May 5, 2026 Languages : ಕನ್ನಡ | English

ಪ್ರತಿ ಕಿಲೋಮೀಟರ್‌ಗೆ 100 ರೂಪಾಯಿ? ಆಟೋ ಚಾಲಕರ ಈ ಬೇಡಿಕೆ ಕೇಳಿದ್ರೆ ದಂಗಾಗ್ತೀರಾ!!

ನಮ್ಮ ಸಿಲಿಕಾನ್ ಸಿಟಿಯ ಜನರಿಗೆ ಒಂದಲ್ಲ ಒಂದು ಬೆಲೆ ಏರಿಕೆ ಬಿಸಿ ತಟ್ಟುತ್ತಲೇ ಇದೆ. ಈಗ ಅದರ ಸಾಲಿಗೆ ಆಟೋ ದರ ಕೂಡ ಸೇರುವ ಮುನ್ಸೂಚನೆ ಸಿಕ್ಕಿದೆ. ಮೊನ್ನೆಯಷ್ಟೇ ಕೇಂದ್ರ ಸರ್ಕಾರ ಆಟೋ ಎಲ್.ಪಿ.ಜಿ (LPG) ದರವನ್ನು ಲೀಟರ್‌ಗೆ ಬರೋಬ್ಬರಿ 5.73 ರೂಪಾಯಿ ಹೆಚ್ಚಿಸಿದೆ. ಈ ಬೆಲೆ ಏರಿಕೆ ಈಗ ಆಟೋ ಚಾಲಕರ ನಿದ್ದೆ ಗೆಡಿಸಿದ್ದು, ಅವರು ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಗಾಯದ ಮೇಲೆ ಬರೆ ಎಳೆದ ಎಲ್‌ಪಿಜಿ ದರ | Photo Credit: CANVA
ಗಾಯದ ಮೇಲೆ ಬರೆ ಎಳೆದ ಎಲ್‌ಪಿಜಿ ದರ | Photo Credit: CANVA

ಗ್ಯಾಸ್ ಗೋಳು

ಮಧ್ಯಪ್ರಾಚ್ಯದಲ್ಲಿ ನಡೀತಿರೋ ಯುದ್ಧದ ಎಫೆಕ್ಟ್ ಬೆಂಗಳೂರಿನ ಆಟೋ ಸ್ಟ್ಯಾಂಡ್‌ಗಳಿಗೂ ತಟ್ಟಿದೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಕೊರತೆಯಿಂದಾಗಿ ಚಾಲಕರು ಬಂಕ್‌ಗಳ ಮುಂದೆ ಕಿಲೋಮೀಟರ್ ಗಟ್ಟಲೆ ಕ್ಯೂ ನಿಲ್ಲುವಂತಾಗಿತ್ತು. "ಒಂದ್ಕಡೆ ಗ್ಯಾಸ್ ಸಿಗಲ್ಲ, ಇನ್ನೊಂದ್ಕಡೆ ಸಿಕ್ಕರೂ ಬೆಲೆ ಜಾಸ್ತಿ. ನಾವು ಜೀವನ ಮಾಡೋದು ಹೇಗೆ?" ಅನ್ನೋದು ಚಾಲಕರ ಅಳಲು. ಸರ್ಕಾರಿ ಬಂಕ್‌ಗಳಲ್ಲೇ ಬೆಲೆ ಏರಿಕೆಯಾದ್ರೆ, ಇದನ್ನೇ ನೆಪ ಮಾಡಿಕೊಂಡಿರೋ ಖಾಸಗಿ ಬಂಕ್‌ಗಳು ಕೂಡ ದರವನ್ನು ಮನಬಂದಂತೆ ಹೆಚ್ಚಿಸುತ್ತಿವೆ.

ಚಾಲಕರ ಡಿಮ್ಯಾಂಡ್

ಬೆಲೆ ಏರಿಕೆಯಿಂದ ಜೀವನ ನಡೆಸೋದು ಕಷ್ಟ ಆಗ್ತಿದೆ ಅಂತಿರೋ ಆಟೋ ಸಂಘಟನೆಗಳು, ಈಗ ಸಾರಿಗೆ ಸಚಿವರಿಗೆ ನೇರವಾಗಿ ಡಿಮ್ಯಾಂಡ್ ಇಟ್ಟಿವೆ. ಸದ್ಯ ಬೆಂಗಳೂರಿನಲ್ಲಿ ಆಟೋ ದರ ಹೇಗಿದೆ ಮತ್ತು ಅವರು ಕೇಳ್ತಿರೋದು ಎಷ್ಟು ಅಂತ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ:

ಸದ್ಯದ ಕನಿಷ್ಠ ದರ (2 ಕಿ.ಮೀ ಗೆ): 36 ರೂ.

ಚಾಲಕರ ಬೇಡಿಕೆ: 50 ರೂ.

ನಂತರದ ಪ್ರತಿ ಕಿ.ಮೀ ಗೆ ಈಗ ಇರೋದು: 18 ರೂ.

ಚಾಲಕರ ಬೇಡಿಕೆ: 25 ರೂ.

ಅಂದ್ರೆ, ನೀವು ಆಟೋ ಹತ್ತಿ ಸ್ವಲ್ಪ ದೂರ ಹೋದ್ರೂ ಮಿನಿಮಮ್ 50 ರೂಪಾಯಿ ಕೊಡಬೇಕಾದ ಕಾಲ ಹತ್ತಿರ ಬರ್ತಿದೆ. ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಅವರು ಹೇಳೋ ಪ್ರಕಾರ, "ಗ್ಯಾಸ್ ಬೆಲೆ ಏರಿಕೆ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾರಿಗೆ ಸಚಿವರು ಕೂಡಲೇ ಮೀಟಿಂಗ್ ಕರೆದು ನಮ್ಮ ಸಮಸ್ಯೆ ಬಗೆಹರಿಸದಿದ್ರೆ ಹೋರಾಟ ಅನಿವಾರ್ಯ."

ಸಾಮಾನ್ಯ ಜನರಿಗೆ ಸಂಕಷ್ಟ

ಈಗಾಗಲೇ ಮೆಟ್ರೋ ದರ, ಬಸ್ ರಶ್ ಅಂತ ಕಂಗಾಲಾಗಿರೋ ಜನರಿಗೆ ಆಟೋ ದರ ಏರಿಕೆ ಗಂಭೀರ ಪೆಟ್ಟು ನೀಡಲಿದೆ. ಐಟಿ ಮಂದಿಯಿಂದ ಹಿಡಿದು ಸಾಮಾನ್ಯ ಕೂಲಿ ಕಾರ್ಮಿಕರವರೆಗೆ ಎಲ್ಲರಿಗೂ ಆಟೋ ಅನಿವಾರ್ಯ. ಒಂದು ವೇಳೆ ಸರ್ಕಾರ ಚಾಲಕರ ಬೇಡಿಕೆಗೆ ಓಕೆ ಅಂದ್ರೆ, ಜನಸಾಮಾನ್ಯರ ತಿಂಗಳ ಬಜೆಟ್ ಹಳಿ ತಪ್ಪೋದು ಗ್ಯಾರಂಟಿ.

ಇತ್ತ ಸರ್ಕಾರಕ್ಕೂ ಚಾಲಕರನ್ನು ಸಮಾಧಾನ ಪಡಿಸುವ ಸವಾಲಿದೆ, ಅತ್ತ ಜನಸಾಮಾನ್ಯರ ಆಕ್ರೋಶದ ಭಯವೂ ಇದೆ. ಇವೆಲ್ಲದರ ಮಧ್ಯೆ ಸಾರಿಗೆ ಸಚಿವರು ಯಾವ ನಿರ್ಧಾರ ತಗೋತಾರೆ ಅನ್ನೋದನ್ನ ಕಾದು ನೋಡಬೇಕು. ಸದ್ಯಕ್ಕಂತೂ ಬೆಂಗಳೂರಿಗರಿಗೆ 'ಆಟೋ ಪ್ರಯಾಣ' ಇನ್ನಷ್ಟು ದುಬಾರಿಯಾಗೋ ಮುನ್ಸೂಚನೆ ದಟ್ಟವಾಗಿದೆ.

Latest News