215-208 ಮತಗಳ ಅಂತರದಿಂದ ಐತಿಹಾಸಿಕ ಬಿಲ್ ಪಾಸ್ - ಇರಾನ್ ಯುದ್ಧಕ್ಕೆ ಅಮೆರಿಕದ ಜನ ಸಾಮಾನ್ಯರು ಕೊಡುತ್ತಿರುವ ಬೆಲೆ ಎಷ್ಟು ಗೋತ್ತಾ?

ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ಮಿಲಿಟರಿ ಕ್ರಮಗಳಿಗೆ ಬ್ರೇಕ್ ಹಾಕಲು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ ಸಂಸತ್) ಮಹತ್ವದ ನಿರ್ಣಯವೊಂದನ್ನು ಅಂಗೀಕರಿಸಿದೆ. ಟ್ರಂಪ್ ಅವರ ಯುದ್ಧದ ನಿರ್ಧಾರಗಳ ವಿರುದ್ಧ ಸಂಸತ್ತಿನಲ್ಲಿ ನಡೆದ ವೋಟಿಂಗ್‌ನಲ್ಲಿ 215-208 ಮತಗಳ ಅಂತರದಿಂದ ಈ ಪ್ರಸ್ತಾವನೆ ಪಾಸ್ ಆಗಿದೆ. ವಿಶೇಷ ಎಂದರೆ, ಟ್ರಂಪ್ ಅವರ ಸ್ವಂತ ರಿಪಬ್ಲಿಕನ್ ಪಕ್ಷದ ನಾಲ್ಕು ಜನ ಸಂಸದರೇ ಡೆಮೋಕ್ರಾಟ್‌ಗಳ ಜೊತೆ ಕೈಜೋಡಿಸಿ ಟ್ರಂಪ್ ವಿರುದ್ಧ ವೋಟ್ ಹಾಕಿರುವುದು ಈಗ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್ | Photo Credit: newsonair.gov.in
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್ | Photo Credit: newsonair.gov.in

ನಾಲ್ಕನೇ ಪ್ರಯತ್ನದಲ್ಲಿ ಸಿಕ್ಕ ಜಯ!

ಇರಾನ್ ಮತ್ತು ಅಮೆರಿಕ ನಡುವೆ ಕಳೆದ ಫೆಬ್ರವರಿಯಿಂದ ಯುದ್ಧದ ವಾತಾವರಣ ಶುರುವಾಗಿದೆ. ಆದರೆ, ಅಧ್ಯಕ್ಷ ಟ್ರಂಪ್ ಅವರು ಸಂಸತ್ತಿನ (ಕಾಂಗ್ರೆಸ್) ಅನುಮತಿ ಪಡೆಯದೆಯೇ ಮಿಲಿಟರಿ ಶಕ್ತಿಯನ್ನು ಬಳಸುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳ ದೊಡ್ಡ ಆರೋಪವಾಗಿದೆ. ಅಧ್ಯಕ್ಷರ ಈ ಮಿತಿಮೀರಿದ ಯುದ್ಧದ ಅಧಿಕಾರಕ್ಕೆ ಕಾನೂನಾತ್ಮಕವಾಗಿ ಬ್ರೇಕ್ ಹಾಕಲು ಸಂಸತ್ ಪ್ರಯತ್ನಿಸುತ್ತಿರುವುದು ಇದು ನಾಲ್ಕನೇ ಬಾರಿ! ಈ ಹಿಂದೆ ಮೂರು ಬಾರಿ ವಿಫಲವಾಗಿದ್ದ ಕೆಳಮನೆ, ಈ ಬಾರಿ ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ.

ಟ್ರಂಪ್‌ಗೆ ಶಾಕ್ ಕೊಟ್ಟ ಸ್ವಪಕ್ಷೀಯರು ಯಾರು?

ಯಾವಾಗಲೂ ಅಧ್ಯಕ್ಷ ಟ್ರಂಪ್ ಪರವಾಗಿ ನಿಲ್ಲುತ್ತಿದ್ದ ರಿಪಬ್ಲಿಕನ್ ಪಕ್ಷದ ಸಂಸದರಲ್ಲೇ ಕೆಲವರಿಗೆ ಈ ಯುದ್ಧದ ನಿರ್ಧಾರ ಇಷ್ಟ ಇರಲಿಲ್ಲ ಎನ್ನುವುದು ಈ ವೋಟಿಂಗ್ ಮೂಲಕ ಬಹಿರಂಗವಾಗಿದೆ. ರಿಪಬ್ಲಿಕನ್ ಪಕ್ಷದ ಥಾಮಸ್ ಮಾಸ್ಸಿ, ಬ್ರಿಯಾನ್ ಫಿಟ್ಜ್‌ಪ್ಯಾಟ್ರಿಕ್, ಟಾಮ್ ಬ್ಯಾರೆಟ್ ಮತ್ತು ವಾರೆನ್ ಡೇವಿಡ್ಸನ್ ಎಂಬ ನಾಲ್ಕು ಜನ ಸಂಸದರು ಬಹಿರಂಗವಾಗಿಯೇ ಟ್ರಂಪ್ ನಡೆಯನ್ನು ವಿರೋಧಿಸಿ, ವಿಪಕ್ಷ ಡೆಮೋಕ್ರಾಟ್‌ಗಳ ಜೊತೆ ಕೈಜೋಡಿಸಿದರು. ಇದರ ಜೊತೆಗೆ, ಈ ಹಿಂದೆ ಇಂತಹ ನಿರ್ಣಯಗಳ ವಿರುದ್ಧ ವೋಟ್ ಹಾಕಿದ್ದ ಮೈನೆ ಪ್ರಾಂತ್ಯದ ಡೆಮೋಕ್ರಾಟ್ ಸಂಸದ ಜ್ಯಾರೆಡ್ ಗೋಲ್ಡನ್ ಕೂಡ ಈ ಬಾರಿ ಟ್ರಂಪ್ ವಿರುದ್ಧವೇ ಮತ ಚಲಾಯಿಸಿದ್ದಾರೆ.

ಟ್ರಂಪ್ ಆಟ ಸದ್ಯಕ್ಕೆ ನಿಲ್ಲೋದು ಡೌಟ್?

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಈ ಬಿಲ್ ಪಾಸ್ ಆಗಿದ್ದರೂ, ಟ್ರಂಪ್ ಅವರ ಮಿಲಿಟರಿ ಆಕ್ಷನ್‌ಗಳನ್ನು ಇದು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಯಾಕಂದ್ರೆ, ಅಮೆರಿಕ ಸಂಸತ್ತಿನ ಮೇಲ್ಮನೆಯಾದ 'ಸೆನೆಟ್'ನಲ್ಲಿ ಇನ್ನು ಈ ಬಿಲ್ ಪಾಸ್ ಆಗಬೇಕಿದೆ. ಆದರೆ ಸೆನೆಟ್‌ನಲ್ಲಿ ಸದ್ಯ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವೇ ಬಹುಮತ ಹೊಂದಿದೆ.

ಒಂದು ವೇಳೆ ಸೆನೆಟ್‌ನಲ್ಲೂ ಈ ನಿರ್ಣಯಕ್ಕೆ ಒಪ್ಪಿಗೆ ಸಿಕ್ಕರೂ ಸಹ, ಅಧ್ಯಕ್ಷ ಟ್ರಂಪ್ ತಮಗಿರುವ ವಿಶೇಷ ಅಧಿಕಾರವನ್ನು ಬಳಸಿ ಈ ಬಿಲ್ ಅನ್ನು 'ವೀಟೋ' (ರದ್ದು) ಮಾಡಬಹುದು. ಟ್ರಂಪ್ ಅವರ ವೀಟೋ ನಿರ್ಧಾರವನ್ನು ಮುರಿಯಬೇಕಾದರೆ ಅಮೆರಿಕದ ಎರಡೂ ಸದನಗಳಲ್ಲಿ ಬರೋಬ್ಬರಿ ಮೂರನೇ ಎರಡರಷ್ಟು (2/3) ಬಹುಮತ ಬೇಕಾಗುತ್ತದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳಿಗೆ ಅಷ್ಟು ಸುಲಭದ ಮಾತಲ್ಲ.

ಸೆನೆಟ್‌ನಲ್ಲೂ ನಡೀತಿದೆ ಹರಸಾಹಸ

ಮೇಲ್ಮನೆಯಾದ ಸೆನೆಟ್‌ನಲ್ಲೂ ಇದೇ ರೀತಿಯ ಬಿಲ್ ಅನ್ನು ಪಾಸ್ ಮಾಡಲು ಡೆಮೋಕ್ರಾಟ್‌ಗಳು ಕಳೆದ ಏಳು ಬಾರಿ ಪ್ರಯತ್ನಿಸಿ ಫೇಲ್ ಆಗಿದ್ದರು. ಕೊನೆಗೆ ಮೇ ತಿಂಗಳಲ್ಲಿ ಈ ಬಿಲ್ ಸೆನೆಟ್‌ನಲ್ಲಿ ಒಂದು ಹಂತ ಮುಂದಕ್ಕೆ ಹೋಗಿದೆಯಾದರೂ, ಇನ್ನು ಪೂರ್ಣ ಪ್ರಮಾಣದ ವೋಟಿಂಗ್ ಪ್ರಕ್ರಿಯೆ ಬಾಕಿ ಇದೆ. ಒಟ್ಟಿನಲ್ಲಿ, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ವಿಚಾರವಾಗಿ ಅಮೆರಿಕದ ಸಂಸತ್ ಹಾಗೂ ಪ್ರೆಸಿಡೆಂಟ್ ಟ್ರಂಪ್ ನಡುವೆ ಈಗ ನೇರಾನೇರ ಯುದ್ಧ ಶುರುವಾಗಿದೆ.

Latest News