ಸೋಶಿಯಲ್ ಮೀಡಿಯಾದಲ್ಲಿ ಇಂದು ಯಾವ ಮೀಮ್ ತೆರೆದರೂ, ಯಾವ ಕಾಮಿಡಿ ವಿಡಿಯೋ ನೋಡಿದರೂ, ಆ ಮುಗ್ಧ ನಗು ಕಾಣಿಸದೇ ಇರುವುದಿಲ್ಲ. ಕೈಯಲ್ಲಿ ಚಹಾ ಕಪ್ ಹಿಡಿದು ಗಹಗಹಿಸಿ ನಗುವ ಹುಡುಗನ ವಿಡಿಯೋ ದೇಶಾದ್ಯಂತ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಆ ನಗುಮೊಗದ ಹುಡುಗ ಯಾರು? ಆತನ ಕಥೆ ಕೇಳಿದರೆ ಯಾರಿಗೂ ಸ್ಫೂರ್ತಿ ಬರಲೇಬೇಕು.
ಈ ವೈರಲ್ ಹುಡುಗನ ಹೆಸರು ಅರುಣ್. ತೆಲಂಗಾಣ ರಾಜ್ಯದ ಜಯಶಂಕರ್ ಬೊಪ್ಪಳಪಲ್ಲಿ ಜಿಲ್ಲೆಯ ನಾಲಪ್ಪುಚಟುವಲ್ಲಿ ಗ್ರಾಮದ ಸಾಮಾನ್ಯ ಹುಡುಗ. ಅತ್ಯಂತ ಬಡ ಕುಟುಂಬದಿಂದ ಬಂದ ಅರುಣ್, ಜೀವನ ಸಾಗಿಸಲು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಆತನ ಜೀವನದಲ್ಲಿ ಯಾವುದೇ ದೊಡ್ಡ ಕನಸುಗಳಿರಲಿಲ್ಲ. ಶಾಲೆಗೂ ಹೋಗಲಾಗದೆ, ಬಡತನದ ಕಾರಣ ಕೇವಲ 4ನೇ ತರಗತಿಯಲ್ಲಿ ಓದನ್ನು ಅರ್ಧಕ್ಕೇ ಬಿಟ್ಟಿದ್ದನು.
ಒಂದು ದಿನ ಲಾರಿ ಚಾಲಕ ನೆಹರು ಜೊತೆ ಚಹಾ ಕುಡಿಯುವಾಗ ನಡೆದ ಸಣ್ಣ ಜೋಕ್, ಅರುಣ್ ಬದುಕನ್ನೇ ಬದಲಾಯಿಸಿತು. ಸ್ನೇಹಿತನ ಮಾತಿಗೆ ಅರುಣ್ ನಗುತ್ತಿದ್ದ ಆ ಕ್ಷಣವನ್ನು ನೆಹರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದರು. ಯಾವುದೇ ಪ್ಲಾನ್ ಇಲ್ಲದೆ, ಸಹಜವಾಗಿ ಅಪ್‌ಲೋಡ್ ಮಾಡಿದ ಆ ವಿಡಿಯೋ, ಒಂದೂವರೆ ತಿಂಗಳಲ್ಲೇ 4 ಕೋಟಿ ವೀಕ್ಷಣೆಗಳನ್ನು ದಾಟಿ ದಾಖಲೆ ಬರೆಯಿತು. ನಂತರ ಆ ನಗು ದೇಶದಾದ್ಯಂತ ಟ್ರೋಲ್, ಮೀಮ್, ರೀಲ್ಸ್‌ಗಳ ಶಾಶ್ವತ ಭಾಗವಾಯಿತು.
ವೈರಲ್ ಆದ ಬಳಿಕ ಅರುಣ್ ಜೀವನ ಹೊಸ ದಿಕ್ಕು ಪಡೆದಿತು. ಲಾರಿ ಚಾಲಕ ನೆಹರು ಅವರ ಪ್ರೋತ್ಸಾಹದಿಂದ ಮತ್ತೆ ಓದಿನತ್ತ ಮುಖ ಮಾಡಿದ ಅರುಣ್, ಇತ್ತೀಚೆಗೆ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದಾನೆ. ಒಮ್ಮೆ ಶಾಲೆ ಬಿಟ್ಟ ಹುಡುಗ, ಈಗ ಶಿಕ್ಷಣದ ಮಹತ್ವವನ್ನು ಅರಿತು ಮುಂದಿನ ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದಾನೆ.
ಇಂದು ಅರುಣ್ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿ. ಅನೇಕ ಯೂಟ್ಯೂಬ್ ಚಾನೆಲ್‌ಗಳು ಸಂದರ್ಶನ ಮಾಡಿವೆ. ಅರುಣ್ ಸ್ವತಃ ಇನ್‌ಸ್ಟಾಗ್ರಾಂ ಖಾತೆ ತೆರೆದು ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಸಾವಿರಾರು ಫಾಲೋವರ್ಸ್ ಸಂಪಾದಿಸಿದ್ದಾನೆ. ಆದರೆ ಅವನ ನಗುವಿನ ಹಿಂದಿನ ಸರಳತೆ ಇನ್ನೂ ಕಳೆದುಹೋಗಿಲ್ಲ.
ಒಂದು ಸಂದರ್ಶನದಲ್ಲಿ ಅರುಣ್ ಭಾವುಕನಾಗಿ, “ನಾನು ನಗುವಾಗ ನಾನು ಬಡ ಲಾರಿ ಕ್ಲೀನರ್ ಅನ್ನೋದೇ ನೆನಪಿರಲಿಲ್ಲ. ಆ ಒಂದೇ ಒಂದು ನಗು ನನ್ನ ಬದುಕನ್ನೇ ಬದಲಿಸಿತು. ನೆಹರು ಅಣ್ಣ ನನ್ನ ಜೀವನದಲ್ಲಿ ದೇವರಿಗಿಂತ ಕಡಿಮೆ ಇಲ್ಲ” ಎಂದು ಹೇಳಿದ್ದಾನೆ. ಮುಂದೆ ಚೆನ್ನಾಗಿ ಓದಿ ಗೌರವಯುತ ಕೆಲಸ ಮಾಡಬೇಕು, ತನ್ನಂತೆಯೇ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎನ್ನುವುದು ಈಗ ಅರುಣ್‌ನ ಕನಸು.