆ ಕೆರಳಿದ ಎದುರಾಳಿ ಗ್ಯಾಂಗ್ ಪ್ರಶಾಂತ್ ಜೊತೆ ಜಗಳಕ್ಕೆ ನಿಂತಿದೆ. ಮಾತು ಬೆಳೆದು ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಇತ್ತ ತನ್ನ ಪ್ರಾಣ ಸ್ನೇಹಿತ ಪ್ರಶಾಂತ್‌ಗೆ ಏಟು ಬೀಳ್ತಿದೆ ಅಂತ ಗೊತ್ತಾಗಿದ್ದೇ ತಡ, ಮಲ್ಲಿಕಾರ್ಜುನ್ ಅವನನ್ನ ಕಾಪಾಡೋಕೆ ಓಡಿ ಬಂದಿದ್ದಾನೆ. ಆದ್ರೆ ಸಖತ್ ಆವೇಶದಲ್ಲಿದ್ದ ಆ ಗುಂಪು, ಮೊದಲೇ ಪ್ಲಾನ್ ಮಾಡಿದ ಹಾಗೆ ಮಾರಕಾಸ್ತ್ರಗಳನ್ನ ಇಟ್ಕೊಂಡು ಮಲ್ಲಿಕಾರ್ಜುನ್ ಮೇಲೆ ಮುಗಿಬಿದ್ದಿದೆ.

ಗಲಾಟೆ ತಾರಕಕ್ಕೇರಿದ ಕ್ಷಣದಲ್ಲಿ, ಆರೋಪಿಗಳು ತಮ್ಮ ಬಳಿಯಿದ್ದ ಡ್ರಾಗರ್‌ನಿಂದ (ಚಾಕು) ಮಲ್ಲಿಕಾರ್ಜುನ್ ಬೆನ್ನಿಗೆ ಬಲವಾಗಿ ಇರಿದಿದ್ದಾರೆ. ಬೆನ್ನಿನ ಭಾಗಕ್ಕೆ ಆಳವಾಗಿ ಗಾಯವಾದ ಕಾರಣ ಮಲ್ಲಿಕಾರ್ಜುನ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ಗಲಾಟೆ ಕಂಡು ಸ್ಥಳೀಯರು ಓಡಿ ಬರುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಆಸ್ಪತ್ರೆಯಲ್ಲಿ ಹೋರಾಡಿ ಸೋತ ಮಲ್ಲಿಕಾರ್ಜುನ್

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಲ್ಲಿಕಾರ್ಜುನ್‌ನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಆತನನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದರೂ, ರಕ್ತಸ್ರಾವ ಹೆಚ್ಚಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮಲ್ಲಿಕಾರ್ಜುನ್ ಕೊನೆಯುಸಿರೆಳೆದಿದ್ದಾರೆ. ಕೇವಲ 24 ವರ್ಷದ ಯುವಕನ ಈ ಸಾವು ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ತಂದೆ-ತಾಯಿಯ ಆಸರೆಯಾಗಬೇಕಿದ್ದ ಮಗ ಹೀಗೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದದ್ದು ಏರಿಯಾ ಜನರನ್ನು ಬೆಚ್ಚಿಬೀಳಿಸಿದೆ.

ಪೊಲೀಸ್ ಕಾರ್ಯಾಚರಣೆ ಮತ್ತು ಡಿಸಿಪಿ ಮಾಹಿತಿ

"ಮಲ್ಲಿಕಾರ್ಜುನ್ ಕೊಲೆ ಕೇಸ್ ದಾಖಲಾಗುತ್ತಿದ್ದಂತೆಯೇ ರಾಜಗೋಪಾಲನಗರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಅವರ ಮಾರ್ಗದರ್ಶನದಲ್ಲಿ ಸ್ಪೆಷಲ್ ಟೀಮ್ ಮಾಡಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಈ ಕೊಲೆಗೆ ಸಂಬಂಧಿಸಿದಂತೆ ದರ್ಶನ್, ಸುರೇಂದ್ರ, ಮಹೇಂದ್ರ ಮತ್ತು ವಿಜಯ್ ಅನ್ನೋ ನಾಲ್ವರು ಕಿರಾತಕರನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ."

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ನಾಗೇಶ್ ಅವರು, "ಪಾರಿವಾಳ ಕಳ್ಳತನದ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಈ ಕೊಲೆಗೆ ಕಾರಣವಾಗಿದೆ. ಪ್ರಶಾಂತ್ ಎಂಬಾತನ ಪಾರಿವಾಳವನ್ನು ಆರೋಪಿಗಳೇ ಕದ್ದಿದ್ದಾರೆ ಎನ್ನಲಾದ ವಿಚಾರವಾಗಿ ಜಗಳ ಶುರುವಾಗಿದೆ. ಈ ವೇಳೆ ಸ್ನೇಹಿತನ ಪರವಾಗಿ ಬಂದಿದ್ದ ಮಲ್ಲಿಕಾರ್ಜುನ್ ಕೊಲೆಯಾಗಿದ್ದಾನೆ. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ಗಲಾಟೆಯಲ್ಲಿ ಇನ್ನೂ ಐದಾರು ಮಂದಿ ಭಾಗಿಯಾಗಿರುವ ಮಾಹಿತಿ ಇದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ನಮ್ಮ ತಂಡಗಳು ತೀವ್ರ ಹುಡುಕಾಟ ನಡೆಸುತ್ತಿವೆ," ಎಂದಿದ್ದಾರೆ.