Thursday, Nov 26, 2026
|
Advertisement

25 ಲಕ್ಷ ಸರ್ಕಾರಿ ಉದ್ಯೋಗ, ನಿರುದ್ಯೋಗಿ ಪದವೀಧರರಿಗೆ ₹5,000 ಭತ್ಯೆ! 2027ರ ಚುನಾವಣೆಗೆ ಅಖಿಲೇಶ್ ಯಾದವ್ ಭರ್ಜರಿ ಪ್ರಣಾಳಿಕೆ!!

ಉತ್ತರ ಪ್ರದೇಶ ಚುನಾವಣೆ ಮುನ್ನವೇ ಉತ್ತರ ಪ್ರದೇಶದ ರಾಜಕಾರಣದಲ್ಲಿ ತುಂಬಾ ಚರ್ಚೆ ಉಂಟುಮಾಡಿದೆ ಇಂದು ಲಕ್ನೋ ನಲ್ಲಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲೇಶ್ ಯಾದವ್ ರವರು ತುಂಬಾ ಫರವಸೆ ಕೊಟ್ಟಿದಾರೆ. ಇಂದು ಲಖನೌನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲೇಶ್ ಯಾದವ್ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಸಂವಿಧಾನ ದಿನದಂದೇ ಪ್ರಣಾಳಿಕೆ ಬಿಡುಗಡೆಯಾಗಿರುವುದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಚ್ಛೇ ದಿನ್ ಆಯೇ ನಹೀಂ, ಬುರೇ ದಿನ್ ಜಾನೇ ವಾಲೇ ಹೈಂ” (ಒಳ್ಳೆಯ ದಿನಗಳು ಬರಲೇ ಇಲ್ಲ, ಆದರೆ ಕೆಟ್ಟ ದಿನಗಳು ಮುಗಿಯಲಿವೆ) ಎಂದು ಹೇಳುವ ಮೂಲಕ ಬಿಜೆಪಿ 2014ರ ಲೋಕಸಭೆ ಚುನಾವಣೆಯಲ್ಲಿ ಬಳಸಿದ್ದ ‘ಅಚ್ಛೇ ದಿನ್ ಆನೇ ವಾಲೇ ಹೈಂ’ ಘೋಷಣೆಗೆ ಪ್ರತಿಕ್ರಿಯೆ ನೀಡಿದರು.

ಅಖಿಲೇಶ್ ಯಾದವ್ | Photo Credit: https://x.com/samajwadiparty
ಅಖಿಲೇಶ್ ಯಾದವ್ | Photo Credit: https://x.com/samajwadiparty

ಜನರ ನಿರೀಕ್ಷೆಗಳನ್ನು ಈಡೇರಿಸುವುದು ಪಕ್ಷದ ಬದ್ಧತೆಯಾಗಿದೆ. ವಿಶೇಷವಾಗಿ ಜೆನ್‌ಝಡ್ ಮತ್ತು ಜೆನ್ ಆಲ್ಫಾ ಪೀಳಿಗೆಯ ಆಶಯಗಳಿಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Advertisement

ಐದು ವರ್ಷಗಳಲ್ಲಿ 25 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ

ಯುವಜನರ ಉದ್ಯೋಗ ಸಮಸ್ಯೆಯನ್ನು ಪ್ರಮುಖವಾಗಿ ಪರಿಗಣಿಸಿರುವ ಸಮಾಜವಾದಿ ಪಕ್ಷ, ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ 25 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದೆ. ಉದ್ಯೋಗ ಸಿಗುವವರೆಗೆ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ₹5,000 ನಿರುದ್ಯೋಗ ಭತ್ಯೆ ನೀಡುವ ಪ್ರಸ್ತಾವನೆಯನ್ನೂ ಪ್ರಕಟಿಸಿದೆ.

ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಪಕ್ಷ ಹೇಳಿದೆ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವುದು ಹಾಗೂ ನಿಗದಿತ ಶೈಕ್ಷಣಿಕ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸುವುದು ಕೂಡ ಪ್ರಣಾಳಿಕೆಯ ಪ್ರಮುಖ ಭರವಸೆಗಳಾಗಿವೆ.

ಶಿಕ್ಷಣ ಕ್ಷೇತ್ರಕ್ಕೂ ಹಲವು ಭರವಸೆಗಳು

ಶಿಕ್ಷಣ ಕ್ಷೇತ್ರದಲ್ಲಿ ಉಚಿತ ಶಾಲಾ ಶಿಕ್ಷಣ ಒದಗಿಸುವುದಾಗಿ ಸಮಾಜವಾದಿ ಪಕ್ಷ ತಿಳಿಸಿದೆ. ಮುಚ್ಚಲ್ಪಟ್ಟಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮತ್ತೆ ತೆರೆಯುವ ಪ್ರಸ್ತಾವನೆಯನ್ನೂ ಮುಂದಿಟ್ಟಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಾ ಮಿತ್ರರ ವೇತನ ಹೆಚ್ಚಳ ಮತ್ತು ಅವರಿಗೆ ಕಾಯಂ ಉದ್ಯೋಗ ನೀಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಇದರ ಜೊತೆಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಗ್ರಾಮಗಳಲ್ಲಿ ವೈ-ಫೈ ಸಂಪರ್ಕ, ಬೀದಿ ದೀಪಗಳು, ನಿರಂತರ ವಿದ್ಯುತ್ ಪೂರೈಕೆ ಮತ್ತು ಸುಸಜ್ಜಿತ ರಸ್ತೆಗಳ ವ್ಯವಸ್ಥೆ ಕಲ್ಪಿಸುವುದಾಗಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.

Advertisement

ಮಹಿಳೆಯರಿಗೆ ವಾರ್ಷಿಕ ₹40 ಸಾವಿರ ನೆರವು

ಮಹಿಳಾ ಕಲ್ಯಾಣ ಯೋಜನೆಗಳಿಗೂ ಪ್ರಣಾಳಿಕೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಮಹಿಳೆಯರಿಗೆ ಪ್ರತಿ ವರ್ಷ ₹40,000 ಆರ್ಥಿಕ ನೆರವು ನೀಡುವುದಾಗಿ ಅಖಿಲೇಶ್ ಯಾದವ್ ಘೋಷಿಸಿದ್ದಾರೆ. ರಾಜ್ಯದ ಗೌರವಾನ್ವಿತ ಪ್ರಶಸ್ತಿಯಾದ ‘ಯಶ್ ಭಾರತಿ’ ಪ್ರಶಸ್ತಿಯನ್ನು ಮತ್ತೆ ಜಾರಿಗೆ ತರುವುದಾಗಿಯೂ ತಿಳಿಸಿದ್ದಾರೆ.

ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಕ್ರಮಗಳು, ತ್ವರಿತ ನ್ಯಾಯ ಒದಗಿಸಲು ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ ಹಾಗೂ ಉಚಿತ ಆರೋಗ್ಯ ಸೇವೆ ಮತ್ತು ಆಂಬುಲೆನ್ಸ್ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.

ಹಳೆಯ ಪಿಂಚಣಿ ಯೋಜನೆ ಮತ್ತೆ ಜಾರಿಗೆ ತರುವ ಭರವಸೆ

ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿರುವ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿಗೆ ತರುವುದಾಗಿ ಸಮಾಜವಾದಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡುವ ಪ್ರಸ್ತಾವನೆಯನ್ನೂ ಸೇರಿಸಲಾಗಿದೆ.

ಮಹಿಳೆಯರು, ಜಿಲ್ಲೆಗಳು ಮತ್ತು ನಗರಗಳಿಗೆ ಪ್ರತ್ಯೇಕ ಪ್ರಣಾಳಿಕೆ

ರಾಜ್ಯಮಟ್ಟದ ಪ್ರಣಾಳಿಕೆಯ ಜೊತೆಗೆ ಪ್ರತಿ ಜಿಲ್ಲೆ ಮತ್ತು ನಗರಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಪ್ರಣಾಳಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಮಹಿಳೆಯರಿಗಾಗಿ ‘ಆಧಿ ಆಬಾದಿ’ ಹೆಸರಿನಲ್ಲಿ ಮತ್ತೊಂದು ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿಯೂ ಅವರು ಘೋಷಿಸಿದ್ದಾರೆ. ಸ್ಥಳೀಯ ಸಮಸ್ಯೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಇದರ ಉದ್ದೇಶವಾಗಿದೆ.

ಎಸ್‌ಪಿ-ಕಾಂಗ್ರೆಸ್ ಮೈತ್ರಿಯಲ್ಲಿ ಸೀಟು ಹಂಚಿಕೆ ಭಿನ್ನಾಭಿಪ್ರಾಯ

2027ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿವೆ. ಕಾಂಗ್ರೆಸ್ ಜೊತೆ ಮಾತುಕತೆ ಮುಂದುವರಿದಿರುವಾಗಲೇ ಸಮಾಜವಾದಿ ಪಕ್ಷ ಮಂಗಳವಾರ ಐವರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರಿಂದ ಟೀಕೆ ವ್ಯಕ್ತವಾಗಿದ್ದು, ಎರಡೂ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ.

ಒಟ್ಟಿನಲ್ಲಿ, ಉದ್ಯೋಗ, ಶಿಕ್ಷಣ, ಮಹಿಳಾ ಕಲ್ಯಾಣ, ರೈತರ ಹಿತಾಸಕ್ತಿ ಮತ್ತು ಸಾಮಾಜಿಕ ನ್ಯಾಯವನ್ನು ಕೇಂದ್ರವಾಗಿಟ್ಟುಕೊಂಡು ಸಮಾಜವಾದಿ ಪಕ್ಷ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಈ ಭರವಸೆಗಳು ಮತದಾರರನ್ನು ಎಷ್ಟರ ಮಟ್ಟಿಗೆ ಸೆಳೆಯಲಿವೆ ಮತ್ತು ಚುನಾವಣೆಯಲ್ಲಿ ಪಕ್ಷದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿವೆ ಎಂಬುದು ಮುಂದಿನ ದಿನಗಳಲ್ಲಿ ಗಮನ ಸೆಳೆಯಲಿದೆ.

Comments