Mar 1, 2026 Languages : ಕನ್ನಡ | English

ದೇವನಹಳ್ಳಿಯ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ - ಸಾಥ್ ನೀಡಿದ ಪತ್ನಿ ಅರೆಸ್ಟ್!!

ಮಕ್ಕಳು ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಆಸೆಯಿಂದ ಪೋಷಕರು ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ ವಸತಿ ಶಾಲೆಗಳಿಗೆ ಕಳುಹಿಸುತ್ತಾರೆ. ಆದರೆ, ರಕ್ಷಣೆ ನೀಡಬೇಕಾದ ಶಾಲೆಯ ಮಾಲೀಕನೇ ಮಕ್ಕಳ ಮೇಲೆ ಕಾಮದ ದೃಷ್ಟಿ ಬೀರಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಈ ನೀಚ ಕೃತ್ಯಕ್ಕೆ ಆತನ ಪತ್ನಿ ಕೂಡ ಸಾಥ್ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ದೇವನಹಳ್ಳಿ ಪೊಲೀಸರು ಆರೋಪಿ ದಂಪತಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ.

ದೇವನಹಳ್ಳಿ ಶಾಲಾ ಮಾಲೀಕನ ಪೋಕ್ಸೋ ಅಡಿ ಬಂಧನ
ದೇವನಹಳ್ಳಿ ಶಾಲಾ ಮಾಲೀಕನ ಪೋಕ್ಸೋ ಅಡಿ ಬಂಧನ

ಘಟನೆಯ ಹಿನ್ನೆಲೆ ಮತ್ತು ಆರೋಪಿಗಳ ಕ್ರೌರ್ಯ

ದೇವನಹಳ್ಳಿಯ ಖಾಸಗಿ ವಸತಿ ಶಾಲೆಯ ಮಾಲೀಕ ಧನಂಜಯ್ ಎಂಬಾತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಶಾಲೆಯ ಆವರಣದಲ್ಲೇ ವಾರ್ಡನ್ ರೂಮ್ ಅನ್ನು ಸುಸಜ್ಜಿತವಾಗಿ ಮಾಡಿಕೊಂಡಿದ್ದ ಈತ, ಅದೇ ಕೊಠಡಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.

ಈ ವಿಚಾರ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಧನಂಜಯ್ ಪತ್ನಿ ಶೈಲಜಾ, ಬಾಲಕಿಯರಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಳು. ಅಷ್ಟೇ ಅಲ್ಲದೆ, ಗಂಡನ ಕೃತ್ಯವನ್ನು ಮುಚ್ಚಿಹಾಕಲು ಮತ್ತು ಬಾಲಕಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಉದ್ದೇಶದಿಂದ ಅವರಿಗೆ ಪ್ರತಿದಿನ ಪರಂಗಿ ಹಣ್ಣನ್ನು (ಪಪ್ಪಾಯ) ತಿನ್ನಿಸುತ್ತಿದ್ದಳು ಎಂಬ ಆಘಾತಕಾರಿ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಮಾರು 15 ದಿನಗಳ ಕಾಲ ಮಕ್ಕಳನ್ನು ಪೋಷಕರನ್ನು ಭೇಟಿ ಮಾಡದಂತೆ ಅಥವಾ ಫೋನ್‌ನಲ್ಲಿ ಮಾತನಾಡದಂತೆ ಶಾಲೆಯಲ್ಲೇ ಕೂಡಿ ಹಾಕಲಾಗಿತ್ತು.

ರಹಸ್ಯ ಬಯಲಾಗಿದ್ದು ಹೇಗೆ?

ಫೆಬ್ರವರಿ 28ರಂದು ಧೈರ್ಯ ಮಾಡಿದ ಮಕ್ಕಳು, ಶಾಲೆಯ ಶಿಕ್ಷಕಿಯೊಬ್ಬರ ಫೋನ್ ಪಡೆದು ಪೋಷಕರಿಗೆ ಕರೆ ಮಾಡಿ ಅಳುತ್ತಾ ತಮಗಾಗುತ್ತಿರುವ ದೌರ್ಜನ್ಯವನ್ನು ವಿವರಿಸಿದ್ದಾರೆ. ತಕ್ಷಣವೇ ಶಾಲೆಗೆ ಧಾವಿಸಿದ ಪೋಷಕರು ಮಕ್ಕಳ ಸ್ಥಿತಿ ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಧನಂಜಯ್ ಮತ್ತು ಶೈಲಜಾಳನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ನಡೆಯುತ್ತಿದ್ದ ಹಾಸ್ಟೆಲ್

ತನಿಖೆಯ ವೇಳೆ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ಈ ವಸತಿ ಶಾಲೆಯಲ್ಲಿ ಬಾಲಕಿಯರ ಹಾಸ್ಟೆಲ್ ನಡೆಸಲು ಯಾವುದೇ ಅಧಿಕೃತ ಅನುಮತಿ ಪಡೆದಿರಲಿಲ್ಲ. ಅಕ್ರಮವಾಗಿ ಹಾಸ್ಟೆಲ್ ನಡೆಸುತ್ತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು (BEO) ಮೌನವಾಗಿದ್ದದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, "ಇದು ನಮ್ಮ ವ್ಯಾಪ್ತಿಗೆ ಬರಲ್ಲ" ಎಂದು ಜಾರಿಕೊಳ್ಳುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶಾಲೆಯ ಮಾಲೀಕನ ಕೃತ್ಯದ ವಿರುದ್ಧ ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.