ಮಾಲೋಲೋಸ್: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಕುಳಿತಿದ್ದ ಪೊಲೀಸ್ ಅಧಿಕಾರಿಗೆ ಮಹಿಳೆಯೊಬ್ಬರು ಮೊದಲು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಆದರೆ ಇದರ ಬೆನ್ನಲ್ಲೇ ಆ ಅಧಿಕಾರಿ ಎದ್ದು ನಿಂತು, ಮಹಿಳೆಯ ಮುಖ ಮತ್ತು ಹೊಟ್ಟೆಗೆ ಬಲವಾಗಿ ಗುದ್ದಿ ಆಕೆಯನ್ನು ಕೆಳಗೆ ಬೀಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಕೆಳಗೆ ಬಿದ್ದ ಮಹಿಳೆಯ ಗಂಟಲನ್ನು ಹಿಸುಕಿ ಹಿಂಸಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ತಕ್ಷಣದ ಕ್ರಮ: ಅಧಿಕಾರಿಯ ಅಮಾನತು
ಮಾಲೋಲೋಸ್ ಪೊಲೀಸ್ ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ರೊಮ್ಮೆಲ್ ಜೆನೆಬ್ಲಾಜೊ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಲ್ಲೆ ನಡೆಸಿದ ಅಧಿಕಾರಿಯನ್ನು ತಕ್ಷಣವೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆ ಅಧಿಕಾರಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ತನಿಖೆ ಆರಂಭವಾಗಿದೆ.
ಯಾವೆಲ್ಲಾ ಕೇಸ್ ದಾಖಲಾಗಿವೆ?
ಮಹಿಳಾ ದೌರ್ಜನ್ಯ ಕಾಯ್ದೆ - ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ (Anti-Violence Against Women and Their Children Act) ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಆಡಳಿತಾತ್ಮಕ ದೂರು - ಕ್ರಿಮಿನಲ್ ಕೇಸ್ ಜೊತೆಗೆ ಇಲಾಖಾ ತನಿಖೆಯೂ ನಡೆಯುತ್ತಿದ್ದು, ಆಡಳಿತಾತ್ಮಕ ದೂರನ್ನು ಕೂಡ ದಾಖಲಿಸಿಕೊಳ್ಳಲಾಗಿದೆ.
ವಜಾ ಸಾಧ್ಯತೆ - ನ್ಯಾಪೋಲ್ಕಾಮ್ (NAPOLCOM) ಕಮಿಷನರ್ ರಾಫೆಲ್ ವಿಸೆಂಟೆ ಕಲಿನಿಸನ್ ಅವರು ಇದೊಂದು ಗಂಭೀರ ಪ್ರಕರಣವಾಗಿದ್ದು, ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಪೊಲೀಸ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹ*ಲ್ಲೆ ನಡೆಸಿದ ಅಧಿಕಾರಿಯು, ತಮ್ಮ ಕೃತ್ಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. "ನಾನು ಮಾಡಿದ್ದು ತಪ್ಪು, ಆ ಕ್ಷಣದ ಆವೇಶದಲ್ಲಿ ನಾನು ಹೀಗೆ ಮಾಡಬಾರದಿತ್ತು" ಎಂದು ಅವರು ಒಪ್ಪಿಕೊಂಡಿದ್ದಾರೆ. ವಿಶೇಷವೆಂದರೆ ಈ ಅಧಿಕಾರಿ ಪೊಲೀಸ್ ಇಲಾಖೆಯಲ್ಲಿ ಪೆಟ್ರೋಲ್ ಡ್ರೈವರ್ ಆಗಿ ಕೆಲಸ ಮಾಡುವುದರ ಜೊತೆಗೆ ಸ್ಟೇಷನ್ ವ್ಲಾಗರ್ (Vlogger) ಆಗಿಯೂ ಗುರುತಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ;
ಈ ಘಟನೆಯು ಅಂತರ್ಜಾಲದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಲಿಂಗ ತಾರತಮ್ಯದ ಪ್ರಶ್ನೆ - ಮೊದಲು ಮಹಿಳೆಯೇ ಕೈ ಮಾಡಿದ್ದರೂ ಸಹ, ಕಾನೂನು ಕೇವಲ ಮಹಿಳೆಯರ ಪರವಾಗಿಯೇ ಇರುತ್ತದೆಯೇ? ಎಂದು ಕೆಲವರು ಪ್ರಶ್ನಿಸಿದ್ದಾರೆ.
ಅತಿಯಾದ ಹಿಂಸೆ - ಮಹಿಳೆ ಮೊದಲು ಹೊಡೆದಿದ್ದರೂ ಸಹ, ಒಬ್ಬ ಪೊಲೀಸ್ ಅಧಿಕಾರಿಯಾಗಿ ಮಹಿಳೆಯ ಗಂಟಲು ಹಿಸುಕಿ ಅಷ್ಟೊಂದು ಕ್ರೂರವಾಗಿ ಹ*ಲ್ಲೆ ಮಾಡಿದ್ದು ಅಕ್ಷಮ್ಯ ಎಂದು ಬಹುತೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗುವಿನ ಮೇಲಿನ ಪರಿಣಾಮ - ಇಂತಹ ಕೌಟುಂಬಿಕ ಹಿಂಸಾಚಾರದ ಘಟನೆಗಳು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಬಗ್ಗೆಯೂ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
>Social Media Influencer Woman (Digital Creator)
— Ambar (@Ambar_SIFF_MRA) May 13, 2026
>From Malolos, Bulacan province, Philippines
>Started a physical fight by repeatedly slapping and assaulting her policeman boyfriend
>Argument began over him not sharing his phone location
>Boyfriend reacted by punching her,… pic.twitter.com/Sc2WVcFLMU
ಕಾನೂನನ್ನು ಕೈಗೆತ್ತಿಕೊಳ್ಳುವವರು ಯಾರೇ ಆದರೂ ಶಿಕ್ಷೆ ತಪ್ಪಿದ್ದಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸದ್ಯ ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಅಧಿಕಾರಿಗೆ ಎಂತಹ ಶಿಕ್ಷೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.