Apr 21, 2026 Languages : ಕನ್ನಡ | English

ಹೆತ್ತ ತಾಯಿ ಸತ್ತರೂ ಬಾರದ ಪಾಪಿ ಮಕ್ಕಳು - ಬೆಳಗಾವಿಯಲ್ಲಿ ನಡೆದ ಕಣ್ಣೀರಿನ ಕಥೆ!!

ಬೆಳಗಾವಿಯ ಶಾಹು ನಗರದಲ್ಲಿ ಅಕ್ಷರಶಃ ಕಲ್ಲುಹೃದಯದ ಮಕ್ಕಳು ಮಾಡುವ ಕೆಲಸಕ್ಕೆ ಇಡೀ ನಗರವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಹೆತ್ತ ತಾಯಿಯ ಅಂತ್ಯಕ್ರಿಯೆ ಮಾಡಲು ಬರದೆ, "ನೀವೇ ಮಾಡಿಕೊಳ್ಳಿ" ಎಂದು ಫೋನ್ ಕಟ್ ಮಾಡಿದ ಮಕ್ಕಳ ಕಥೆ ಕೇಳಿದರೆ ಯಾರಿಗಾದರೂ ಸಿಟ್ಟು ಬರುವುದು ಸಹಜ.

ಹತ್ತು ಕಿಲೋಮೀಟರ್ ದೂರದಲ್ಲಿದ್ದರೂ ತಾಯಿ ಮುಖ ನೋಡಲು ಬಾರದ ಮಕ್ಕಳು
ಹತ್ತು ಕಿಲೋಮೀಟರ್ ದೂರದಲ್ಲಿದ್ದರೂ ತಾಯಿ ಮುಖ ನೋಡಲು ಬಾರದ ಮಕ್ಕಳು

ಮಾರಿಹಾಳ ಗ್ರಾಮದ ಅಂಜನಾ ಧಾಮನೆ ಎಂಬ ವೃದ್ಧೆ ವಯೋಸಹಜ ಕಾಯಿಲೆಯಿಂದ ನಿನ್ನೆ ಕೊನೆಯುಸಿರೆಳೆದರು. ಇವರಿಗೆ ಮಹೇಶ್ ಮತ್ತು ಶ್ರೀಕಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಇಬ್ಬರು ಮಕ್ಕಳಿದ್ದೂ ಅಂಜನಾ ಅವರಿಗೆ ಭಾಗ್ಯವಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಈ ವೃದ್ಧೆ ಶಾಹುನಗರದ ವೃದ್ಧಾಶ್ರಮವೊಂದರಲ್ಲಿ ವಾಸವಿದ್ದರು. ಮಕ್ಕಳ ನಿರ್ಲಕ್ಷ್ಯದಿಂದಾಗಿ ಅಂಜನಾ ಅವರ ಸಹೋದರನೇ ಇವರ ಸ್ಥಿತಿಯನ್ನು ಕಂಡು ವೃದ್ಧಾಶ್ರಮಕ್ಕೆ ತಂದು ಬಿಟ್ಟಿದ್ದರು.

"ನಮಗೂ ಅದಕ್ಕೂ ಸಂಬಂಧವಿಲ್ಲ" ಎಂದ ಮಕ್ಕಳು

ಅಂಜನಾ ಅವರು ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ವೃದ್ಧಾಶ್ರಮದ ಸಿಬ್ಬಂದಿ ಆಕೆಯ ಇಬ್ಬರು ಮಕ್ಕಳಿಗೂ ಫೋನ್ ಮಾಡಿದ್ದರು. "ನಿಮ್ಮ ತಾಯಿ ತೀರಿಕೊಂಡಿದ್ದಾರೆ, ಬಂದು ಅಂತ್ಯಕ್ರಿಯೆ ಮಾಡಿ" ಎಂದು ಕೇಳಿಕೊಂಡರು. ಆದರೆ ಆ ಪಾಪಿ ಮಕ್ಕಳು ಅದೆಷ್ಟು ಕ್ರೂರಿಗಳೆಂದರೆ, "ನಮಗೆ ಬರಲು ಆಗಲ್ಲ, ನೀವೇ ಎಲ್ಲಾದರೂ ಅಂತ್ಯಕ್ರಿಯೆ ಮಾಡಿಕೊಳ್ಳಿ" ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ!

ಅಚ್ಚರಿಯ ವಿಷಯವೆಂದರೆ, ಆ ಮಕ್ಕಳು ಇರುವುದು ವೃದ್ಧಾಶ್ರಮದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ. ಹತ್ತು ನಿಮಿಷದ ದಾರಿಯಲ್ಲಿದ್ದರೂ, ಒಂಬತ್ತು ತಿಂಗಳು ಹೊತ್ತು ಹಡೆದ ತಾಯಿಯ ಮುಖ ನೋಡಲು ಅವರು ಬರಲಿಲ್ಲ ಎಂದರೆ ಅವರ ಮನಸ್ಸು ಎಂತದ್ದಿರಬೇಡ?

ನೆರವಿಗೆ ಬಂದ ನಗರ ಸೇವಕರು

ಮಕ್ಕಳು ಕೈಕೊಟ್ಟಾಗ ವೃದ್ಧಾಶ್ರಮದವರು ನಗರ ಸೇವಕರಾದ ಶಂಕರ್ ಪಾಟೀಲ್ ಮತ್ತು ಗಂಗಾಧರ್ ಪಾಟೀಲ್ ಅವರಿಗೆ ವಿಷಯ ತಿಳಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಇಬ್ಬರು ಸಮಾಜ ಸೇವಕರು, ಮಾನವೀಯತೆ ಮೆರೆದರು. ಮಕ್ಕಳಿಲ್ಲದಿದ್ದರೇನಂತೆ, ನಾವೇ ಈಕೆಯ ಮಕ್ಕಳು ಎಂದು ಭಾವಿಸಿ ಅಂಜನಾ ಅಜ್ಜಿಯ ಅಂತ್ಯಕ್ರಿಯೆಯನ್ನು ಸಕಲ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.

ಈ ಘಟನೆ ತಿಳಿಯುತ್ತಿದ್ದಂತೆ ಬೆಳಗಾವಿಯ ಜನರು ಆ ಇಬ್ಬರು ಮಕ್ಕಳ ವಿರುದ್ಧ ಕಿಡಿಕಾರುತ್ತಿದ್ದಾರೆ. "ಇಂತಹ ಪಾಪಿ ಮಕ್ಕಳಿಗೆ ತಕ್ಕ ಪಾಠ ಕಲಿಸಬೇಕು, ತಾಯಿಯನ್ನು ಈ ರೀತಿ ನಡೆಸಿಕೊಂಡವರಿಗೆ ಸಮಾಜದಲ್ಲಿ ಗೌರವ ಇರಬಾರದು" ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಹೆತ್ತ ತಾಯಿಯನ್ನು ಬದುಕಿರುವಾಗಲೂ ನೋಡಿಕೊಳ್ಳದೆ, ಸತ್ತ ಮೇಲೂ ಅಂತ್ಯಕ್ರಿಯೆಗೆ ಬಾರದ ಈ ಮಕ್ಕಳ ಕೃತ್ಯ, ಬದಲಾಗುತ್ತಿರುವ ಇಂದಿನ ಸಮಾಜದ ಕರಾಳ ಮುಖಕ್ಕೆ ಸಾಕ್ಷಿಯಾಗಿದೆ. ಅನಾಥವಾಗಿ ಸತ್ತ ಅಜ್ಜಿಗೆ ಸಮಾಜ ಸೇವಕರು ದಾರಿಯಾಗಿದ್ದು ಮಾತ್ರ ಸ್ವಲ್ಪ ಸಮಾಧಾನಕರ ವಿಷಯ.

Latest News