Apr 1, 2026 Languages : ಕನ್ನಡ | English

ಬೆಂಗಳೂರು ಕರಗ ಉತ್ಸವ - ನಾಳೆ ರಾತ್ರಿ ಈ ರಸ್ತೆಗಳಲ್ಲಿ ಹೋಗೋ ಪ್ಲಾನ್ ಇದೆಯಾ? ಮೊದಲು ಇದನ್ನು ಓದಿ!!

ಬೆಂಗಳೂರಿನ ಹೆಮ್ಮೆಯ ಸಂಸ್ಕೃತಿ, ಐತಿಹಾಸಿಕ 'ಬೆಂಗಳೂರು ಕರಗ ಶಕ್ತ್ಯೋತ್ಸವ'ಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಭಕ್ತಾದಿಗಳೆಲ್ಲರೂ ಕರಗವನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಆದ್ರೆ, ಈ ಕರಗ ಸಂಭ್ರಮದ ನಡುವೆ ವಾಹನ ಸವಾರರಿಗೆ ಒಂದು ಸಣ್ಣ ಮನವಿ. ಕರಗ ಮೆರವಣಿಗೆಯ ಹಿನ್ನೆಲೆಯಲ್ಲಿ ನಾಳೆ (ಏಪ್ರಿಲ್ 1) ರಾತ್ರಿಯಿಂದ ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನೀವೇನಾದ್ರೂ ಆ ಮಾರ್ಗದಲ್ಲಿ ಹೋಗೋ ಪ್ಲಾನ್ ಮಾಡಿದ್ರೆ, ಈ ವಿಷಯಗಳನ್ನು ಒಮ್ಮೆ ನೋಡ್ಕೊಳ್ಳಿ.

ಕರಗ ಸಂಭ್ರಮಕ್ಕೆ ಸಜ್ಜಾದ ಬೆಂಗಳೂರು
ಕರಗ ಸಂಭ್ರಮಕ್ಕೆ ಸಜ್ಜಾದ ಬೆಂಗಳೂರು

ಯಾವೆಲ್ಲಾ ರಸ್ತೆ ಬಂದ್?

ಕರಗ ಉತ್ಸವದ ಅಂಗವಾಗಿ, ಏಪ್ರಿಲ್ 1ರ ರಾತ್ರಿ 9 ಗಂಟೆಯಿಂದ ಏಪ್ರಿಲ್ 2ರ ಬೆಳಗ್ಗೆ 7 ಗಂಟೆಯವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

  • ಮಾರ್ಕೆಟ್ ಸರ್ಕಲ್‌ನಿಂದ ಅವೆನ್ಯೂ ಸರ್ಕಲ್ ಮತ್ತು ಮೈಸೂರು ಬ್ಯಾಂಕ್ ಸರ್ಕಲ್ ವರೆಗಿನ ರಸ್ತೆಗಳು ಈ ಸಮಯದಲ್ಲಿ ಬಂದ್ ಇರಲಿವೆ.

  • ಸವಾರರು ಈ ರಸ್ತೆಯ ಬದಲು SPG ರಸ್ತೆ, ಟೌನ್ ಹಾಲ್ ಮತ್ತು ಕೆಂಪೇಗೌಡ ರಸ್ತೆ ಮೂಲಕ ಸಂಚರಿಸಲು ಸಂಚಾರ ಪೊಲೀಸರು ಸೂಚಿಸಿದ್ದಾರೆ.

  • ಅಲ್ಲದೆ, ಕರಗ ದೇವಾಲಯದಿಂದ ಹೊರಟು ಮರಳಿ ಬರುವವರೆಗೂ ಅಕ್ಕಿಪೇಟೆ ಮತ್ತು ಓಟಿಸಿ ಮುಖ್ಯ ರಸ್ತೆಗಳು ಸಹ ಪೂರ್ಣ ಬಂದ್ ಇರಲಿವೆ. ದಯವಿಟ್ಟು ಈ ರಸ್ತೆಗಳನ್ನು ಬಿಟ್ಟು ಪರ್ಯಾಯ ಮಾರ್ಗಗಳನ್ನು ಬಳಸಿ.

ಸುರಕ್ಷತೆಗೆ ಹೈ ಅಲರ್ಟ್

ನಮ್ಮ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಭದ್ರತೆಯ ಪರಿಶೀಲನೆ ನಡೆಸಿದ್ದಾರೆ. ಕರಗ ಸಾಗುವ ಸುಮಾರು 22 ಕಿಲೋಮೀಟರ್ ಉದ್ದದ ಹಾದಿಯಲ್ಲಿ ಭದ್ರತೆಗಾಗಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕರಗ ಸಾಗುವ ಪ್ರತಿಯೊಂದು ಹೆಜ್ಜೆಯ ಮೇಲೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಪಡೆ ಸಜ್ಜಾಗಿದೆ.

ಭಕ್ತಾದಿಗಳಿಗೆ ಸೂಚನೆ

ಹೂವಿನ ಕರಗವು ಬುಧವಾರ ಮಧ್ಯರಾತ್ರಿ 12.30ಕ್ಕೆ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ನೀವು ಕರಗ ನೋಡಲು ಹೋಗುವುದಾದರೆ, ವಾಹನಗಳನ್ನು ಸುಗಮವಾಗಿ ನಿಲ್ಲಿಸಲು ಮತ್ತು ಸಂಚಾರ ನಿಯಮಗಳನ್ನು ಪಾಲಿಸಲು ಸಹಕರಿಸಿ. ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಪೊಲೀಸರು ನೀಡಿರುವ ಪರ್ಯಾಯ ಮಾರ್ಗಗಳನ್ನೇ ಬಳಸುವುದು ಉತ್ತಮ.

ನಮ್ಮ ಸಂಸ್ಕೃತಿಯ ಈ ಅದ್ಭುತ ಹಬ್ಬವನ್ನು ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸೋಣ. ಪೊಲೀಸರು ನೀಡಿರುವ ಸೂಚನೆಗಳನ್ನು ಪಾಲಿಸಿ, ಕರಗ ಉತ್ಸವದ ಸಂಭ್ರಮವನ್ನು ಎಂಜಾಯ್ ಮಾಡಿ. ಸುಮ್ಮನೆ ಟ್ರಾಫಿಕ್ ಜಂಜಾಟದಲ್ಲಿ ಸಿಕ್ಕಿಬಿದ್ದು ನಿಮ್ಮ ಸಮಯ ಹಾಳು ಮಾಡ್ಕೋಬೇಡಿ!