ಸೌದಿ ರಾಜಕುಮಾರನಿಗೆ ಪ್ರಧಾನಿ ಮೋದಿ ಫೋನ್ - ಇರಾನ್ ದಾಳಿಯ ಬಗ್ಗೆ ಭಾರತದ ಖಡಕ್ ಸಂದೇಶ!!

ಮಧ್ಯಪ್ರಾಚ್ಯದಲ್ಲಿ (West Asia) ಇರಾನ್ ಮತ್ತು ಇಸ್ರೇಲ್-ಅಮೆರಿಕದ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ಕಳೆದ 30 ದಿನಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಈಗ ಇಂಧನ ಮೂಲಸೌಕರ್ಯಗಳೇ ಟಾರ್ಗೆಟ್ ಆಗುತ್ತಿವೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ದೊರೆ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ.

ಸೌದಿ ಅರೇಬಿಯಾ ಜೊತೆ ಮೋದಿಯವರ ಮಾಸ್ಟರ್ ಪ್ಲಾನ್
ಸೌದಿ ಅರೇಬಿಯಾ ಜೊತೆ ಮೋದಿಯವರ ಮಾಸ್ಟರ್ ಪ್ಲಾನ್

ಇರಾನ್ ಪಡೆಗಳು ಪಶ್ಚಿಮ ಏಷ್ಯಾದ ಇಂಧನ ಮೂಲಸೌಕರ್ಯಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಭಾರತ ಕಟುವಾಗಿ ಖಂಡಿಸಿದೆ. ಈ ಬಗ್ಗೆ ಸ್ವತಃ ಮೋದಿ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಅವರೊಂದಿಗೆ ಚರ್ಚಿಸಿದ್ದೇನೆ. ಪ್ರಾದೇಶಿಕ ಇಂಧನ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಭಾರತ ಖಂಡಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ" ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾ ಮಾತ್ರವಲ್ಲದೆ, ಇರಾನ್ ತನ್ನ ದಾಳಿಯನ್ನು ನೆರೆಯ ಗಲ್ಫ್ ರಾಷ್ಟ್ರಗಳ ಮೇಲೂ ವಿಸ್ತರಿಸಿದೆ. ಈ ದಾಳಿಗಳು ಜಾಗತಿಕ ಇಂಧನ ಪೂರೈಕೆಗೆ ದೊಡ್ಡ ಮಟ್ಟದ ಅಪಾಯವನ್ನು ತಂದೊಡ್ಡುತ್ತಿವೆ.

ಈ ಮಾತುಕತೆಯಲ್ಲಿ ಪ್ರಮುಖವಾಗಿ ಚರ್ಚೆಯಾದ ವಿಷಯ ಅಂದ್ರೆ ಅದು 'ಸಂಚಾರ ಸ್ವಾತಂತ್ರ್ಯ'. ಸಮುದ್ರ ಮಾರ್ಗಗಳಲ್ಲಿ ಹಡಗುಗಳು ಸುರಕ್ಷಿತವಾಗಿ ಸಂಚರಿಸಬೇಕು. ಇರಾನ್ ನಡೆಸುತ್ತಿರುವ ದಾಳಿಗಳಿಂದಾಗಿ ತೈಲ ಸಾಗಿಸುವ ಹಡಗುಗಳ ಮಾರ್ಗಕ್ಕೆ ಅಡ್ಡಿಯುಂಟಾಗುತ್ತಿದೆ. ಇದನ್ನು ತಡೆಯಲು ಮತ್ತು ಹಡಗು ಮಾರ್ಗಗಳನ್ನು ಸುರಕ್ಷಿತವಾಗಿ ಮತ್ತು ಮುಕ್ತವಾಗಿಡಲು ಎರಡೂ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಜಾಗತಿಕ ವ್ಯಾಪಾರಕ್ಕೆ ಈ ಮಾರ್ಗಗಳು ಜೀವಾಳವಾಗಿರುವುದರಿಂದ ಭಾರತದ ಪಾಲಿಗೆ ಈ ವಿಷಯ ಬಹಳ ಮುಖ್ಯವಾಗಿದೆ.

ಯುದ್ಧ ಪೀಡಿತ ಈ ಪ್ರದೇಶಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನೋಡಿಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿ, ಸೌದಿ ಕ್ರೌನ್ ಪ್ರಿನ್ಸ್‌ಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ದಾಳಿ ಮಾಡುತ್ತಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ತನ್ನ ಕ್ಷಿಪಣಿ ಮತ್ತು ಡ್ರೋನ್ ಬಲವನ್ನು ಬಳಸಿ ಇಸ್ರೇಲ್ ಮತ್ತು ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಈ ಸಂಘರ್ಷದಿಂದ ಸೌದಿ ಅರೇಬಿಯಾದ ಮೇಲೆ ಕೂಡ ದಾಳಿಯಾಗಿದ್ದು, ಭಾರತ ಈ ಬೆಳವಣಿಗೆಯನ್ನು ಅತೀವ ಕಾಳಜಿಯಿಂದ ಗಮನಿಸುತ್ತಿದೆ.

ಈ ಕಠಿಣ ಸಮಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಆರ್ಥಿಕತೆಗೆ ಹೊಡೆತ ಬೀಳದಂತೆ ನೋಡಿಕೊಳ್ಳಲು ಭಾರತ ರಾಜತಾಂತ್ರಿಕವಾಗಿ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಪ್ರಧಾನಿ ಮೋದಿಯವರ ಈ ಮಾತುಕತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವನಿ ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.

Latest News