ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ನೆತನ್ಯಾಹು ಅವರು ಅತ್ಯಂತ ವಿಭಿನ್ನವಾಗಿ ಮತ್ತು ತಮಾಷೆಯಾಗಿ ಪ್ರತಿಕ್ರಿಯಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ತಮ್ಮ ಸಾವಿನ ಸುದ್ದಿಯನ್ನು ಕೇಳಿದ ನೆತನ್ಯಾಹು, ಗಾಬರಿಯಾಗುವ ಬದಲು ಒಂದು ಕೆಫೆಗೆ ಭೇಟಿ ನೀಡಿದರು. ಅಲ್ಲಿ ಕಾಫಿ ಆರ್ಡರ್ ಮಾಡುತ್ತಾ ಒಂದು ವಿಡಿಯೋವನ್ನು ಚಿತ್ರೀಕರಿಸಿ ತಮ್ಮ 'ಎಕ್ಸ್' (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ಹೀಬ್ರೂ ಭಾಷೆಯ ಒಂದು ಜನಪ್ರಿಯ ಪ್ರಾಸವನ್ನು ಬಳಸಿ, "ನಾನು ಕಾಫಿಗಾಗಿ ಸತ್ತಿದ್ದೇನೆ" (I am dead… for coffee) ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದರ ಅರ್ಥ "ನಾನು ಕಾಫಿಯನ್ನು ಅತಿಯಾಗಿ ಪ್ರೀತಿಸುತ್ತೇನೆ" ಎಂದಾಗಿದೆ. ಮುಂದುವರಿದು, "ನಾನು ನನ್ನ ದೇಶದ ಜನರಿಗಾಗಿ ಸಾಯುತ್ತಿದ್ದೇನೆ (ಅರ್ಪಿಸಿಕೊಳ್ಳುತ್ತಿದ್ದೇನೆ), ಅವರ ಸ್ಥೈರ್ಯ ಅದ್ಭುತವಾಗಿದೆ" ಎಂದು ಹೇಳುವ ಮೂಲಕ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ನೆತನ್ಯಾಹು ಅವರ ಸಾವಿನ ವದಂತಿ ಹಬ್ಬಲು ಒಂದು ವಿಚಿತ್ರ ಕಾರಣವಿತ್ತು. ಕಳೆದ ಗುರುವಾರ ಅವರು ನಡೆಸಿದ್ದ ಪತ್ರಿಕಾಗೋಷ್ಠಿಯ ವಿಡಿಯೋವೊಂದರಲ್ಲಿ ಅವರ ಕೈಯಲ್ಲಿ ಆರು ಬೆರಳುಗಳು ಕಾಣಿಸಿಕೊಂಡಿದ್ದವು. ತಂತ್ರಜ್ಞಾನದ ಮಿತಿಗಳಿಂದಾಗಿ ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿದ ವಿಡಿಯೋಗಳಲ್ಲಿ ಇಂತಹ ತಪ್ಪುಗಳು ಆಗುವುದು ಸಹಜ. ಇದರಿಂದಾಗಿ, ನೆತನ್ಯಾಹು ಸಾವನ್ನಪ್ಪಿದ್ದಾರೆ ಮತ್ತು ಈಗ ಕಾಣಿಸಿಕೊಳ್ಳುತ್ತಿರುವುದು ಎಐ ಸೃಷ್ಟಿಸಿದ ನಕಲಿ ವಿಡಿಯೋ ಎಂದು ಜನ ನಂಬಿದ್ದರು.
ಇದಕ್ಕೆ ಉತ್ತರವಾಗಿ ನೆತನ್ಯಾಹು ಈ ಹೊಸ ವಿಡಿಯೋದಲ್ಲಿ ತಮ್ಮ ಎರಡೂ ಕೈಗಳನ್ನು ಕ್ಯಾಮೆರಾ ಮುಂದೆ ಎತ್ತಿ ತೋರಿಸಿ, "ನನ್ನ ಬೆರಳುಗಳನ್ನು ಎಣಿಸಲು ನೀವು ಬಯಸುವಿರಾ? ನೋಡಿ, ಇಲ್ಲಿ ಎಲ್ಲವೂ ಸರಿಯಾಗಿದೆ," ಎಂದು ಹೇಳುವ ಮೂಲಕ ಆರು ಬೆರಳುಗಳ ಗೊಂದಲಕ್ಕೆ ಮತ್ತು ತಾವು ಬದುಕಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು 16ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಕೆರಳಿದ್ದು, ನೆತನ್ಯಾಹು ಅವರನ್ನು ಹಿಂಸಿಸಿ ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿತ್ತು. ಫೆಬ್ರವರಿ 28 ರಿಂದ ಅಮೆರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುತ್ತಿದ್ದು, ಈ ಯುದ್ಧದಲ್ಲಿ ಈಗಾಗಲೇ 2,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಯುದ್ಧದ ಭಯದಲ್ಲಿರುವ ಇಸ್ರೇಲಿ ನಾಗರಿಕರಿಗೆ ಸಂದೇಶ ನೀಡಿದ ನೆತನ್ಯಾಹು, "ಹೊರಗೆ ಹೋಗಿ ತಾಜಾ ಗಾಳಿಯನ್ನು ಉಸಿರಾಡಿ, ಆದರೆ ಯಾವಾಗಲೂ ಸಂರಕ್ಷಿತ ಸ್ಥಳಗಳ ಸಮೀಪವೇ ಇರಿ. ಸರ್ಕಾರದ ಸೂಚನೆಗಳನ್ನು ಪಾಲಿಸಿ," ಎಂದು ಮನವಿ ಮಾಡಿದರು. ಅಲ್ಲದೆ, ಇರಾನ್ ಮೇಲಿನ ದಾಳಿಯನ್ನು ಮುಂದುವರಿಸುವುದಾಗಿ ಅವರು ಘೋಷ್ಟಿಸಿದರು. ಕೊನೆಯಲ್ಲಿ, "ಈ ಕಾಫಿ ಅದ್ಭುತವಾಗಿದೆ, ಆದರೆ ಇದರ ಕ್ಯಾಲೋರಿಗಳ ಬಗ್ಗೆ ನನಗೆ ಗೊತ್ತಿಲ್ಲ," ಎಂದು ನಗುತ್ತಾ ವಿಡಿಯೋ ಮುಗಿಸಿದ್ದಾರೆ.