ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ 'ಕುಟುಂಬ ರಾಜಕಾರಣ'ದ ಭಿನ್ನಮತ ಸ್ಫೋಟಗೊಂಡಿತ್ತು. ಮಾಜಿ ಶಾಸಕ ಎಚ್.ವೈ. ಮೇಟಿ ಅವರ ಮಕ್ಕಳ ನಡುವೆಯೇ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದ್ದು, ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಬಿಕ್ಕಟ್ಟನ್ನು ಶಮನಗೊಳಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿದ್ದು, ಈಗ ಸಂಧಾನ ಸಭೆ ಯಶಸ್ವಿಯಾಗಿದೆ.
ಎಚ್.ವೈ. ಮೇಟಿ ಅವರ ಕುಟುಂಬದ ನಾಲ್ವರು ಸದಸ್ಯರು ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಬಾಯಕ್ಕ ಮತ್ತು ಮಹಾದೇವಿ ಮೇಟಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅದರಲ್ಲೂ ಕಿರಿಯ ಪುತ್ರಿ ಮಹಾದೇವಿ ಮೇಟಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ತಮಗೆ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಂಡಾಯದ ಎಚ್ಚರಿಕೆ ನೀಡಿದ್ದರು. ಮಾರ್ಚ್ 20 ರಂದು ನಾಮಪತ್ರ ಸಲ್ಲಿಸುವುದಾಗಿ ಅವರ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿತ್ತು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ, ಇಂದು (ಮಾರ್ಚ್ 18) ಮೇಟಿ ಕುಟುಂಬದ ಎಲ್ಲ ನಾಲ್ವರು ಮಕ್ಕಳನ್ನು ಬೆಂಗಳೂರಿಗೆ ಕರೆಸಿಕೊಂಡು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಸಿಎಂ ಒಂದು ಕಠಿಣ ಸಂದೇಶ ರವಾನಿಸಿದ್ದಾರೆ. "ಟಿಕೆಟ್ ಅನ್ನು ನಿಮ್ಮ ಕುಟುಂಬಕ್ಕೇ ನೀಡಲಾಗುವುದು. ಆದರೆ, ನಿಮ್ಮ ನಾಲ್ವರಲ್ಲಿ ಹೈಕಮಾಂಡ್ ಯಾರನ್ನೇ ಆಯ್ಕೆ ಮಾಡಿದರೂ ಉಳಿದವರು ಒಗ್ಗಟ್ಟಿನಿಂದ ಪಕ್ಷದ ಪರ ಕೆಲಸ ಮಾಡಬೇಕು" ಎಂದು ಖಡಕ್ ಆಗಿ ಸೂಚಿಸಿದರು. ಸಿಎಂ ಅವರ ಈ ಮಾತಿಗೆ ಮೇಟಿ ಅವರ ಎಲ್ಲಾ ಮಕ್ಕಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಾಗಲಕೋಟೆ ಟಿಕೆಟ್ ಮೇಟಿ ಕುಟುಂಬಕ್ಕೇ ಸಿಗುವುದು ಖಚಿತ ಎಂದು ಸ್ಪಷ್ಟಪಡಿಸಿದರು. ಆದರೆ ನಾಲ್ವರಲ್ಲಿ ಯಾರಿಗೆ ಎಂಬುದು ಇನ್ನೂ ನಿಗೂಢವಾಗಿದೆ. ಏಪ್ರಿಲ್ 9 ರಂದು ನಡೆಯಲಿರುವ ಈ ಉಪಚುನಾವಣೆಯ ಅಭ್ಯರ್ಥಿ ಬಗ್ಗೆ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಲಿದೆ. ಶುಕ್ರವಾರ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕರ್ನಾಟಕಕ್ಕೆ ಆಗಮಿಸಲಿದ್ದು, ಸ್ಥಳೀಯ ವರದಿಗಳ ಆಧಾರದ ಮೇಲೆ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುವುದು.
ಇತ್ತ ದೆಹಲಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ತಾವು ಈಗಾಗಲೇ ಸಿಎಂ ಮತ್ತು ಜಿಲ್ಲಾ ಮಂತ್ರಿಗಳ ಜೊತೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ವರದಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗುವುದು ಮತ್ತು ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಎದುರಾಗಿದ್ದ ಬಂಡಾಯದ ಭೀತಿಯನ್ನು ಸಿದ್ದರಾಮಯ್ಯ ಅವರು ಸದ್ಯಕ್ಕೆ ತಣ್ಣಗಾಗಿಸಿದ್ದಾರೆ. ಮೇಟಿ ಕುಟುಂಬದ ನಾಲ್ವರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಈಗ ಇಡೀ ಕ್ಷೇತ್ರದ ಜನರ ಕುತೂಹಲಕ್ಕೆ ಕಾರಣವಾಗಿದೆ.