May 7, 2026 Languages : ಕನ್ನಡ | English

ಬೆಂಗಳೂರು ಕಾರು ಮಾಲೀಕರೇ ಎಚ್ಚರ - ರಸ್ತೆ ಪಕ್ಕ ಪಾರ್ಕ್ ಮಾಡಿದ ಕಾರಿನ ಗ್ಲಾಸ್ ಒಡೆದು ಲಕ್ಷಾಂತರ ಮೌಲ್ಯದ ವಸ್ತುಗಳ ಲೂಟಿ!!

ನೀವು ಬೆಂಗಳೂರಿನ ರಸ್ತೆಬದಿಯಲ್ಲಿ ಕಾರು ಪಾರ್ಕ್ ಮಾಡ್ತೀರಾ? ಹಾಗಾದ್ರೆ ಹುಷಾರು! ನಿಮ್ಮ ಕಾರಿನಲ್ಲಿ ಬೆಲೆಬಾಳುವ ವಸ್ತುಗಳನ್ನಿಟ್ಟು ಹೋಗೋದು ಕಳ್ಳರಿಗೆ ನೀವೇ ಅವಕಾಶ ಕೊಟ್ಟಂತೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ, ಕಳ್ಳರು ಕಾರಿನ ಕಿಟಕಿ ಗಾಜು ಒಡೆದು ಒಳಗಿದ್ದ ವಸ್ತುಗಳನ್ನ ಎಗರಿಸಿದ್ದಾರೆ. ಹಾಗಾಗಿ, ಕಾರಿನಲ್ಲಿ ವಸ್ತುಗಳನ್ನ ಬಿಟ್ಟು ಹೋಗುವ ಮುನ್ನ ಹತ್ತು ಬಾರಿ ಯೋಚಿಸಿ.

ಅಶೋಕನಗರದಲ್ಲಿ ಸಿನಿಮಾ ಸ್ಟೈಲ್ ಕಾರು ಕಳ್ಳತನ;
ಅಶೋಕನಗರದಲ್ಲಿ ಸಿನಿಮಾ ಸ್ಟೈಲ್ ಕಾರು ಕಳ್ಳತನ;

ಕ್ರಿಕೆಟ್ ಹರಾಜಿನ ಬೆಲೆಬಾಳುವ ಸಾಮಗ್ರಿಗಳು ಹಾಗೂ ಟಿವಿಯನ್ನು ಕಾರಿನಲ್ಲೇ ಇಟ್ಟು ರಸ್ತೆ ಬದಿಯಲ್ಲಿ ನಿಲ್ಲಿಸಿ ಮನೆಗೆ ಹೋದ ಮಾಲೀಕರಿಗೆ ಮರುದಿನ ಬೆಳಿಗ್ಗೆ ಆಘಾತ ಎದುರಾಯಿತು. ಸುರಕ್ಷಿತವೆಂದು ಭಾವಿಸಿದ್ದ ಮಾಲೀಕರ ನಂಬಿಕೆಯನ್ನು ಹುಸಿಗೊಳಿಸಿದ ಕಳ್ಳರ ತಂಡ, ರಾತ್ರೋರಾತ್ರಿ ತನ್ನ ಕೆಲಸ ಮುಗಿಸಿತ್ತು. ಇಂತಹ ಅಜಾಗರೂಕತೆಯೇ ಕಳ್ಳರಿಗೆ ಬೆಲೆಬಾಳುವ ವಸ್ತುಗಳನ್ನು ಕದಿಯಲು ದೊಡ್ಡ ಅವಕಾಶ ಮಾಡಿಕೊಟ್ಟಿದೆ.

ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಕಾರಿನ ಗ್ಲಾಸ್ ಒಡೆದ ಕಳ್ಳರು, ಕ್ಷಣಾರ್ಧದಲ್ಲಿ ಅದರಲ್ಲಿದ್ದ ಸಾಮಗ್ರಿಗಳನ್ನು ದೋಚಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಈ ಖದೀಮರು ಕಳ್ಳತನಕ್ಕೆಂದೇ ಪ್ರತ್ಯೇಕ ಕಾರಿನಲ್ಲಿ ಬಂದಿದ್ದರು. ಕದ್ದ ವಸ್ತುಗಳನ್ನು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಅಲ್ಲಿಂದ ನಾಪತ್ತೆಯಾಗಿದ್ದಾರೆ.

ಕಳ್ಳರ ಈ ಚಾಲಾಕಿ ಕೃತ್ಯದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಕಿಟಕಿ ಗಾಜು ಒಡೆಯುವ ಮತ್ತು ವಸ್ತುಗಳನ್ನು ಬೇರೆ ಕಾರಿಗೆ ಸಾಗಿಸುವ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಶೋಕನಗರ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ಆದರೆ, ಕಳ್ಳತನವಾಗಿ ಹತ್ತು ದಿನಗಳು ಕಳೆದಿದ್ದರೂ, ಪೊಲೀಸರಿಗೆ ಖದೀಮರ ಬಗ್ಗೆ ಯಾವುದೇ ಪಕ್ಕಾ ಸುಳಿವು ಸಿಕ್ಕಿಲ್ಲ. ಸಿಸಿಟಿವಿ ದೃಶ್ಯಗಳಿದ್ದರೂ ಕಳ್ಳರು ಪತ್ತೆಯಾಗದಿರುವುದು ಕಾರು ಮಾಲೀಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.

ಕಾರು ಪಾರ್ಕಿಂಗ್ ಮಾಡುವಾಗ ಈ ತಪ್ಪು ಮಾಡಬೇಡಿ;

ಬೆಂಗಳೂರಿನಂತಹ ನಗರಗಳಲ್ಲಿ ಪಾರ್ಕಿಂಗ್ ಸಮಸ್ಯೆ ದೊಡ್ಡದಿದೆ ನಿಜ, ಆದರೆ ನಿಮ್ಮ ವಸ್ತುಗಳ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಪೊಲೀಸರು ಮತ್ತು ತಜ್ಞರು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಲು ಸಲಹೆ ನೀಡುತ್ತಾರೆ.

ಬೆಲೆಬಾಳುವ ವಸ್ತುಗಳನ್ನ ಬಿಡಬೇಡಿ- ಲ್ಯಾಪ್‌ಟಾಪ್, ಮೊಬೈಲ್, ಕ್ಯಾಮೆರಾ ಅಥವಾ ಹಣದ ಬ್ಯಾಗ್‌ಗಳನ್ನು ಕಾರಿನ ಸೀಟಿನ ಮೇಲೆ ಕಾಣುವಂತೆ ಇಡಬೇಡಿ. ಇದು ಕಳ್ಳರನ್ನು ನೇರವಾಗಿ ಆಹ್ವಾನಿಸಿದಂತೆ.

ಬೆಳಕಿರುವ ಜಾಗದಲ್ಲಿ ಪಾರ್ಕ್ ಮಾಡಿ - ಸಾಧ್ಯವಾದಷ್ಟು ಸಿಸಿಟಿವಿ ಇರುವ ಅಥವಾ ಹೆಚ್ಚು ಜನ ಓಡಾಡುವ, ಬೆಳಕಿರುವ ಜಾಗದಲ್ಲೇ ಕಾರು ನಿಲ್ಲಿಸಿ.

ಗ್ಲಾಸ್ ಭದ್ರತೆ - ಕಾರಿನ ಕಿಟಕಿಗಳು ಸರಿಯಾಗಿ ಲಾಕ್ ಆಗಿವೆಯೇ ಎಂದು ಪರೀಕ್ಷಿಸಿ. ಗ್ಲಾಸ್ ಮೇಲೆ ಕಪ್ಪು ಫಿಲ್ಮ್ ಇದ್ದರೆ ಕಳ್ಳರಿಗೆ ಒಳಗಿರುವುದು ಏನು ಎಂದು ತಿಳಿಯುವುದಿಲ್ಲ ಎಂಬುದು ಸುಳ್ಳು; ಅವರು ಗ್ಲಾಸ್ ಒಡೆದೇ ಚೆಕ್ ಮಾಡುತ್ತಾರೆ.

ಸೆಕ್ಯೂರಿಟಿ ಅಲಾರಂ - ನಿಮ್ಮ ಕಾರಿಗೆ ಉತ್ತಮ ಗುಣಮಟ್ಟದ ಸೆಕ್ಯೂರಿಟಿ ಅಲಾರಂ ಅಳವಡಿಸಿ. ಗ್ಲಾಸ್ ಒಡೆದಾಗ ಅಥವಾ ಕಾರನ್ನು ಅಲುಗಾಡಿಸಿದಾಗ ಅದು ದೊಡ್ಡದಾಗಿ ಸದ್ದು ಮಾಡಿದರೆ ಕಳ್ಳರು ಗಾಬರಿಯಾಗುವ ಸಾಧ್ಯತೆ ಇರುತ್ತದೆ.

ಸದ್ಯ ಅಶೋಕನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ. ಕಳ್ಳರು ಬಳಸಿದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಹುಡುಕಾಟ ನಡೆಸುತ್ತಿದ್ದಾರೆ. ಕಳ್ಳತನವಾದ ವಸ್ತುಗಳು ಬಹಳ ಅಪರೂಪದ ಮತ್ತು ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳಾದ್ದರಿಂದ, ಅವುಗಳನ್ನು ಮಾರಾಟ ಮಾಡಲು ಪ್ರಯತ್ನಿಸುವ ಹಂತದಲ್ಲಿ ಕಳ್ಳರು ಸಿಕ್ಕಿಬೀಳುವ ಸಾಧ್ಯತೆ ಇದೆ ಎಂದು ಪೊಲೀಸರು ಆಶಿಸಿದ್ದಾರೆ.

ಬೆಂಗಳೂರಿನ ಜನರೇ, ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ "ಮುನ್ನೆಚ್ಚರಿಕೆಗಿಂತ ಮದ್ದು ಇಲ್ಲ". ನಿಮ್ಮ ಬೆಲೆಬಾಳುವ ವಸ್ತುಗಳನ್ನು ಕಾರಿನಲ್ಲಿಟ್ಟು ಕಳ್ಳರಿಗೆ ಹಬ್ಬ ಮಾಡಿಕೊಡಬೇಡಿ. ಎಚ್ಚರವಾಗಿರಿ, ಸುರಕ್ಷಿತವಾಗಿರಿ! 

Latest News