ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಮದುವೆ ಗಂಡು-ಹೆಣ್ಣು ಹುಡುಕೋದು ಕಾಮನ್ ಆಗ್ಬಿಟ್ಟಿದೆ. ಆದ್ರೆ ಇದನ್ನೇ ಬಂಡವಾಳ ಮಾಡ್ಕೊಂಡಿರೋ ಕೆಲವು ಖತರ್ನಾಕ್ ವಂಚಕರು, ಮ್ಯಾಟ್ರಿಮೋನಿಯಲ್ ಸೈಟ್‌ಗಳನ್ನೇ ತಮ್ಮ ಜಾಲವನ್ನಾಗಿಸಿಕೊಂಡು ಜನರಿಗೆ ವಂಚಿಸುತ್ತಿದ್ದಾರೆ. ಈಗ ಇಂಥದ್ದೇ ಒಂದು ಶಾಕಿಂಗ್ ಕೇಸ್ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ದೊಡ್ಡ ಪ್ರೊಫೈಲ್ ಕ್ರಿಯೇಟ್ ಮಾಡಿ, ಮದುವೆಯಾಗ್ತೀನಿ ಅಂತ ನಂಬಿಸಿ ಬೆಂಗಳೂರು ಮತ್ತು ಮೈಸೂರಿನ ಹತ್ತಕ್ಕೂ ಹೆಚ್ಚು ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರೋ ಘಟನೆ ನಡೆದಿದೆ.
ಸದ್ಯಕ್ಕೆ ಈ ಖತರ್ನಾಕ್ ಅಳಿಯ ಪ್ರದೀಪ್ ಸೋಲೋಮನ್ ಅನ್ನೋ ಆಸಾಮಿ ಪೊಲೀಸರ ಬಂಧನದ ಭೀತಿಯಿಂದ ಎಸ್ಕೇಪ್ ಆಗಿದ್ದು, ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದೆ.
'ಡಾಕ್ಟರ್', 'ಪಿಹೆಚ್‌ಡಿ' ಅಂತಾ ಭರ್ಜರಿ ಬಿಲ್ಡಪ್
ವಂಚಕ ಪ್ರದೀಪ್ ಸೋಲೋಮನ್ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ "ಡಾ. ಪ್ರದೀಪ್ ಸೋಲೋಮನ್" ಅಂತಾನೇ ಅಕೌಂಟ್ ಓಪನ್ ಮಾಡಿದ್ದ. ತಾನು ದೊಡ್ಡ ಪಿಹೆಚ್‌ಡಿ ಪದವೀಧರ, ಸಮಾಜದಲ್ಲಿ ನನಗೊಂದು ದೊಡ್ಡ ಸ್ಟೇಟಸ್ ಇದೆ ಅಂತಾ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದ. ಇವನ ಈ ಕ್ಲಾಸ್ ಪ್ರೊಫೈಲ್ ಮತ್ತು ಬಿಲ್ಡಪ್ ನೋಡಿ, ಮಗಳಿಗೆ ಒಳ್ಳೆಯ ಶ್ರೀಮಂತ ಸಂಬಂಧ ಸಿಕ್ತು ಅಂತಾ ಹೆಣ್ಣಿನ ಕಡೆಯವರು ನಂಬುತ್ತಿದ್ದರು. ಮೈಸೂರಿನಲ್ಲಿ ಒಂದು ದೊಡ್ಡ ಬಂಗಲೆಯನ್ನೇ ಬಾಡಿಗೆಗೆ ಪಡೆದಿದ್ದ ಈತ, ತಾವು ಸಖತ್ ರಿಚ್ ಫ್ಯಾಮಿಲಿ ಅನ್ನೋ ರೇಂಜಿಗೆ ಹುಡುಗಿಯರ ಮನೆಯವರ ಮುಂದೆ ಸೋಗು ಹಾಕುತ್ತಿದ್ದ. ಇವನ ಅದ್ದೂರಿ ಲೈಫ್ ಸ್ಟೈಲ್ ಹಾಗೂ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ ಎಷ್ಟೋ ಶ್ರೀಮಂತ ಕುಟುಂಬಗಳು ಇವನ ಜೊತೆ ಸಂಬಂಧ ಬೆಳೆಸಲು ಮುಂದೆ ಬಂದಿದ್ದವು.
ತಾಯಿ ಜೊತೆಗೂಡಿ ಸ್ಕೆಚ್ ಹಾಕಿದ ಐನಾತಿ ಚೋರ
ಈ ಪ್ರದೀಪನಿಗೆ ಈ ತರಹ ವಂಚನೆ ಮಾಡಲು ಇವನ ತಾಯಿ ಕಲಾವತಿ ಕೂಡ ಸಾಥ್ ಕೊಡ್ತಾ ಇದ್ದಳು ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಮಗ ದೊಡ್ಡ ಹೈ ಪ್ರೊಫೈಲ್ ಬಿಲ್ಡಪ್ ಕೊಟ್ರೆ, ತಾಯಿ ಕಲಾವತಿ ಕೂಡ ಅದಕ್ಕೆ ಸರಿಯಾಗಿ ಡ್ರಾಮಾ ಮಾಡ್ತಾ ಇದ್ಲು. ಇಬ್ಬರೂ ಸೇರಿ ಹುಡುಗಿಯರ ಕುಟುಂಬದ ಜೊತೆ ವಿಶ್ವಾಸ ಗಳಿಸಿಕೊಳ್ಳುತ್ತಿದ್ದರು. ಒಂದು ಸಲ ಹೆಣ್ಣಿನ ಕಡೆಯವರಿಗೆ ಮದುವೆ ಫಿಕ್ಸ್ ಆಯ್ತು ಅಂತಾ ನಂಬಿಕೆ ಬಂದ್ಮೇಲೆ ಇವನ ಅಸಲಿ ಆಟ ಶುರುವಾಗ್ತಿತ್ತು.
"ನನ್ನ ಬೃಹತ್ ಮೊತ್ತದ ಹಣ ಬಿಸಿನೆಸ್‌ನಲ್ಲಿ ಅಥವಾ ಬ್ಯಾಂಕ್‌ನಲ್ಲಿ ಸ್ಟ್ರಕ್ ಆಗಿದೆ, ದೊಡ್ಡ ಅಮೌಂಟ್ ರಿಲೀಸ್ ಆಗಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ಆ ದುಡ್ಡು ಕೈಗೆ ಬರುತ್ತೆ. ಅಲ್ಲಿಯವರೆಗೂ ಅರ್ಜೆಂಟ್ ಆಗಿ ಸ್ವಲ್ಪ ಹಣ ಬೇಕಾಗಿದೆ. ಮದುವೆ ಆದ್ಮೇಲೆ ಎಲ್ಲವನ್ನೂ ವಾಪಸ್ ಕೊಡ್ತೀನಿ" ಅಂತ ತುಂಬಾ ಎಮೋಷನಲ್ ಆಗಿ ಲಕ್ಷ ಲಕ್ಷ ರೂಪಾಯಿಗೆ ಡಿಮ್ಯಾಂಡ್ ಇಡ್ತಾ ಇದ್ದ. ಇವನ ಮಾತನ್ನ ನಂಬಿ ಮೈಸೂರು ಮತ್ತು ಬೆಂಗಳೂರಿನ ಸುಮಾರು 10 ಕ್ಕೂ ಹೆಚ್ಚು ಹುಡುಗಿಯರ ಕುಟುಂಬಗಳು ಲಕ್ಷಾಂತರ ರೂಪಾಯಿ ಹಣವನ್ನ ಇವನ ಕೈಗಿಟ್ಟು ಈಗ ಕಣ್ಣೀರು ಹಾಕ್ತಿದ್ದಾರೆ.
ಬೆಂಗಳೂರು ಕುಟುಂಬಕ್ಕೆ ವಂಚಿಸಿ ಎಸ್ಕೇಪ್
ಇತ್ತೀಚೆಗೆ ಬೆಂಗಳೂರು ಮೂಲದ ಒಂದು ಪ್ರತಿಷ್ಠಿತ ಕುಟುಂಬ ಕೂಡ ಇವನ ಮ್ಯಾಟ್ರಿಮೋನಿಯಲ್ ಪ್ರೊಫೈಲ್ ನೋಡಿ ಮದುವೆ ಮಾಡೋಕೆ ಮುಂದಾಗಿತ್ತು. ಅವರ ಬಳಿಯೂ ಇದೇ ರೀತಿ ಸುಳ್ಳು ಕಥೆಗಳನ್ನು ಹೇಳಿ ಲಕ್ಷಾಂತರ ರೂಪಾಯಿ ಹಣ ಪೀಕಿದ್ದ ಈ ಕಿಲಾಡಿ. ಹಣ ಕೈ ಸೇರಿದ ಮೇಲೆ ಮದುವೆಯೂ ಇಲ್ಲ, ಏನೂ ಇಲ್ಲ ಅಂತಾ ಫೋನ್ ಸ್ವಿಚ್ ಆಫ್ ಮಾಡ್ಕೊಂಡು ತಾಯಿ ಜೊತೆ ಎಸ್ಕೇಪ್ ಆಗಿದ್ದಾನೆ. ಮೋಸ ಹೋಗಿರೋದು ಗೊತ್ತಾಗುತ್ತಿದ್ದಂತೆ ಸಂತ್ರಸ್ತ ಕುಟುಂಬ ತಡ ಮಾಡದೆ ಆಡುಗೋಡಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ.
ದೂರು ದಾಖಲಿಸಿಕೊಂಡಿರೋ ಪೊಲೀಸರು ವಂಚಕ ಪ್ರದೀಪ್ ಸೋಲೋಮನ್ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೊಲೀಸರು ತನ್ನನ್ನು ಅರೆಸ್ಟ್ ಮಾಡ್ತಾರೆ ಅನ್ನೋ ಭೀತಿಯಿಂದ ಈತ ಸದ್ಯಕ್ಕೆ ತಲೆಮರೆಸಿಕೊಂಡಿದ್ದಾನೆ.