Feb 16, 2026 Languages : ಕನ್ನಡ | English

ಬೆಂಗಳೂರಿಗರೇ ಎಚ್ಚರ ಎಚ್ಚರ - ಅನಧಿಕೃತ ಕಟ್ಟಡಗಳ ವಿರುದ್ಧ ಸಮರ ಸಾರಲು ಸಜ್ಜಾದ ಜಿಬಿಎ!!

ಬೆಂಗಳೂರು ನಾಗರೀಕರೇ ಇದೀಗ ಎಚ್ಚರವಾಗುವ ಸಮಯ ಬಂದಿದೆ. ನೀವು ಅನಧಿಕೃತ ಕಟ್ಟಡ ನಿರ್ಮಿಸಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಯಾಕೆಂದರೆ ಜಿಬಿಎ (Greater Bengaluru Authority) ಅನಧಿಕೃತ ಕಟ್ಟಡಗಳ ವಿರುದ್ಧ ಸಮರ ಘೋಷಿಸಿದೆ.  

ಬೆಂಗಳೂರು – ಅನಧಿಕೃತ ಕಟ್ಟಡಗಳ ವಿರುದ್ಧ ಜಿಬಿಎ ಸಮರ
ಬೆಂಗಳೂರು – ಅನಧಿಕೃತ ಕಟ್ಟಡಗಳ ವಿರುದ್ಧ ಜಿಬಿಎ ಸಮರ

ನಗರದಲ್ಲಿ ನಿಯಮಬಾಹಿರವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಬಿಎ ಹೊಸ ಪ್ಲ್ಯಾನ್ ರೂಪಿಸಿದೆ. ಅನಧಿಕೃತ ಕಟ್ಟಡ ಮಾಲೀಕರಿಗೆ ಶಾಕ್ ನೀಡುವಂತೆ, ಪ್ರತ್ಯೇಕ 'ಟಾಸ್ಕ್ ಫೋರ್ಸ್' ರಚನೆಗೆ ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿರುವ ಐದು ಪಾಲಿಕೆಗಳಲ್ಲೂ ಪ್ರತ್ಯೇಕ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಲಾಗುತ್ತಿದೆ. ಈ ತಂಡಗಳು ಮನೆ ಮನೆಗೆ ಭೇಟಿ ನೀಡಿ ಕಟ್ಟಡಗಳ ಪರಿಶೀಲನೆ ನಡೆಸಲಿವೆ. ಕಟ್ಟಡಗಳು ನಕ್ಷೆ ಮಂಜೂರಾತಿ ಹಾಗೂ ಇತರೆ ದಾಖಲೆಗಳನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.  

ಯಾವುದೇ ಕಟ್ಟಡ ಅನಧಿಕೃತವಾಗಿ ನಿರ್ಮಾಣಗೊಂಡಿರುವುದು ಪತ್ತೆಯಾದರೆ, ತಕ್ಷಣವೇ ನೋಟಿಸ್ ನೀಡಲಾಗುತ್ತದೆ. ಕಟ್ಟಡ ಮಾಲೀಕರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ನಗರದಲ್ಲಿ ನಿಯಮಬಾಹಿರ ಕಟ್ಟಡ ನಿರ್ಮಾಣವನ್ನು ತಡೆಯುವ ಉದ್ದೇಶ ಜಿಬಿಎ ಹೊಂದಿದೆ. ಟಾಸ್ಕ್ ಫೋರ್ಸ್ ತಂಡಗಳು ಕೇವಲ ಪರಿಶೀಲನೆ ಮಾತ್ರವಲ್ಲ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಿವೆ. ಅನಧಿಕೃತ ಕಟ್ಟಡಗಳು ಕೇವಲ ಕಾನೂನು ಉಲ್ಲಂಘನೆಯಲ್ಲ, ಜನರ ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆ ಇದೆ. ಕಟ್ಟಡಗಳ ಸುರಕ್ಷತೆ, ಅಗ್ನಿಶಾಮಕ ವ್ಯವಸ್ಥೆ, ರಸ್ತೆ ಸಂಚಾರಕ್ಕೆ ತೊಂದರೆ ಈ ಎಲ್ಲಾ ವಿಷಯಗಳನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುತ್ತದೆ.

ನಗರದ ಕಮೀಷನರ್‌ಗಳು ಪ್ರತಿ ಪಾಲಿಕೆಗೆ ಸೂಚನೆ ನೀಡಿದ್ದು, ಕಟ್ಟಡಗಳ ಮೇಲ್ವಿಚಾರಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮದಿಂದ ನಗರದಲ್ಲಿ ಶಿಸ್ತು, ಸುರಕ್ಷತೆ ಮತ್ತು ನಿಯಮ ಪಾಲನೆ ಬಲಪಡಿಸಲಾಗುವುದು. ಒಟ್ಟಾರೆ, ಜಿಬಿಎ ಕೈಗೊಂಡಿರುವ ಈ ಕ್ರಮವು ನಾಗರೀಕರಿಗೆ ಎಚ್ಚರಿಕೆಯ ಸಂದೇಶ. ಅನಧಿಕೃತ ಕಟ್ಟಡ ನಿರ್ಮಾಣ ಮಾಡಿದರೆ ಕಾನೂನು ಕ್ರಮ ತಪ್ಪದೇ ಎದುರಿಸಬೇಕಾಗುತ್ತದೆ. ನಗರದಲ್ಲಿ ಶಿಸ್ತು ಮತ್ತು ಸುರಕ್ಷತೆಯನ್ನು ಕಾಪಾಡಲು ಇದು ಅತ್ಯಂತ ಅಗತ್ಯವಾದ ಹೆಜ್ಜೆಯಾಗಿ ಹೊರಹೊಮ್ಮಿದೆ.

Latest News