ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಬಹುಕಾಲದ ಗೆಳತಿ ಸಾನಿಯಾ ಚಂದೋಕ್ ಅವರೊಂದಿಗೆ ಅರ್ಜುನ್ ತೆಂಡೂಲ್ಕರ್ ಶೀಘ್ರದಲ್ಲೇ ವಿವಾಹವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತೆಂಡೂಲ್ಕರ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಮದುವೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಕುಟುಂಬ ಗಣ್ಯರನ್ನು ಭೇಟಿ ಮಾಡಿ ಆಹ್ವಾನ ನೀಡಲು ಆರಂಭಿಸಿದ್ದು, ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಕುಟುಂಬ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮದುವೆ ಆಮಂತ್ರಣ ಪತ್ರಿಕೆ ನೀಡಿದೆ. ಪ್ರಧಾನಿ ಮೋದಿ ಮಾತ್ರವಲ್ಲದೆ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಪ್ರಮುಖ ರಾಜಕೀಯ ಗಣ್ಯರಿಗೂ ಮದುವೆಗೆ ಆಹ್ವಾನ ನೀಡಲಾಗಿದೆ.
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಕ್ಷಣವನ್ನು ಸಚಿನ್ ತೆಂಡೂಲ್ಕರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಅವಕಾಶ ಸಿಕ್ಕಿರುವುದು ಗೌರವದ ವಿಷಯ ಎಂದು ಸಚಿನ್ ತಿಳಿಸಿದ್ದಾರೆ. ಯುವ ಜೋಡಿಗೆ ಸಲಹೆ, ಮಾರ್ಗದರ್ಶನ ಹಾಗೂ ಆಶೀರ್ವಾದ ನೀಡಿದ ಪ್ರಧಾನಿಗೆ ಧನ್ಯವಾದಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕೂಡ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಮಹೋತ್ಸವ 2026ರ ಮಾರ್ಚ್ 5ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಮದುವೆಗೆ ಕುಟುಂಬದ ಆಪ್ತರು, ಸಚಿನ್ ತೆಂಡೂಲ್ಕರ್ ಅವರ ಹಳೆಯ ಕ್ರಿಕೆಟ್ ಸಹ ಆಟಗಾರರು, ಚಿತ್ರರಂಗದ ಸ್ನೇಹಿತರು ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಮದುವೆಯನ್ನು ಖಾಸಗಿ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಸಲು ಕುಟುಂಬ ತಯಾರಿ ನಡೆಸುತ್ತಿದೆ.
ಅರ್ಜುನ್ ಮದುವೆಯಾಗುತ್ತಿರುವ ಸಾನಿಯಾ ಚಂದೋಕ್ ಅವರು ಖ್ಯಾತ ಉದ್ಯಮ ಕುಟುಂಬಕ್ಕೆ ಸೇರಿದವರು. ಅವರು ಗ್ರಾವಿಸ್ ಗ್ರೂಪ್ ಸಂಸ್ಥೆ ನಡೆಸುತ್ತಿರುವ ಉದ್ಯಮಿ ರವಿ ಘೈ ಅವರ ಮೊಮ್ಮಗಳಾಗಿದ್ದಾರೆ. ಗ್ರಾವಿಸ್ ಗ್ರೂಪ್ ಅಡಿಯಲ್ಲಿ ಬ್ಲೂಕ್ಲಿನ್ ಕ್ರೀಮರಿ, ಬಾಸ್ಕಿನ್ ರಾಬಿನ್ಸ್ ಐಸ್ ಕ್ರೀಂ ಸೇರಿದಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಾನಿಯಾ ಶಿಕ್ಷಣ ಮತ್ತು ಉದ್ಯಮ ವಲಯದಲ್ಲೂ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.
ಇತ್ತ ಅರ್ಜುನ್ ತೆಂಡೂಲ್ಕರ್ ಅವರ ಕ್ರಿಕೆಟ್ ಪಯಣದ ವಿಚಾರಕ್ಕೆ ಬಂದರೆ, ಅವರು ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಅರ್ಜುನ್, ಸದ್ಯ ಗೋವಾ ತಂಡದ ಪರವಾಗಿ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ, ಕ್ರಿಕೆಟ್ ಕರಿಯರ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಇನ್ನೂ ದೊರಕಿಲ್ಲ. ಏರಿಳಿತಗಳ ನಡುವೆಯೇ ಸಾಗುತ್ತಿರುವ ಅವರ ಕ್ರಿಕೆಟ್ ಜೀವನದ ಜೊತೆಗೆ ಇದೀಗ ವೈವಾಹಿಕ ಜೀವನದ ಹೊಸ ಆರಂಭಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.