ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಬೃಹತ್ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ವಂಚನೆ ಜಾಲವನ್ನು ಪತ್ತೆಹಚ್ಚಿದ್ದಾರೆ. ಈ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈಗ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ 'ನ್ಯಾಷನಲ್ ಟ್ರಾವೆಲ್ಸ್' ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದರಿಂದಾಗಿ ಈ ಕೇಸ್ ಈಗ ಹೊಸ ತಿರುವು ಪಡೆದುಕೊಂಡಿದೆ.
ಏನಿದು 'ನಕಲಿ ಬಿಲ್' ದಂಧೆ?
ಈ ಹಗರಣದ ಮೂಲ ಇರೋದು 'ಸ್ಕ್ರ್ಯಾಪ್' (ಗುಜರಿ ವಸ್ತುಗಳು) ವ್ಯವಹಾರದಲ್ಲಿ. ಮಹಾರಾಷ್ಟ್ರದ ಕೆಲವು ದಲ್ಲಾಳಿಗಳು ಸರ್ಕಾರಕ್ಕೆ ತೆರಿಗೆ ಕಟ್ಟಬಾರದು ಎಂಬ ಕಾರಣಕ್ಕೆ ಒಂದು ಪ್ಲಾನ್ ಮಾಡಿದ್ದರು. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ 'ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್' ಅನ್ನೋ ಬೆಲೆಬಾಳುವ ಗುಜರಿ ರವಾನೆಯಾಗ್ತಿದೆ ಅಂತ ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿದ್ದರು.
ಆಟ ನಕಲಿ, ಬಿಲ್ ಅಸಲಿ: ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ಲಾರಿಗಳ ಹೆಸರಿನಲ್ಲಿ ನಕಲಿ 'ಇ-ವೇ ಬಿಲ್' ಕ್ರಿಯೇಟ್ ಮಾಡಲಾಗುತ್ತಿತ್ತು.
ವಾಹನ ಖಾಲಿ: ಬಿಲ್ ಮೇಲೆ ಲಾರಿಗಳ ನಂಬರ್ ಇರುತ್ತಿತ್ತು, ಆದರೆ ಆ ಲಾರಿಗಳಲ್ಲಿ ಯಾವುದೇ ಸ್ಕ್ರ್ಯಾಪ್ ಇರುತ್ತಿರಲಿಲ್ಲ! ಕೇವಲ ನಕಲಿ ಬಿಲ್‌ಗಳು ಮಾತ್ರ ಹಂತ ಹಂತವಾಗಿ ಮಹಾರಾಷ್ಟ್ರ ತಲುಪುತ್ತಿದ್ದವು. ಇದನ್ನು ಬಳಸಿ ಕಂಪನಿಗಳು ಸರ್ಕಾರದಿಂದ ಕೋಟಿ ಕೋಟಿ ರೂಪಾಯಿ ಟ್ಯಾಕ್ಸ್ ವಾಪಸ್ (ITC) ಪಡಿತಾ ಇದ್ದವು.
ನ್ಯಾಷನಲ್ ಟ್ರಾವೆಲ್ಸ್‌ಗೆ ನೋಟಿಸ್ ಯಾಕೆ?
ಈ ದಂಧೆಯಲ್ಲಿ ಸಾಗಾಟಕ್ಕೆ ಬಳಸಲಾದ ವಾಹನಗಳ ಪಟ್ಟಿಯಲ್ಲಿ ನ್ಯಾಷನಲ್ ಟ್ರಾವೆಲ್ಸ್‌ಗೆ ಸೇರಿದ ಅಥವಾ ಆ ಸಂಸ್ಥೆ ಗುತ್ತಿಗೆ ಪಡೆದಿದ್ದ ಲಾರಿಗಳ ಹೆಸರುಗಳು ಕಂಡುಬಂದಿವೆ ಎನ್ನಲಾಗಿದೆ. ತಿಂಗಳಿಗೆ ಸುಮಾರು 20-25 ಭಾರಿ ಸರಕು ಸಾಗಣೆ ವಾಹನಗಳಲ್ಲಿ ಸ್ಕ್ರ್ಯಾಪ್ ಹೋಗಿದೆ ಅಂತ ಇ-ವೇ ಬಿಲ್ ಸೃಷ್ಟಿಸುವಾಗ ಈ ಸಂಸ್ಥೆಯ ವಾಹನಗಳ ವಿವರಗಳನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಸಾಗಾಟದ ಸತ್ಯಾಸತ್ಯತೆ ತಿಳಿಯಲು ಅಧಿಕಾರಿಗಳು ಸಚಿವ ಜಮೀರ್ ಅವರ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ.
ಪತ್ತೆಯಾದ ಆ 127 ನಕಲಿ ಸಂಸ್ಥೆಗಳ ಜಾಲ
ಅಧಿಕಾರಿಗಳು ಈ ಕೇಸ್ ಬೆನ್ನತ್ತಿದಾಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಒಟ್ಟು 127 ನಕಲಿ ಕಂಪನಿಗಳನ್ನು ಕೇವಲ ದಾಖಲೆಗಳಲ್ಲಿ ಸೃಷ್ಟಿಸಿ ಈ ದಂಧೆ ನಡೆಸಲಾಗುತ್ತಿತ್ತು.
ಎಸ್‌ಕೆಎಸ್ ಟ್ರೇಡರ್ಸ್: ಈ ಕಂಪನಿಯ ವಹಿವಾಟು ಕೇವಲ ಮೂರು ವರ್ಷಗಳಲ್ಲಿ 50 ಕೋಟಿಯಿಂದ 945 ಕೋಟಿ ರೂಪಾಯಿಗೆ ಜಿಗಿದಿತ್ತು!
ಬಂಧನ: ಸದ್ಯ ಸಲೀಮುಲ್ಲಾ ಮತ್ತು ಹಸನ್ ಬೇಗ್ ಎಂಬ ಇಬ್ಬರು ಕಿಂಗ್‌ಪಿನ್‌ಗಳನ್ನು ಅಧಿಕಾರಿಗಳು ಜೈಲಿಗಟ್ಟಿದ್ದಾರೆ. ಈ ಇಬ್ಬರೇ ಸೇರಿ ಸುಮಾರು 2,384 ಕೋಟಿ ರೂ. ವ್ಯವಹಾರದ ನಕಲಿ ಬಿಲ್ ಸೃಷ್ಟಿಸಿ, 594 ಕೋಟಿ ರೂ. ತೆರಿಗೆ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಹಗರಣ ಬಯಲಾಗಿದ್ದು ಹೇಗೆ?
ಬೆಂಗಳೂರಿನಲ್ಲಿ ಟಂಗ್‌ಸ್ಟನ್ ಸ್ಕ್ರ್ಯಾಪ್ ಅಷ್ಟೊಂದು ಪ್ರಮಾಣದಲ್ಲಿ ಸಿಗುವುದೇ ಇಲ್ಲ. ಆದರೂ ಇಲ್ಲಿಂದ ಭಾರಿ ಪ್ರಮಾಣದಲ್ಲಿ ಸ್ಕ್ರ್ಯಾಪ್ ರಫ್ತಾಗಿರುವ ದಾಖಲೆಗಳು ಅಧಿಕಾರಿಗಳಿಗೆ ಅನುಮಾನ ತರಿಸಿದವು. ಸುಮಾರು 217 ಕೋಟಿ ರೂ. ವಹಿವಾಟು ನಡೆಸಿ, 39 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದನ್ನು ಗಮನಿಸಿದ ಇಲಾಖೆ ಫೀಲ್ಡಿಗಿಳಿದಾಗ ಇಡೀ ನೆಟ್‌ವರ್ಕ್ ಬಯಲಾಗಿದೆ.
ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡುವ ಇಂತಹ ಹಗರಣಗಳು ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುತ್ತವೆ. ಸದ್ಯ 7 ಜನರು ಅರೆಸ್ಟ್ ಆಗಿದ್ದಾರೆ, ಸಚಿವರ ಸಂಸ್ಥೆಗೆ ನೋಟಿಸ್ ಹೋಗಿದೆ. ತನಿಖೆ ಮುಂದುವರಿದಂತೆ ಇನ್ನೂ ದೊಡ್ಡ ದೊಡ್ಡ ತಲೆಗಳು ಉರುಳುವ ಸಾಧ್ಯತೆ ಇದೆ. ಅಂತಿಮವಾಗಿ ಯಾರು ದೋಷಿಗಳು ಅನ್ನೋದು ತನಿಖೆಯಲ್ಲಿ ಹೊರಬರಬೇಕಿದೆ.