ಭಾರತದ ವಿದೇಶಾಂಗ ನೀತಿ ಹಾಗೂ ಜಾಗತಿಕ ರಾಜತಾಂತ್ರಿಕ ಪಾತ್ರದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ನಡುವೆ ಹೊಸ ರಾಜಕೀಯ ವಾಕ್ಸಮರ ಶುರುವಾಗಿದು . ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಟೀಕಿಸಿರುವ ರಾಹುಲ್ ಗಾಂಧಿ, ಜಾಗತಿಕ ರಾಜಕೀಯದಲ್ಲಿ ಭಾರತ ಹಿಂದೆ ಉಳಿದಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಅವರನ್ನು 'ಪಾಕಿಸ್ತಾನದ ಅಭಿಮಾನಿ' ಎಂದು ಟೀಕಿಸಿದ್ದಾರೆ
ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಭಾರತ ಜಾಗತಿಕ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಬೇಕಿತ್ತು. ಆದರೆ ಪ್ರಸ್ತುತ ಭಾರತ ಪ್ರಮುಖ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಪ್ರಭಾವ ಬೀರುವ ಸ್ಥಾನದಿಂದ ಹಿಂದೆ ಸರಿದಿದೆ ಎಂದು ಅಭಿಪ್ರಾಯಪಟ್ಟರು.
ಭಾರತದ ಗಾತ್ರ, ಆರ್ಥಿಕ ಸಾಮರ್ಥ್ಯ ಹಾಗೂ ಜಾಗತಿಕ ಸಂಬಂಧಗಳನ್ನು ಗಮನಿಸಿದರೆ, ಪ್ರಮುಖ ರಾಷ್ಟ್ರಗಳ ನಡುವಿನ ಮಾತುಕತೆಗಳಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕು. ಆದರೆ ಭಾರತ ಈಗ ಜಾಗತಿಕ ರಾಜಕೀಯದಲ್ಲಿ 'ಸೈಡ್ ಪ್ಲೇಯರ್' ಆಗಿ ಉಳಿದಿದೆ ಎಂದು ಅವರು ಟೀಕಿಸಿದರು. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಉಲ್ಲೇಖಿಸಿದ ರಾಹುಲ್, ಇಂತಹ ರಾಜತಾಂತ್ರಿಕ ಚಟುವಟಿಕೆಗಳಲ್ಲಿ ಭಾರತ ಸಕ್ರಿಯವಾಗಿ ಕಾಣಿಸಿಕೊಳ್ಳದಿರುವುದು ಆಶ್ಚರ್ಯಕರ ಎಂದು ಹೇಳಿದರು. ಭಾರತದ ವಿದೇಶಾಂಗ ನೀತಿ ಸ್ವತಂತ್ರವಾಗಿರಬೇಕು ಮತ್ತು ದೇಶದ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂಬುದು ಅವರ ವಾದವಾಗಿತ್ತು
'ರಾಜಿ ಮಾಡಿಕೊಂಡ ಪ್ರಧಾನಿ' ಎಂದು ಮೋದಿ ವಿರುದ್ಧ ಟೀಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಭೆಯ ಚಿತ್ರವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ಟೀಕೆ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಭಾರತದ ಪ್ರಧಾನಿ ಕೂಡ ಇಂತಹ ಪ್ರಮುಖ ಜಾಗತಿಕ ನಾಯಕರೊಂದಿಗೆ ನಡೆಯುವ ಮಾತುಕತೆಯ ವೇದಿಕೆಯಲ್ಲಿ ಭಾಗವಹಿಸುತ್ತಿದ್ದರು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ ಅವರು, 'ರಾಜಿ ಮಾಡಿಕೊಂಡ ಪ್ರಧಾನಿ ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ' ಎಂದು ಟೀಕಿಸಿದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಹುಲ್ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ
ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಬಿಜೆಪಿ ವಕ್ತಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿದೇಶಿ ನೆಲದಲ್ಲಿ ಭಾರತದ ಜಾಗತಿಕ ಸ್ಥಾನಮಾನವನ್ನು ಕಡಿಮೆ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಅವರು ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಖಂಡಿಸಿ, ಭಾರತವನ್ನು ಜಾಗತಿಕ ಮಟ್ಟದಲ್ಲಿ ದುರ್ಬಲ ರಾಷ್ಟ್ರದಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.
ಇದೇ ವೇಳೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ಪಾಕಿಸ್ತಾನದ ವಿಚಾರದಲ್ಲಿ ಅವರು ಪದೇಪದೇ ಮಾತನಾಡುತ್ತಿರುವುದನ್ನು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು 'ಪಾಕಿಸ್ತಾನದ ಅಭಿಮಾನಿ' ಎಂದು ವ್ಯಂಗ್ಯವಾಡಿದ್ದು, ಅವರ ವಿದೇಶಾಂಗ ನೀತಿ ಕುರಿತ ಹೇಳಿಕೆಗಳನ್ನು ಬಿಜೆಪಿ ಖಂಡಿಸಿದೆ.
ವಿದೇಶಾಂಗ ನೀತಿ ವಿಚಾರವಾಗಿ ರಾಜಕೀಯ ಚರ್ಚೆ
ಭಾರತದ ವಿದೇಶಾಂಗ ನೀತಿ, ಅಮೆರಿಕ–ಚೀನಾ–ರಷ್ಯಾ ಸಂಬಂಧಗಳು, ಪಾಕಿಸ್ತಾನದ ರಾಜತಾಂತ್ರಿಕ ಚಟುವಟಿಕೆಗಳು ಹಾಗೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾತ್ರದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾದ-ಪ್ರತಿವಾದ ಮುಂದುವರಿದಿದೆ.
ರಾಹುಲ್ ಗಾಂಧಿ ಭಾರತ ಇನ್ನಷ್ಟು ಸ್ವತಂತ್ರ ಹಾಗೂ ಸಕ್ರಿಯ ರಾಜತಾಂತ್ರಿಕ ಪಾತ್ರ ವಹಿಸಬೇಕೆಂದು ಒತ್ತಾಯಿಸಿದರೆ, ಬಿಜೆಪಿ ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಸಮರ್ಥಿಸಿಕೊಂಡಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗುವ ಸಾಧ್ಯತೆಯಿದೆ.
Comments