ಬಾಹ್ಯಾಕಾಶ ಲೋಕದಲ್ಲಿ ಇಂದು ಒಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ' (NASA) ಕೈಗೊಂಡಿರುವ ಆರ್ಟೆಮಿಸ್ II ಮಿಷನ್‌ನ ಗಗನಯಾತ್ರಿಗಳು ಚಂದ್ರನ ಸುತ್ತ ಒಂದು ಸುತ್ತು ಹಾಕಿ, ಭೂಮಿಯಿಂದ ಅತಿ ದೂರ ಹೋದ ಮಾನವರು ಎಂಬ ಹೊಸ ದಾಖಲೆ ಬರೆದಿದ್ದಾರೆ. ಕೇವಲ ದಾಖಲೆಯಷ್ಟೇ ಅಲ್ಲ, ಈ ಪ್ರವಾಸದಲ್ಲಿ ಒಂದು ಭಾವುಕ ಕ್ಷಣವೂ ಅಡಗಿದೆ.
ನಾಸಾದ 'ಓರಿಯನ್' ನೌಕೆಯಲ್ಲಿ ಹೋಗಿರುವ ನಾಲ್ವರು ಧೈರ್ಯಶಾಲಿಗಳು ರೀಡ್ ವೈಸ್‌ಮನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಜೆರೆಮಿ ಹ್ಯಾನ್ಸನ್. ಚಂದ್ರನ ಹಿಂಭಾಗದಿಂದ (Far side of the Moon) ಸುಮಾರು 4,070 ಮೈಲುಗಳಷ್ಟು ಹತ್ತಿರದಲ್ಲಿ ಹಾದುಹೋಗಿದ್ದಾರೆ. ವಿಶೇಷ ಅಂದ್ರೆ, ಇವರು ಭೂಮಿಯಿಂದ ಬರೋಬ್ಬರಿ 2,52,756 ಮೈಲುಗಳಷ್ಟು ದೂರಕ್ಕೆ ತಲುಪಿದ್ದಾರೆ. ಹಿಂದೆ 1970ರಲ್ಲಿ ಅಪೊಲೊ 13 ಮಿಷನ್ ಮಾಡಿದ್ದ ದಾಖಲೆಯನ್ನು ಈಗ ಈ ಆರ್ಟೆಮಿಸ್ ತಂಡ ಮುರಿದಿದೆ. ಭೂಮಿಯಿಂದ ಇಷ್ಟು ದೂರ ಹೋದ ಮೊದಲ ಮನುಷ್ಯರು ಇವರೇ ನೋಡಿ.
ಚಂದ್ರನ ಹಿಂಭಾಗಕ್ಕೆ ಹೋದಾಗ ಭೂಮಿಯೊಂದಿಗಿನ ಎಲ್ಲಾ ಸಂಪರ್ಕ ಕಡಿತಗೊಳ್ಳುತ್ತದೆ. ಸುಮಾರು 40 ನಿಮಿಷಗಳ ಕಾಲ ಈ ಗಗನಯಾತ್ರಿಗಳು ಕತ್ತಲೆಯಲ್ಲಿ, ಮೌನವಾಗಿ ಚಲಿಸಿದರು. ಆ ಸಮಯದಲ್ಲಿ ಅವರು ಅದ್ಭುತವಾದ ಸೂರ್ಯಗ್ರಹಣವನ್ನು ಬಾಹ್ಯಾಕಾಶದಿಂದಲೇ ವೀಕ್ಷಿಸಿದ್ದಾರೆ. ನೂರಾರು ಕಿಲೋಮೀಟರ್ ದೂರದಿಂದ ಚಂದಿರನ ಬೆಟ್ಟ ಗುಡ್ಡಗಳನ್ನು ನೋಡುವುದು ಎಷ್ಟು ರೋಮಾಂಚನಕಾರಿ ಇರಬೇಡ ಅಲ್ವಾ?
ಈ ಇಡೀ ಮಿಷನ್‌ನಲ್ಲಿ ಎಲ್ಲರ ಕಣ್ಣು ಒದ್ದೆ ಮಾಡಿದ್ದು ಒಂದು ಭಾವುಕ ನಿರ್ಧಾರ. ಈ ಮಿಷನ್‌ನ ಕಮಾಂಡರ್ ಆಗಿರುವ ರೀಡ್ ವೈಸ್‌ಮನ್ ಅವರ ಪತ್ನಿ ಕ್ಯಾರೊಲ್ ಟೇಲರ್ ವೈಸ್‌ಮನ್ ಕೆಲ ಕಾಲದ ಹಿಂದೆ ನಿಧನರಾಗಿದ್ದರು ಎನ್ನಲಾಗಿದೆ. ಚಂದ್ರನ ಮೇಲೆ ಕಂಡ ಒಂದು ಹೊಳೆಯುವ ಮತ್ತು ಸುಂದರವಾದ ಕ್ರೇಟರ್‌ಗೆ (ಕುಳಿ) ವೈಸ್‌ಮನ್ ಅವರು ತಮ್ಮ ಪತ್ನಿಯ ನೆನಪಿನಲ್ಲಿ 'ಕ್ಯಾರೊಲ್' (Carroll) ಎಂದು ಹೆಸರಿಟ್ಟಿದ್ದಾರೆ. "ಜಗತ್ತಿನ ಅತ್ಯಂತ ಎತ್ತರದ ಜಾಗದಲ್ಲಿ ನನ್ನ ಪ್ರೀತಿಯ ಪತ್ನಿಯ ಹೆಸರಿರಲಿ" ಎಂಬ ಅವರ ಈ ಆಸೆ ಇಡೀ ಮಿಷನ್‌ಗೆ ಒಂದು ಎಮೋಷನಲ್ ಟಚ್ ನೀಡಿದೆ.
ಆರ್ಟೆಮಿಸ್ II ಮಿಷನ್‌ನ ಮುಖ್ಯ ಉದ್ದೇಶವೇ ಚಂದ್ರನ ಮೇಲೆ ಮನುಷ್ಯರನ್ನು ಇಳಿಸುವ ಮುನ್ನ ದಾರಿ ಹೇಗಿದೆ ಎಂದು ಪರೀಕ್ಷಿಸುವುದು. ಈಗ ಚಂದ್ರನನ್ನು ಸುತ್ತು ಹಾಕಿ ಬಂದಿರುವ ಈ ತಂಡ, ಸುರಕ್ಷಿತವಾಗಿ ಭೂಮಿಯತ್ತ ವಾಪಸ್ ಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇವರು ಭೂಮಿಯ ಸಮುದ್ರದಲ್ಲಿ ಇಳಿಯಲಿದ್ದಾರೆ.
ನಾವು ಯಾಕೆ ಇದರ ಬಗ್ಗೆ ಹೆಮ್ಮೆ ಪಡಬೇಕು?
- ಮಹಿಳಾ ಸಾಧನೆ: ಕ್ರಿಸ್ಟಿನಾ ಕೋಚ್ ಅವರು ಚಂದ್ರನ ಅಂಗಳಕ್ಕೆ ಹೋದ ಮೊದಲ ಮಹಿಳೆಯಾಗಿ ಇತಿಹಾಸ ಬರೆದಿದ್ದಾರೆ.
- ಭವಿಷ್ಯದ ಹಾದಿ: ಈ ಮಿಷನ್ ಸಕ್ಸಸ್ ಆದ್ರೆ, ಮುಂದಿನ ದಿನಗಳಲ್ಲಿ ಸಾಮಾನ್ಯ ಮನುಷ್ಯರೂ ಚಂದ್ರನ ಪ್ರವಾಸಕ್ಕೆ ಹೋಗುವ ಕನಸು ನನಸಾಗಬಹುದು.
🚨 BREAKING: President Trump just did a SURPRISE PHONE IN to the Artemis II astronauts following their slingshot around the moon
— Nick Sortor (@nicksortor) April 7, 2026
“HELLO! A VERY special hello to Artemis II!
Today, you've made HISTORY, and made ALL of America really proud. INCREDIBLY proud!”
🚀🇺🇸 pic.twitter.com/GrxH1OCgOI
ವಿಜ್ಞಾನ ಅಂದ್ರೆ ಬರೀ ಯಂತ್ರಗಳಲ್ಲ, ಅಲ್ಲಿ ಮನುಷ್ಯನ ಭಾವನೆಗಳೂ ಇರುತ್ತವೆ ಅನ್ನೋದಕ್ಕೆ ವೈಸ್‌ಮನ್ ಅವರು ಹೆಸರಿಟ್ಟ ಆ 'ಕ್ಯಾರೊಲ್' ಕ್ರೇಟರ್ ಸಾಕ್ಷಿ. ಬಾಹ್ಯಾಕಾಶದಲ್ಲಿ ಹೊಸ ದಾಖಲೆ ಬರೆದು ಬರುತ್ತಿರುವ ನಮ್ಮ ಈ 'ಅಂತರಿಕ್ಷ ಹೀರೋ'ಗಳಿಗೆ ಒಂದು ಜೋರು ಚಪ್ಪಾಳೆ ಇರಲಿ.