ಉತ್ತಮ ಭವಿಷ್ಯದ ಕನಸು ಹೊತ್ತು ಏಳು ಸಮುದ್ರದಾಚೆ ಇರುವ ಅಮೆರಿಕಕ್ಕೆ ವಲಸೆ ಹೋಗುವ ಭಾರತೀಯರ ಸಂಖ್ಯೆಯೇನೋ ದೊಡ್ಡದಿದೆ. ಆದರೆ, ಅಲ್ಲಿ ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿರುವ 'ಬಂದೂಕು ಸಂಸ್ಕೃತಿ' (Gun Culture) ಹಾಗೂ ದರೋಡೆಕೋರರ ಅಟ್ಟಹಾಸ ಈಗ ಅನಿವಾಸಿ ಭಾರತೀಯರ ನೆಮ್ಮದಿಯನ್ನೇ ಕೆಡಿಸಿದೆ.
ಇದೀಗ ಅಮೆರಿಕದ ವರ್ಜೀನಿಯಾದಿಂದ ಇಡೀ ದೇಶವೇ ತಲೆತಗ್ಗಿಸುವಂತಹ, ಕರುಳು ಹಿಂಡುವ ಭೀಕರ ಸುದ್ದಿಯೊಂದು ಬಂದಿದೆ. ಅಲ್ಲಿನ ಸೂಪರ್‌ಮಾರ್ಕೆಟ್ ಒಂದರಲ್ಲಿ ದಿನಸಿ ಸಾಮಗ್ರಿ ಬಿಲ್ ಮಾಡುತ್ತಾ ನಿಂತಿದ್ದ ಭಾರತೀಯ ಮೂಲದ ಮಹಿಳಾ ಕ್ಯಾಷಿಯರ್‌ನನ್ನು ಕಿರಾತಕ ದರೋಡೆಕೋರನೊಬ್ಬ ಅತಿ ಹತ್ತಿರದಿಂದ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿ ಕೊ-ಲೆ ಮಾಡಿದ್ದಾನೆ. ಇಡೀ ಜಗತ್ತನ್ನೇ ನಡುಗಿಸಿರುವ ಈ ರೋಮಹರ್ಷಕ ದರೋಡೆ ಮತ್ತು ಕೊ-ಲೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ದೊಡ್ಡ ಆತಂಕ ಸೃಷ್ಟಿಸಿದೆ.
ಸಂಸಾರಕ್ಕೆ ಆಸರೆಯಾಗಿದ್ದ ಗೃಹಿಣಿಯ ಭೀಕರ ಅಂತ್ಯ!
ಅಮೆರಿಕದ ದರೋಡೆಕೋರನ ಮೃಗೀಯ ವರ್ತನೆಗೆ ಬಲಿಯಾದ ಆ ದುರ್ದೈವಿ ಮಹಿಳೆಯನ್ನು 47 ವರ್ಷದ ಮೇಘಾಬೆನ್ ಪಟೇಲ್ ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಗುಜರಾತ್ ರಾಜ್ಯದ ಬಿಜಾಪುರ ತಾಲೂಕಿನ ಜಂತ್ರಾಲ್ ಗ್ರಾಮದವರು. ಕಳೆದ ಹತ್ತು ವರ್ಷಗಳ ಹಿಂದೆ ಗಂಡ, ಇಬ್ಬರು ಮಕ್ಕಳ ಜೊತೆ ಅಮೆರಿಕಕ್ಕೆ ವಲಸೆ ಹೋಗಿದ್ದ ಮೇಘಾಬೆನ್, ಅಲ್ಲಿನ ವರ್ಜೀನಿಯಾದ ದೊಡ್ಡ ಸೂಪರ್‌ಮಾರ್ಕೆಟ್ ಒಂದರಲ್ಲಿ ಕೆಲಸ ಮಾಡಿಕೊಂಡ ಸಂಸಾರಕ್ಕೆ ಹೆಗಲಾಗಿದ್ದರು. ಆದರೆ ಇವತ್ತು ಆಕೆಯ ಪತಿ ಉಪೇಂದ್ರಭಾಯಿ ಪಟೇಲ್, ಮಗಳು ನಕ್ಷಿಬೆನ್ ಮತ್ತು ಮಗ ಸ್ಮಿತ್ ತಮ್ಮ ಪ್ರೀತಿಯ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ಕಸ್ಟಮರ್ ತರಹ ಬಂದು ಕಥೆ ಮುಗಿಸಿದ ಕಿರಾತಕ!
ವೈರಲ್ ಆಗಿರುವ ಸಿಸಿಟಿವಿ ದೃಶ್ಯಗಳನ್ನು ನೋಡಿದರೆ ಎಂತಹವರಿಗಾದರೂ ಮೈ ಜುಂ ಎನ್ನುತ್ತದೆ. ಮೈತುಂಬಾ ಟ್ರ್ಯಾಕ್‌ಸೂಟ್ ಮತ್ತು ಜಾಕೆಟ್ ಧರಿಸಿ, ಮುಖಕ್ಕೆ ಮಾಸ್ಕ್, ಕೈಗೆ ಗವಸು ಹಾಗೂ ತಲೆಗೆ ಟೋಪಿ ಹಾಕಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಏನೂ ಅರಿಯದವನಂತೆ ಸೂಪರ್‌ಮಾರ್ಕೆಟ್ ಒಳಗೆ ಪ್ರವೇಶಿಸಿದ್ದಾನೆ.
ಮೇಘಾಬೆನ್ ಇದ್ದ ಕೌಂಟರ್ ಬಳಿ ಬಂದು ಏನೋ ವಸ್ತು ಕೇಳುವ ನೆಪದಲ್ಲಿ ಸ್ವಲ್ಪ ಸಮಯ ಅವರ ಜೊತೆ ಮಾತನಾಡಿದ್ದಾನೆ. ಆದರೆ, ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ತನ್ನ ಜೇಬಿನಿಂದ ಗನ್ ಹೊರತೆಗೆದ ಆ ಮೃಗ, ಮೇಘಾಬೆನ್ ಅವರ ಎದೆಯ ಭಾಗಕ್ಕೆ ಗುರಿ ಇಟ್ಟು ಸತತವಾಗಿ 2-3 ಬಾರಿ ಟ್ರಿಗರ್ ಒತ್ತಿದ್ದಾನೆ. ಗುಂಡು ತಗುಲುತ್ತಿದ್ದಂತೆ ಮೇಘಾಬೆನ್ ರಕ್ತದ ಮಡುವಿನಲ್ಲಿ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆ ಸೈಕೋ ದರೋಡೆಕೋರ ಕೌಂಟರ್‌ನಲ್ಲಿದ್ದ ಹಣದ ಬಾಕ್ಸ್ ಅನ್ನು ಎತ್ತಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮೇಘಾಬೆನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಮೆರಿಕದಲ್ಲಿ ಇಂಡಿಯನ್ಸ್ ಸೇಫ್ ಇಲ್ವಾ? ಹೆಚ್ಚುತ್ತಿದೆ ಜಾಗತಿಕ ಕಳವಳ!
ಘಟನೆ ನಡೆದ ತಕ್ಷಣ ವರ್ಜೀನಿಯಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸೂಪರ್‌ಮಾರ್ಕೆಟ್ ಅನ್ನು ಸಂಪೂರ್ಣವಾಗಿ ಸೀಲ್ ಮಾಡಿದ್ದಾರೆ. ಸಿಸಿಟಿವಿ ಫೂಟೇಜ್ ಆಧರಿಸಿ ಹಂತಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲೇ ಅರೆಸ್ಟ್ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಆದರೆ, ಈ ಘಟನೆ ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರಲ್ಲಿ, ಅದರಲ್ಲೂ ವಿಶೇಷವಾಗಿ ನೈಟ್ ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ತೀವ್ರ ಭಯವನ್ನುಂಟು ಮಾಡಿದೆ.
ಇತಿಹಾಸ ಮರುಕಳಿಸುತ್ತಿದೆ: ಕಳೆದ ವರ್ಷ ಸೆಪ್ಟೆಂಬರ್ 2025 ರಲ್ಲೂ ದಕ್ಷಿಣ ಕೆರೊಲಿನಾದಲ್ಲಿ ಕಿರಣ್ ಬೆನ್ ಪಟೇಲ್ ಎಂಬ ಮತ್ತೊಬ್ಬ ಗುಜರಾತಿ ಮಹಿಳೆಯನ್ನು ದರೋಡೆಕೋರರು ಇದೇ ರೀತಿ ಶೂಟ್ ಮಾಡಿ ಸಾಯಿಸಿದ್ದರು. ಕೇವಲ ವ್ಯಾಪಾರಸ್ಥರಷ್ಟೇ ಅಲ್ಲದೆ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋಗುತ್ತಿರುವ ಭಾರತೀಯ ಯುವ ವಿದ್ಯಾರ್ಥಿಗಳು ಕೂಡ ಇತ್ತೀಚಿನ ದಿನಗಳಲ್ಲಿ ಅಲ್ಲಿನ ಇಂತಹ ಹಿಂಸಾಚಾರಕ್ಕೆ ಬಲಿಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಕಳವಳಕ್ಕೆ ಕಾರಣವಾಗಿದೆ.
United States - A Gujarati woman named Meghna Patel, originally from Jantral village in Vijapur taluka of Mehsana district, Gujarat, was shot dead in an alleged robbery attempt in the United States. CCTV footage of the horrifying incident has surfaced and is circulating… pic.twitter.com/DChA1gtCK0
— NextMinute News (@nextminutenews7) May 26, 2026
ವಿದೇಶಾಂಗ ಇಲಾಖೆಯು ಈ ನಿಟ್ಟಿನಲ್ಲಿ ಅಮೆರಿಕ ಸರ್ಕಾರದ ಜೊತೆ ಮಾತನಾಡಿ, ಅಲ್ಲಿರುವ ನಮ್ಮ ಭಾರತೀಯ ಸಮುದಾಯಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಬೇಕಿದೆ. ಅಮಾಯಕ ಜೀವವನ್ನು ಬಲಿಪಡೆದ ಆ ಹಂತಕನಿಗೆ ಕಠಿಣ ಶಿಕ್ಷೆಯಾಗಲಿ ಎನ್ನುವುದೇ ನಮ್ಮ ಆಶಯ!