Apr 13, 2026 Languages : ಕನ್ನಡ | English

390 ಬ್ಯಾಂಕ್ ಅಕೌಂಟ್, 6 ರಾಜ್ಯಗಳ ಜಾಲ - ಬೆಳಗಾವಿ ಉದ್ಯಮಿಯ ಹಣ ದೋಚಿದ ಕಿಲಾಡಿಗಳು!!

ಸದ್ಯದ ದಿನಗಳಲ್ಲಿ ಸೈಬರ್ ಕಳ್ಳರು ಎಷ್ಟು ಅಪ್‌ಡೇಟ್ ಆಗಿದ್ದಾರೆ ಅಂದ್ರೆ, ಮನೆಯಲ್ಲೇ ಇದ್ದವರನ್ನು "ಡಿಜಿಟಲ್ ಅರೆಸ್ಟ್" ಮಾಡಿ ಕೋಟಿ ಕೋಟಿ ಹಣ ದೋಚುತ್ತಿದ್ದಾರೆ. ಇಂತಹದ್ದೇ ಒಂದು ಘನಘೋರ ವಂಚನೆ ಬೆಳಗಾವಿಯಲ್ಲಿ ನಡೆದಿದ್ದು, ಉದ್ಯಮಿಯೊಬ್ಬರಿಂದ ಬರೋಬ್ಬರಿ 15 ಕೋಟಿ 45 ಲಕ್ಷ ರೂಪಾಯಿ ಲೂಟಿ ಮಾಡಿದ ಪ್ರಕರಣ ಈಗ ದೊಡ್ಡ ಸುದ್ದಿಯಾಗಿದೆ.

ಜೆಟ್ ಏರ್ವೇಸ್ ಮಾಲೀಕರ ಹೆಸರಲ್ಲಿ ಬೆದರಿಕೆ
ಜೆಟ್ ಏರ್ವೇಸ್ ಮಾಲೀಕರ ಹೆಸರಲ್ಲಿ ಬೆದರಿಕೆ

ವಿಶೇಷ ಅಂದ್ರೆ, ಈ ಕೇಸ್ ಸಿಬಿಐ ಕೈಗೆ ಹೋಗುವ ಮೊದಲೇ ಬೆಳಗಾವಿ ಸಿಟಿ ಸೈಬರ್ ಕ್ರೈಮ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಖದೀಮರು ಉದ್ಯಮಿಗೆ ಫೋನ್ ಮಾಡಿ, ತಾವು ಸಿಬಿಐ ಅಧಿಕಾರಿಗಳು ಎಂದು ಹೇಳಿ ಬೆದರಿಸಿದ್ದಾರೆ. ಯಾವುದೋ ಕೇಸಿನ ಹೆಸರಲ್ಲಿ ಅವರನ್ನು ಮನೆಯಿಂದ ಹೊರಬರದಂತೆ, ಯಾರಿಗೂ ಫೋನ್ ಮಾಡದಂತೆ ವಿಡಿಯೋ ಕಾಲ್ ಮೂಲಕ "ಡಿಜಿಟಲ್ ಅರೆಸ್ಟ್" ಮಾಡಿದ್ದಾರೆ. ಭಯಬಿದ್ದ ಉದ್ಯಮಿಯಿಂದ ಹಂತಹಂತವಾಗಿ ಹಣ ಪೀಕಿದ್ದಾರೆ. ಉದ್ಯಮಿಯ ಖಾತೆಯಿಂದ ಮೊದಲು 10 ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ.

ತನಿಖೆ ನಡೆಸಿದ ಪೊಲೀಸರಿಗೆ ಈ ಹಗರಣದ ಆಳ ನೋಡಿ ತಲೆ ಸುತ್ತು ಬಂದಿದೆ. ಉದ್ಯಮಿಯ ಹಣ ಕೇವಲ ಒಂದು ಕಡೆಯಲ್ಲ, ದೇಶದ 6 ಪ್ರಮುಖ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಹೈದರಾಬಾದ್, ಅಹಮದಾಬಾದ್, ಕೋಲ್ಕತ್ತಾ, ಗುವಾಹಟಿ, ಹರಿಯಾಣ ಮತ್ತು ದೆಹಲಿಯ ವಿವಿಧ ಅಕೌಂಟ್ ಬಳಸಿ ಹಣ ವಿಭಜಿಸಲಾಗಿದೆ.

ಬಂಧಿತ ಕಿಲಾಡಿಗಳು

ಪೊಲೀಸರು ಹೈದರಾಬಾದ್ ಮೂಲದ ಶ್ರೀಪಾದ ನಾಯಿಕ್ ಮತ್ತು ಶರದ್ ನಾಯಿಕ್ ಎಂಬುವವರನ್ನು ಅರೆಸ್ಟ್ ಮಾಡಿದ್ದಾರೆ. ಇವರು ನಕಲಿ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದು, ಅದಕ್ಕೆ ಸುಮಾರು 2 ಕೋಟಿ ರೂಪಾಯಿ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

390 ಅಕೌಂಟ್ ಮೂಲಕ 14 ಕೋಟಿ ಮಾಯ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸಿಕ್ಕ ಮಾಹಿತಿ ದಂಗು ಬಡಿಸುವಂತಿದೆ. ವಂಚಕರು ಬರೋಬ್ಬರಿ 390 ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್‌ಗಳನ್ನು ಬಳಸಿ 14 ಕೋಟಿ 45 ಲಕ್ಷ ರೂಪಾಯಿಯನ್ನು ಈಗಾಗಲೇ ಡ್ರಾ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಒಂದು ಕೋಟಿ ರೂಪಾಯಿಯನ್ನು ಫ್ರೀಜ್ (ತಡೆ ಹಿಡಿಯುವುದು) ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಬಿಐಗೆ ಕೇಸ್ ಹಸ್ತಾಂತರ

ಈ ಹಗರಣ ದೇಶಾದ್ಯಂತ ಹರಡಿರುವುದರಿಂದ ಮತ್ತು ಬೃಹತ್ ಮೊತ್ತದ ವಂಚನೆ ನಡೆದಿರುವುದರಿಂದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗುತ್ತಿದೆ. "ನಾವು ಈಗಾಗಲೇ ಇಬ್ಬರನ್ನು ಹಿಡಿದಿದ್ದೇವೆ, ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲೇ ಅರೆಸ್ಟ್ ಮಾಡ್ತೀವಿ" ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಖಡಕ್ ಆಗಿ ಹೇಳಿದ್ದಾರೆ.

ಜನರಿಗೊಂದು ಕಿವಿಮಾತು: ಸಿಬಿಐ ಅಥವಾ ಪೊಲೀಸ್ ಅಧಿಕಾರಿಗಳು ಯಾರೂ ಕೂಡ ವಿಡಿಯೋ ಕಾಲ್ ಮೂಲಕ ನಿಮ್ಮನ್ನು ಅರೆಸ್ಟ್ ಮಾಡುವುದಿಲ್ಲ. ಇಂತಹ ಕರೆಗಳು ಬಂದರೆ ಭಯಪಡದೆ ತಕ್ಷಣ ಸೈಬರ್ ಕ್ರೈಮ್ (1930) ಸಂಖ್ಯೆಗೆ ದೂರು ನೀಡಿ.