ನಿಮ್ಮ ವಾಹನದಲ್ಲಿ ಪೆಟ್ರೋಲ್ ಇದೆಯೇ? ಇಲ್ಲದಿದ್ದರೆ ಬೆಂಗಳೂರಿನ ಈ ರಸ್ತೆಗಳಿಗೆ ಹೋಗುವ ಮುನ್ನ ಎಚ್ಚರ!!

ಸಿಲಿಕಾನ್ ಸಿಟಿಯಲ್ಲಿ ಒಂದಾದ ಮೇಲೊಂದರಂತೆ ಬಿಕ್ಕಟ್ಟುಗಳು ಎದುರಾಗುತ್ತಲೇ ಇವೆ. ಮೊನ್ನೆ ತಾನೇ ಆಟೋ ಎಲ್‌ಪಿಜಿ (LPG) ಸಮಸ್ಯೆಯಿಂದ ಆಟೋ ಚಾಲಕರು ಬೀದಿಗೆ ಬಂದಿದ್ರು, ಹೋಟೆಲ್ ಮತ್ತು ಪಿಜಿ ದರ ಏರಿಕೆ ಬಿಸಿ ಜನರಿಗೆ ತಟ್ಟಿತ್ತು. ಆ ಕಷ್ಟ ಇನ್ನೂ ಮುಗಿಯುವ ಮುನ್ನವೇ ಈಗ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗಿದೆ. ನಗರದ ಹಲವು ಬಂಕ್‌ಗಳ ಮುಂದೆ "ನೋ ಸ್ಟಾಕ್" (No Stock) ಬೋರ್ಡ್ ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರಲ್ಲಿ ಟೆನ್ಷನ್ ಶುರುವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಪೆಟ್ರೋಲ್ ಹಾಹಾಕಾರ | Photo Credit: AI
ಸಿಲಿಕಾನ್ ಸಿಟಿಯಲ್ಲಿ ಪೆಟ್ರೋಲ್ ಹಾಹಾಕಾರ | Photo Credit: AI

ಬಂಕ್‌ಗಳಲ್ಲಿ ಇಂಧನ ಖಾಲಿ ಆಗಿದ್ದೆಲ್ಲಿ?

ಸದ್ಯದ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಪ್ರಮುಖವಾಗಿ ಎಚ್‌ಪಿ (HP) ಮತ್ತು ಭಾರತ್ ಪೆಟ್ರೋಲಿಯಂ (BP) ಬಂಕ್‌ಗಳಲ್ಲಿ ಇಂಧನದ ಕೊರತೆ ಎದ್ದು ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಈ ಬಂಕ್‌ಗಳಿಗೆ ಸರಿಯಾದ ಸಮಯಕ್ಕೆ ಸ್ಟಾಕ್ ತಲುಪುತ್ತಿಲ್ಲ. ಇದರಿಂದಾಗಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದವರು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ.

ಇನ್ನೊಂದೆಡೆ, ಇಂಡಿಯನ್ ಆಯಿಲ್ (Indian Oil) ಬಂಕ್‌ಗಳಲ್ಲಿ ಸದ್ಯಕ್ಕೆ ಪೂರೈಕೆ ಸುಗಮವಾಗಿದ್ದರೂ, ಉಳಿದ ಬಂಕ್‌ಗಳಲ್ಲಿ ಸಮಸ್ಯೆ ಇರೋದ್ರಿಂದ ಸಹಜವಾಗಿಯೇ ಅಲ್ಲಿಗೆ ಜನ ಮುಗಿಬೀಳುತ್ತಿದ್ದಾರೆ. ಇದರಿಂದ ಅಲ್ಲೂ ಕೂಡ ರಶ್ ಜಾಸ್ತಿಯಾಗಿ ಸವಾರರು ಗಂಟೆಗಟ್ಟಲೆ ಕಾಯುವಂತಾಗಿದೆ.

ಏನಿದು 'ಪ್ರೈವೇಟ್' ಮತ್ತು 'ಸರ್ಕಾರಿ' ಬಂಕ್‌ಗಳ ಗದ್ದಲ?

ಪೆಟ್ರೋಲ್ ಕೊರತೆಗೆ ಒಂದು ಮುಖ್ಯ ಕಾರಣ ಬೆಲೆ ವ್ಯತ್ಯಾಸ. ಶೆಲ್ (Shell), ಜಿಯೋ (Jio) ಮತ್ತು ನಯಾರಾದಂಥ ಖಾಸಗಿ ಕಂಪನಿಗಳ ಬಂಕ್‌ಗಳಲ್ಲಿ ಇಂಧನ ದರ ಸರ್ಕಾರಿ ಬಂಕ್‌ಗಳಿಗಿಂತ ಹೆಚ್ಚಾಗಿದೆ. ಯಾವಾಗ ಖಾಸಗಿ ಬಂಕ್‌ಗಳಲ್ಲಿ ರೇಟ್ ಜಾಸ್ತಿ ಆಯ್ತೋ, ಜನರೆಲ್ಲಾ ಸೀದಾ ಎಚ್‌ಪಿ ಮತ್ತು ಭಾರತ್ ಪೆಟ್ರೋಲಿಯಂನಂತಹ ಸರ್ಕಾರಿ ಸ್ವಾಮ್ಯದ ಬಂಕ್‌ಗಳತ್ತ ಮುಖ ಮಾಡಿದರು.

ಹೀಗೆ ಒಂದೇ ಬಾರಿ ಬೇಡಿಕೆ ಹೆಚ್ಚಾದ್ದರಿಂದ ಬಂಕ್‌ಗಳಲ್ಲಿದ್ದ ಸ್ಟಾಕ್ ಬೇಗನೆ ಖಾಲಿಯಾಗಿದೆ. ಇದಕ್ಕೆ ತಕ್ಕಂತೆ ಡಿಪೋಗಳಿಂದ ಪೂರೈಕೆ ಆಗುತ್ತಿಲ್ಲ ಅನ್ನೋದು ಬಂಕ್ ಮಾಲೀಕರ ದೂರು.

ದುಡ್ಡು ಕೊಟ್ಟರೂ ಪೂರೈಕೆ ಇಲ್ಲ!
ಬಂಕ್ ಮಾಲೀಕರು ಹೇಳುವ ಪ್ರಕಾರ, ಇಂಧನಕ್ಕಾಗಿ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಾವತಿಸಿದ್ದರೂ ಡಿಪೋಗಳಿಂದ ಲೋಡ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಪೂರೈಕೆ ಸರಪಳಿಯಲ್ಲಿ (Supply Chain) ಏನೋ ಎಡವಟ್ಟಾಗಿದೆ ಅಂತ ಶಂಕಿಸಲಾಗಿದೆ. ಕೆಲವು ಕಡೆ ಇಂದು ಸ್ಟಾಕ್ ಬಂದಿದೆ ಅಂತ ಹೇಳ್ತಿದ್ದಾರಾದರೂ, ಅದು ಜನರ ಬೇಡಿಕೆಗೆ ಸಾಲುತ್ತಿಲ್ಲ. ಈ ಬಗ್ಗೆ ತೈಲ ಕಂಪನಿಗಳಿಂದ ಬಂಕ್ ಮಾಲೀಕರಿಗೆ ಇನ್ನೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ.